Cini NewsMovie ReviewSandalwood

ಕಲೆ ಹಾಗೂ ಕೊಲೆಯ ಸುಳಿಯಲ್ಲಿ ಬದುಕು (ರಾನಿ ಚಿತ್ರವಿಮರ್ಶೆ – ರೇಟಿಂಗ್ : 3.5 /5)

ಚಿತ್ರ : ರಾನಿ
ನಿರ್ದೇಶಕ : ಗುರುತೇಜ್ ಶೆಟ್ಟಿ
ನಿರ್ಮಾಪಕರು : ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗಡೆ
ಸಂಗೀತ : ಮಣಿಕಾಂತ್ ಕದ್ರಿ
ಛಾಯಾಗ್ರಾಹಕ : ರಾಘವೇಂದ್ರ .ಬಿ. ಕೋಲಾರ
ತಾರಾಗಣ : ಕಿರಣ್ ರಾಜ್ , ರಾಧ್ಯ , ಸಮೀಕ್ಷ , ರವಿಶಂಕರ್, ಅಪೂರ್ವ, ಯಶ್ ಶೆಟ್ಟಿ, ಕರಿಸುಬ್ಬು , ಉಗ್ರಂ ಮಂಜು, ಅನಿಲ್ ಯಾದವ್ , ಮಠ ಗುರುಪ್ರಸಾದ್ , ಧರ್ಮಣ್ಣ , ಮೈಕೋ ನಾಗರಾಜ್ , ಸುಜಯ್ ಶಾಸ್ತ್ರಿ ಹಾಗೂ ಮುಂತಾದವರು…

ಜೀವನದಲ್ಲಿ ಪ್ರತಿಯೊಬ್ಬರು ಕನಸು , ಆಸೆಗಳನ್ನ ಕಟ್ಟಿಕೊಂಡು ಬದುಕು ಸಾಗಿಸುವುದು ಸರ್ವೇ ಸಾಮಾನ್ಯ. ಅಂತದ್ದೇ ಒಬ್ಬ ಹುಡುಗ ಬೆಳ್ಳಿ ಪರದೆ ಮೇಲೆ ಹೀರೋ ಆಗಿ ಮಿಂಚುವ ಕನಸು, ತನ್ನ ಚಿತ್ರಕಲೆಯ ಮೂಲಕ ಪ್ರಸಿದ್ಧಿಯನ್ನು ಪಡೆಯಬೇಕೆಂಬ ಎಂಬ ಆಸೆಯನ್ನು ಹೊಂದಿರುವ ಹುಡುಗಿ. ಇದರ ನಡುವೆ ಎದುರಾಗುವ ವಿಧಿಯ ಆಟ ಏನೇನೆಲ್ಲಾ ಸೃಷ್ಟಿ ಮಾಡಿ ಬದುಕಿಗೆ ಯಾವ ದಿಕ್ಕನ್ನು ತೋರಿಸಿದೆ ಎಂಬುದನ್ನು ಬಹಳ ಕುತೂಹಲಕಾರಿ ಯಾಗಿ ತೆರೆಯ ಮೇಲೆ ತಂದಿರುವಂತಹ ಚಿತ್ರ “ರಾನಿ”.

ಸಿನಿಮಾರಂಗದಲ್ಲಿ ಸ್ಟಾರ್ ನಟನಾಗಬೇಕೆಂಬ ಮಹಾದಾಸೇ ಹೊಂದಿರುವ ರಾಘವ(ಕಿರಣ್ ರಾಜ್) ತನ್ನ ಮನೆಯಲ್ಲೇ ಜಿಮ್ ವರ್ಕೌಟ್ ಮಾಡುತ್ತಾ ಆಕ್ಷನ್ , ಡಾನ್ಸ್ ಜೊತೆಗೆ ನಟನ ತರಬೇತಿಯನ್ನು ಗುರು (ಗುರುಪ್ರಸಾದ್) ಬಳಿ ತನ್ನ ಗೆಳೆಯರಾದ ಉಮೇಶ , ರಮೇಶ , ಗೆಳತಿ ಅಂಜಲಿ (ರಾಧ್ಯ) ಜೊತೆ ಕಲಿಯುತ್ತಾನೆ.

ರೌಡಿಸಂ ಅಡ್ಡದಲ್ಲಿ ತನ್ನದೇ ಹವಾ ಮೇಂಟೈನ್ ಮಾಡುತ್ತಾ
ಅಂಡರ್ವರ್ಲ್ಡ್ ಲಿಂಕ್ ಇರುವ ಕಾಳಿ (ರವಿಶಂಕರ್) ಪುತ್ರ ಗೌಳಿ (ಯಶ್ ಶೆಟ್ಟಿ) ಗೆ ರಧ್ಯಾ ಮೇಲೆ ಕಣ್ಣು , ಅದಕ್ಕೆ ಅವನ ಗೆಳೆಯ (ಅನಿಲ್ ಯಾದವ್) ಸಾಥ್. ಇನ್ನು ಜೈನ ಕುಟುಂಬದಲ್ಲಿ ಬೆಳೆದಂತ ಮುದ್ದಾದ ಸುಂದರಿ ಸುಪ್ರೀತಾ (ಸಮೀಕ್ಷ) ತನ್ನ ಚಿತ್ರಕಲೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಾಳೆ. ಸದಾ ತಾಳ್ಮೆ , ನೆಮ್ಮದಿ ಮುಖ್ಯ ಎಂಬುವ ಕುಟುಂಬ. ಇದೆಲ್ಲದರ ಹಿಂದೆ ಆರಂಭದಿಂದ ಫ್ಲ್ಯಾಶ್ ಬ್ಯಾಕ್ ಹೇಳುತ್ತಾ ಹೋಗುತ್ತದೆ.

ಕಲಾವಿದರಾಗಬೇಕೆಂಬ ಆಸೆ ಕಾಣುವ ರಾಘವ ಹಾಗೂ ಅಂಜಲಿ ನಡುವೆ ಪ್ರೀತಿ ಚಿಗುರುವಾಗಲೇ ಗೌಳಿಯ ಕುತಂತ್ರದಿಂದ ಕೊಲೆ ಮಾಡಿ ಜೈಲಿ ಸೇರುವ ಪರಿಸ್ಥಿತಿ ರಾಘವನಿಗೆ ಎದುರಾಗುತ್ತದೆ. ರೌಡಿ ಪಟ್ಟ ಪಡೆಯುವ ರಾಘವ ರಾನಿಯಾಗಿ ಹೊರಬಂದ ಮೇಲೆ ಕಾಳಿ ಗ್ಯಾಂಗ್ ಆತನನ್ನು ಕೊಲ್ಲಲು ಮುಂದಾದಾಗ ಸುಪ್ರೀತಾ ರಾನಿ ಪ್ರಾಣವನ್ನು ಉಳಿಸಲು ಹೋಗಿ ತಾನು ತೊಂದರೆ ಸಿಕ್ಕಿಹಾಕಿಕೊಳ್ಳುತ್ತಾಳೆ.

ಕಳ್ಳರ ಅಟ್ಟಹಾಸವನ್ನು ಮಟ್ಟ ಹಾಕಲು ಬರುವ ಪೊಲೀಸ್ ಅಧಿಕಾರಿ (ಅಪೂರ್ವ)ಗೆ ಕೆಲವು ಸತ್ಯ ಗೊತ್ತಿದ್ದರೂ ಸಮಯಕ್ಕಾಗಿ ಕಾಯುತ್ತಾಳೆ. ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಆಸೆ , ಕನಸು , ದ್ವೇಷದ ಸುಳಿಯಲ್ಲಿ ಹಲವು ರೋಚಕ ತಿರುವುಗಳನ್ನ ಪಡೆಯುತ್ತಾ ಕೊನೆಯ ಹಂತಕ್ಕೆ ಬಂದು ನಿಲ್ಲುತ್ತದೆ.
ರಾಘವ ಕೊಂದಿದ್ದು ಯಾರನ್ನು…
ಅಂಜಲಿ ಏನದಳು…
ಸುಪ್ರೀತಾ ಆಸೆ , ಪ್ರೀತಿ ಏನಾಯ್ತು…
ರಾನಿ ಹೀರೋ ಆಗ್ತಾನ…
ಕ್ಲೈಮಾಕ್ಸ್ ಉತ್ತರ ಏನು…
ಈ ಎಲ್ಲಾ ವಿಚಾರವನ್ನು ತಿಳಿದುಕೊಳ್ಳಬೇಕಾದರೆ ಒಮ್ಮೆ ರಾನಿ ಚಿತ್ರ ನೋಡಬೇಕು.

ನಿರ್ದೇಶಕ ಗುರುತೇಜ್ ಶೆಟ್ಟಿ ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ವಿಭಿನ್ನವಾಗಿದ್ದು , ವಿಧಿಯ ಆಟದ ಮುಂದೆ ಮನುಷ್ಯನ ಆಸೆ , ಆಕಾಂಕ್ಷೆ ಎಲ್ಲವೂ ಶೂನ್ಯ ಎಂಬುವುದನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಚಿತ್ರಕಥೆಯ ಓಟ ಇನ್ನಷ್ಟು ವೇಗ ಅಗತ್ಯವಾಗಿದ್ದು, ಪೋಲೀಸ್ ಇಲಾಖೆಯ ಪಾತ್ರಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿತ್ತು ಅನಿಸುತ್ತದೆ. ಲಾಜಿಕ್ ಹೊರತಾಗಿ ಚಿತ್ರ ಗಮನ ಸೆಳೆಯುವಂತಿದೆ.

ನಿರ್ಮಾಪಕರ ಖರ್ಚು ತೆರೆಯ ಮೇಲೆ ಕಾಣುತ್ತಿದೆ. ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕೆ ಪೂರಕವಾಗಿ ಸಾಗಿದ್ದು, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ಅಬ್ಬರಿಸಿದೆ. ರಾಘವೇಂದ್ರ. ಬಿ. ಕೋಲಾರ ಕ್ಯಾಮೆರಾ ಕೈಚಳಕ , ಉಮೇಶ್ ಸಂಕಲನ ಹಾಗೂ ಆಕ್ಷನ್ ಸನ್ನಿವೇಶಗಳು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಕಿರಣ್ ರಾಜ್ ಪಾತ್ರಕ್ಕೆ ಜೀವತುಂಬಿ ನೈಜ್ಯವಾಗಿ ಅಭಿನಯಿಸಿದ್ದು , ಎರಡು ಶೇಡ್ ಗಳಲ್ಲಿ ರಾಘವನ ಹವಾ , ಭಾವ ಮನಸ್ಸನ್ನು ಮುಟ್ಟುತ್ತದೆ.

ರಾನಿಯ ಗತ್ತು ಇನ್ನಷ್ಟು ಬೇಕಿತ್ತು ಅನಿಸುತ್ತದೆ. ಆಕ್ಷನ್ ದೃಶ್ಯವನ್ನು ಭರ್ಜರಿಯಾಗಿ ನಿಭಾಯಿಸಿದ್ದು , ಭರವಸೆಯ ನಟ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ನಟಿ ಸಮೀಕ್ಷಾ ಚಿತ್ರಕಲೆಯ ಪ್ರತಿಭೆಯಾಗಿ ಸೌಮ್ಯ ಸ್ವಭಾವದ ಮೂಲಕ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಟಿ ರಾಧ್ಯ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಅಪೂರ್ವ ತರಬೇತಿ ಇನ್ನೂ ಹೆಚ್ಚು ಮಾಡಿಕೊಳ್ಳಬೇಕಿತ್ತು ಅನಿಸುತ್ತದೆ. ಇನ್ನು ಎಂದಿನಂತೆ ರವಿಶಂಕರ್ ತಮ್ಮ ನಟನ ಆರ್ಭಟದ ಗತ್ತು ಮುಂದುವರಿಸಿದ್ದಾರೆ. ಖಳನಾಯಕ ನಾಗಿ ಯಶ್ ಶೆಟ್ಟಿ ಕೂಡ ಮಿಂಚಿದ್ದಾರೆ. ಇನ್ನು ಮತ್ತೊಬ್ಬ ಯುವ ಖಳನಟನಾಗಿ ಅನಿಲ್ ಯಾದವ್ ಗಮನ ಸೆಳೆಯುವಂತಹ ಪಾತ್ರ ನಿರ್ವಹಿಸುವ ಮೂಲಕ ಇಂಡಸ್ಟ್ರಿಗೆ ಇನ್ನೊಬ್ಬ ವಿಲ್ಲನ್ ಸಿಕ್ಕಂತಾಗಿದೆ.

ಪೊಲೀಸ್ ಇನ್ಸ್ಪೆಕ್ಟರ್ ಆಗಿ ಉಗ್ರಂ ಮಂಜು ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಆಕ್ಷನ್, ಸೆಂಟಿಮೆಂಟ್, ಥ್ರಿಲ್ಲರ್ ಎಲ್ಲದರ ಸಂಗಮವಿರುವ ಈ “ರಾನಿ” ಚಿತ್ರ ಒಮ್ಮೆ ನೋಡುವಂತಿದೆ.

error: Content is protected !!