“ರುದ್ರ ಗರುಡ ಪುರಾಣ” ಚಿತ್ರದ ಟ್ರೇಲರ್ ರೀಲಿಸ್ ಮಾಡಿದ ನಟ ಡಾಲಿ ಧನಂಜಯ.
ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ರಿಷಿ ನಾಯಕರಾಗಿ ನಟಿಸಿರುವ “ರುದ್ರ ಗರುಡ ಪುರಾಣ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರದ ಟ್ರೇಲರ್ ಅನ್ನು ನಟ ರಾಕ್ಷಸ ಡಾಲಿ ಧನಂಜಯ ಅನಾವರಣ ಮಾಡಿದರು. ನಿರ್ಮಾಪಕ ಕೆ.ಮಂಜು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಟ್ರೇಲರ್ ಕುತೂಹಲ ಮೂಡಿಸಿದ್ದು, ಜನವರಿ 24 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ನೋಡುವ ಕಾತುರವನ್ನು ಹೆಚ್ಚಿಸಿದೆ. ಟ್ರೇಲರ್ ಬಿಡುಗಡೆ ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
ರಿಷಿ ನನ್ನ ಕಾಲೇಜು ಹಾಗೂ ರಂಗಭೂಮಿ ದಿನಗಳ ಗೆಳೆಯ. ನಿರ್ದೇಶಕರು ಬಹು ದಿನಗಳ ಪರಿಚಯ. “ರುದ್ರ ಗರುಡ ಪುರಾಣ” ಟ್ರೇಲರ್ ವಿಭಿನ್ನವಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ನಟ ಧನಂಜಯ ಹಾರೈಸಿದರು.
ಧನಂಜಯ ಅವರು ಹೇಳಿದ ಹಾಗೆ ಕಾಲೇಜಿನಲ್ಲಿ ನಾನು ಅವರ ಜೂನಿಯರ್ ಎಂದು ಮಾತನಾಡಿದ ನಾಯಕ ರಿಷಿ ಇಂಜನಿಯರಿಂಗ್ ದಿನಗಳನ್ನು ನೆನಪಿಸಿಕೊಂಡರು. ಇನ್ನು ನಮ್ಮ ಚಿತ್ರ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಮೂಲಕ ಜನರ ಮನ ತಲುಪಿದೆ. ಟ್ರೇಲರ್ ಸಹ ಚೆನ್ನಾಗಿದೆ. ನಿರ್ದೇಶಕರ ಶ್ರಮ ಚಿತ್ರಕ್ಕೆ ಸಾಕಷ್ಟಿದೆ.
ಯಾವುದೇ ಕೊರತೆ ಬಾರದೆ ಹಾಗೆ ನಿರ್ಮಾಪಕರು ನಿರ್ಮಾಣ ಮಾಡಿದ್ದಾರೆ. ಅದು ಟ್ರೇಲರ್ ನಲ್ಲಿ ಕಾಣುತ್ತಿದೆ. ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ “ರುದ್ರ ಗರುಡ ಪುರಾಣ” ಒಂದೊಳ್ಳೆ ಚಿತ್ರವಾಗಿ ಮೂಡಿಬಂದಿದ್ದು, ಜನವರಿ 24 ರಂದು ತೆರೆಗೆ ಬರಲಿದೆ. ನಮ್ಮ ಚಿತ್ರಕ್ಕೆ ಹಾಗೂ ನಮ್ಮ ಜೊತೆಗೆ ಬಿಡುಗಡೆಯಾಗುತ್ತಿರುವ ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ನಾನು ಮೈಸೂರುನವಳು. ನಾಯಕಿಯಾಗಿ ಇದು ಮೊದಲ ಚಿತ್ರ. ನನ್ನ ತಂದೆಗೆ ನಾನು ಚೆನ್ನಾಗಿ ಓದಬೇಕೆಂಬ ಆಸೆ. ನನಗೆ ಓದು ಹಾಗೂ ನಟನೆ ಎರಡು ಆಸೆ. ಓದಿನಲ್ಲೂ ನಮ್ಮ ತಂದೆ ಹೇಳಿದ ಹಾಗೆ ಕೇಳಿದ್ದೇನೆ. ಇದರಿಂದ ಅವರಿಗೂ ಖುಷಿಯಾಗಿದೆ. ಈ ಚಿತ್ರದ ಟ್ರೇಲರ್ ನೋಡಿ ನಮ್ಮ ತಂದೆ ಸಂತೋಷಪಟ್ಟಿದ್ದಾರೆ. ಜನರಿಗೂ ಚಿತ್ರ ಇಷ್ಟವಾಗಲಿದೆ ಎಂದು ನಾಯಕಿ ಪ್ರಿಯಾಂಕ ಕುಮಾರ್ ತಿಳಿಸಿದರು.
ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧನಂಜಯ ಅವರಿಗೆ ಧನ್ಯವಾದ. ಇದೇ ಜನವರಿ 24 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ನಮ್ಮ ಚಿತ್ರ ನೋಡಿ. ಬೆಂಬಲ ನೀಡಿ ಎಂದು ನಿರ್ದೇಶಕ ನಂದೀಶ್ ಹಾಗೂ ನಿರ್ಮಾಪಕ ಲೋಹಿತ್ ತಿಳಿಸಿದರು.
ಛಾಯಾಗ್ರಾಹಕ ಸಂದೀಪ್ ಕುಮಾರ್, ಸಂಭಾಷಣೆಕಾರ ರಘು ನಿಡವಳ್ಳಿ, ಹಾಡು ಬರೆದಿರುವ ಪ್ರಮೋದ್ ಮರವಂತೆ, ಮಂಜು ಮಾಂಡವ್ಯ ಹಾಗೂ ಚಿತ್ರದಲ್ಲಿ ನಟಿಸಿರುವ ಶಿವರಾಜ್ ಕೆ.ಆರ್ ಪೇಟೆ, ಅಶ್ವಿನಿ ಗೌಡ, ಪ್ರಭಾಕರ್, ರಾಮ್ ಪವನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ಅಶ್ವಿನಿ ವಿಜಯ್ ಲೋಹಿತ್ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆ.ಪಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.