ಅಧರ್ಮವನ್ನು ಮೆಟ್ಟಿ, ಧರ್ಮದ ಕಡೆ ಸಾಗಬೇಕು – ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.
ಸರಿ ಸುಮಾರು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ , ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಾ ಬಹಳಷ್ಟು ಅನುಭವವನ್ನು ಪಡೆದುಕೊಂಡ ಯುವ ಪ್ರತಿಭೆ ಚೇತನ್. ಮುಸ್ಸಂಜೆ ಮಹೇಶ್ ನಿರ್ದೇಶನದ ಇನಿಯಾ ಚಿತ್ರದ ಮೂಲಕ ನಿರ್ದೇಶನ ವಿಭಾಗಕ್ಕೆ ಬಂದು ಹಲವಾರು ನಿರ್ದೇಶಕರ ಜೊತೆಗೆ ಕೆಲಸ ಮಾಡಿರುವ ಚೇತನ್ ಕಥೆ , ಕವನದ ಬಗ್ಗೆ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡು, ಸೆಕೆಂಡ್ ಪಿಯುಸಿ ಮುಗಿದ ನಂತರ ಸಿನಿಮಾ ಕ್ಷೇತ್ರದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡು ಈಗ “ಸಂಭವಾಮಿ ಯುಗೇ ಯುಗೇ” ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆ ಮೇಲೆ ಭದ್ರ ಅಡಿಪಾಯವನ್ನು ಹಾಕಲು ಮುಂದಾಗಿದ್ದಾರೆ.
ಕರೋನ ಕಾಲದ ಲಾಕ್ ಡೌನ್ ಸಂದರ್ಭ ಪ್ರತಿಯೊಬ್ಬ ಮನುಷ್ಯರನ್ನು ಬದುಕಿನ ಬಗ್ಗೆ ಜಾಗೃತಿ ಮೂಡಿಸಿತು ಎನ್ನಬಹುದು. ಯಾಕೆಂದರೆ ಆ ಸಮಯದಲ್ಲಿ ಬಹುತೇಕರಿಗೆ ತನ್ನ ಊರು , ಹಳ್ಳಿ , ಕುಟುಂಬದವರು ನೆನಪಿಗೆ ಬಂದು ಅಲ್ಲೇ ಬದುಕು ಕಟ್ಟಿಕೊಳ್ಳುವ ತವಕವನ್ನು ಹೊಂದಿದ್ದರು.
ಆ ಸಮಯದಲ್ಲಿ ಹುಟ್ಟಿಕೊಂಡ ಕಥೆ ಇದು, ಪಟ್ಟಣಕ್ಕಿಂತ ಹಳ್ಳಿಯಲ್ಲಿ ಬದುಕನ್ನ ಕಟ್ಟಿಕೊಂಡು ದೊಡ್ಡ ಮಟ್ಟಕ್ಕೆ ಬೆಳೆಯುವ ಎಲ್ಲಾ ಅವಕಾಶಗಳಿವೆ. ನಮ್ಮ ಮೂಲವನ್ನ ಮರೆಯಬಾರದು , ಆಧುನಿಕ ಕೃಷಿ , ಹೈನುಗಾರಿಕೆ ಸೇರಿದಂತೆ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡು ಬೆಳೆಯಬಹುದು. ಇನ್ನು ಈ ಚಿತ್ರದ ಕಥಾ ನಾಯಕ ಗ್ರಾಮ ಪಂಚಾಯಿತಿ ಅಧ್ಯಕ್ಷ. ತನ್ನ ಊರನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂಬ ತವಕ ಅವನದು. ಅಧರ್ಮ ಆರ್ಭಟಿಸಿದಾಗ ಅದನ್ನ ಮೆಟ್ಟಿ ಧರ್ಮದ ಕಡೆ ಸಾಗುವುದು ಬಹಳ ಮುಖ್ಯ ಎಂಬುದನ್ನು “ಸಂಭವಾಮಿ ಯುಗೇ ಯುಗೇ” ಚಿತ್ರದ ಮೂಲಕ ಹಳ್ಳಿ ಸೊಗಡಿನಲ್ಲಿ ತೆರೆಯ ಮೇಲೆ ತಂದಿದ್ದೇನೆ ಎನ್ನುತ್ತಾರೆ ನಿರ್ದೇಶಕ ಚೇತನ್.
ಈ ಒಂದು ಚಿತ್ರವನ್ನು ರಾಜಲಕ್ಷ್ಮಿ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಶ್ರೀಮತಿ ಪ್ರತಿಭಾ ನಿರ್ಮಿಸಿದ್ದು , ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ , ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಯುವ ನಟ ಜಯ್ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದು , ನಿಶಾ ರಜಪೂತ್ ನಾಯಕಿ ಕಾಣಿಸಿಕೊಂಡಿದ್ದಾರೆ.
ನಾಯಕಿಯ ಅಣ್ಣನಾಗಿ ಪ್ರಮೋದ್ ಶೆಟ್ಟಿ ಅಭಿನಯಿಸಿದ್ದು , ಉಳಿದಂತೆ ಸುಧಾರಾಣಿ , ಮಧುರಾಗೌಡ , ಬಲ ರಾಜವಾಡಿ, ಪುನೀತ್, ಅಶ್ವಿನ್ ಹಾಸನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಅಭಿನಯಿಸಿದ್ದಾರಂತೆ. ಪೂರನ್ ಶೆಟ್ಟಿಗಾರ್ ಸಂಗೀತ , ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಲ್ಕು ಹಾಡು , ಎರಡು ಫೈಟ್ ಗಳು ಒಳಗೊಂಡಿದ್ದು ಎಲ್ಲವೂ ಸಂದರ್ಭಕ್ಕೆ ಅನುಗುಣವಾಗಿ ಮೂಡಿ ಬಂದಿದೆಯಂತೆ.
ಸಾಮಾಜಿಕ ಕಳಕಳಿಯಿಂದ ಒಂದು ಅರ್ಥಪೂರ್ಣ ಸಂದೇಶವಿರುವ ಚಿತ್ರವನ್ನು ಮಾಡಿದ್ದು , ಪ್ರತಿಯೊಬ್ಬರು ಈ ಚಿತ್ರವನ್ನು ನೋಡುವುದು ಬಹಳ ಅಗತ್ಯ ಎಂದಿದ್ದಾರೆ ನಿರ್ದೇಶಕರು. ತಲೆಮಾರುಗಳು ಸಾಗಿದಂತೆ ನಮ್ಮ ಹಿಂದಿನ ಮೂಲವನ್ನ ಮರೆಯಬಾರದು , ಹಳ್ಳಿಯ ಬದುಕು ಜೀವನ ಕಡೆ ಗಮನ ಅಗತ್ಯ ಎಂಬುದನ್ನು ತೆರೆಯ ಮೇಲೆ ತಂದಿದ್ದು , ಇದೇ ತಿಂಗಳು 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆಯಂತೆ ಚಿತ್ರದಂಡ