Cini NewsSandalwood

ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದ “ಸಂಭವಾಮಿ ಯುಗೇ ಯುಗೇ” ಚಿತ್ರತಂಡ

ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ “ಸಂಭವಾಮಿ ಯುಗೇ ಯುಗೇ”. ಒಂದು ಉತ್ತಮ ಗ್ರಾಮೀಣ ಸೊಗಡಿನ ಕೌಟುಂಬಿಕ ಕಥಾನಕ ಒಳಗೊಂಡಿರುವ ಈ ಚಿತ್ರ ಪ್ರೇಕ್ಷಕರನ್ನ ಸೆಳೆಯುವ ಹಂತದಲ್ಲಿರುವಾಗಲೇ ಎರಡನೆಯ ವಾರದಲ್ಲಿ ಪರಭಾಷಾ ಚಿತ್ರಗಳಿಗೆ ಚಿತ್ರಮಂದಿರಗಳನ್ನ ನೀಡುವ ಮೂಲಕ ನಮ್ಮ ಚಿತ್ರಗಳಿಗೆ ತೊಂದರೆ ಆಗುತ್ತಿದೆ ಎಂಬ ನೋವನ್ನ ಹೇಳಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಯನ್ನು ಆಯೋಜನೆ ಮಾಡಿತು.

ಮೊದಲಿಗೆ ಮಾತನ್ನು ಆರಂಭಿಸಿದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಈಗಾಗಲೇ ನಮ್ಮ ಚಿತ್ರವನ್ನ ಬಹುತೇಕರು ಮೆಚ್ಚಿಕೊಂಡಿದ್ದಾರೆ. ಪಕ್ಕಾ ಗ್ರಾಮೀಣ ಶೈಲಿಯ ಉತ್ತಮ ಕಥಾಹಂದರ ಹೊಂದಿರುವ ಚಿತ್ರವಿದು , ಆದರೆ ನಾವು ನಿರೀಕ್ಷಿಸಿದಷ್ಟು ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆ ಬಗ್ಗೆ ಬೇಸರವಿದೆ‌. ಆದರೆ ಈವರೆಗೂ ನಮ್ಮ ಚಿತ್ರ ನೋಡಿದವರು ಚಿತ್ರದ ಕುರಿತು ಆಡುತ್ತಿರುವ ಒಳ್ಳೆಯ ಮಾತುಗಳು ಖುಷಿ ಕೊಟ್ಟಿದೆ‌. ಕರ್ನಾಟಕದಾದ್ಯಂತ ಈಗ ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ‌. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡುವುದರ ಮೂಲಕ ಹೊಸ ತಂಡದ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ಎಂದರು.

ನಾಯಕ ಜಯ್ ಶೆಟ್ಟಿ ಮಾತನಾಡುತ್ತಾ ನನಗೆ ಅವಕಾಶ ಕೊಟ್ಟ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ನಾನು ಸದಾ ಋಣಿಯಾಗಿರುತ್ತೇನೆ. ಹೊಸ ನಾಯಕನ ಮೊದಲ ಚಿತ್ರಕ್ಕೆ ಹೆಚ್ಚು ಜನ ಚಿತ್ರಮಂದಿರಕ್ಕೆ ಬರುವುದಿಲ್ಲ ‌ಎನ್ನುತ್ತಾರೆ‌. ಆದರೆ ನನ್ನ ಮೊದಲ ಚಿತ್ರದ ಬಿಡುಗಡೆಯ ದಿನ ಅಧಿಕ ಸಂಖ್ಯೆಯ ಜನರು ಬಂದು ವೀಕ್ಷಿಸಿ ಪ್ರೋತ್ಸಾಹ ನೀಡಿದರು. ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯವಿದ್ದರೂ, ಆನಂತರದ ದಿನಗಳಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡುವುದರ ಮೂಲಕ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ಈ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಅಭಿನಯಿಸಿರುವ ಮಧುರ ಗೌಡ ಮಾತನಾಡುತ್ತಾ ನಮ್ಮ ಚಿತ್ರ ಬಹಳ ಸುಂದರವಾಗಿ ಮೂಡಿ ಬಂದಿದೆ. ನನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಫಾಲೋವರ್ಸ್ ಇದ್ದಾರೆ ಎಂದಾಗ ಅವರನ್ನೆಲ್ಲ ಚಿತ್ರ ನೋಡಲು ಪ್ರೇರೇಪಿಸಿ ಎಂದು ಮಾಧ್ಯಮದವರ ಮಾತಿಗೆ ತಬ್ಬಿಬಾಗಿ , ಆ ನಿಟ್ಟಿನಲ್ಲಿ ನನ್ನ ಅಭಿಮಾನಿಗಳನ್ನ ಚಿತ್ರ ನೋಡಲು ಮನವಿ ಮಾಡುತ್ತೇನೆ ಎಂದು ಹೇಳಿದರು.

ಹಾಗೆಯೇ ಭಜರಂಗಿ ಪ್ರಸನ್ನ ಮಾತನಾಡುತ್ತಾ ನಿರ್ಮಾಪಕರನ್ನ ಉಳಿಸಿಕೊಳ್ಳುವುದು ಬಹಳ ಮುಖ್ಯ. ಕಷ್ಟಪಟ್ಟು ಒಂದು ಉತ್ತಮ ಚಿತ್ರವನ್ನು ಮಾಡಿದ್ದೇವೆ ಎಲ್ಲರೂ ಬಂದು ಪ್ರೋತ್ಸಾಹಿಸಿ ಬೆಂಬಲಿಸಿ ಎಂದರು. ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ಮಾಡಿರುವ ವೆಂಕಟೇಶ್ ಪ್ರಸಾದ್ ಮಾತನಾಡುತ್ತಾ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಪರಿಸ್ಥಿತಿ ಹಾಗೂ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಯಾಕೆ ಬರುತ್ತಿಲ್ಲ ಎಂಬ ವಿಚಾರವಾಗಿ ಚರ್ಚೆ ಮಾಡುತ್ತಲೇ ನಮ್ಮ ಚಿತ್ರ ಉತ್ತಮವಾಗಿ ಬಂದಿದೆ ಎಲ್ಲರೂ ಬೆಂಬಲ ನೀಡಿ ಎಂದರು.

ಇನ್ನು ಉಳಿದಂತೆ ಚಿತ್ರ ತಂಡದ ತಾಂತ್ರಿಕ ವರ್ಗದವರು ಕೂಡ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇಂತಹ ಒಂದು ಗ್ರಾಮೀಣ ಸೊಗಡಿನ ಚಿತ್ರವನ್ನು ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಮೂಲಕ ಪ್ರತಿಭಾ ರವರು ನಿರ್ಮಿಸಿದ್ದು, ಈ ಚಿತ್ರ ಮತ್ತಷ್ಟು ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ತಂಡ ಯೋಜನೆಯನ್ನು ಹಾಕಿಕೊಂಡಿದೆಯಂತೆ.

error: Content is protected !!