ಮನ ಮುಟ್ಟುವ ಪ್ರೀತಿಯಲ್ಲಿ ಸಾಧನೆಯ ಶಿಖರ…”ಸಂಜು ವೆಡ್ಸ್ ಗೀತಾ 2″ (ಚಿತ್ರವಿಮರ್ಶೆ- ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಸಂಜು ವೆಡ್ಸ್ ಗೀತಾ 2
ನಿರ್ದೇಶಕ : ನಾಗಶೇಖರ್
ನಿರ್ಮಾಪಕ : ಚಲವಾದಿ ಕುಮಾರ್
ಸಂಗೀತ : ಶ್ರೀಧರ್ ಸಂಭ್ರಮ್
ಛಾಯಾಗ್ರಹಣ : ಸತ್ಯ ಹೆಗ್ಡೆ
ತಾರಾಗಣ : ಶ್ರೀನಗರ ಕಿಟ್ಟಿ , ರಚಿತಾರಾಮ್ , ಸಾಧು ಕೋಕಿಲ , ತಬಲಾ ನಾಣಿ , ಸಂಪತ್ ರಾಜ್ , ರಂಗಾಯಣ ರಘು , ರಾಗಿಣಿ ದ್ವಿವೇದಿ , ಚೇತನ್ ಚಂದ್ರ ಹಾಗೂ ಮುಂತಾದವರು…
ಪ್ರೀತಿ ಅಜರಾಮರ , ಪ್ರೀತಿಗೆ ಸಾವಿಲ್ಲ ಅನ್ನೋ ಮಾತು ಕೇಳಿದ್ದೇವೆ. ಪ್ರತಿಯೊಂದು ಪ್ರೀತಿಯ ಹಿಂದೆ ನೋವು , ನಲಿವು ಎಲ್ಲವೂ ಬೆಸೆದುಕೊಂಡಿರುತ್ತದೆ. ಇಂಥದೇ ಒಂದು ನಿಷ್ಕಲ್ಮಶ ಪ್ರೀತಿಯ ಹಾದಿಯಲ್ಲಿ ಗುರಿ ಮುಟ್ಟಲು ಹೊರಟವನಿಗೆ ಜೊತೆಯಾಗಿ ನಿಲ್ಲುವ ಸಂಗಾತಿಯ ಬೆಂಬಲದ ಸುತ್ತ ಸಾಗುವ ಸುಂದರ ಮನ ಮಿಡಿಯುವ ಕಥಾನಕ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಸಂಜು ವೆಡ್ಸ್ ಗೀತಾ 2. ದೊಡ್ಡ ಬಿಸಿನೆಸ್ ಮ್ಯಾನ್ ವಿಜಯ್ ಮಲ್ಹೋತ್ರ (ಸಂಪತ್ ರಾಜ್) ಒಬ್ಬಳೇ ಮುದ್ದಾದ ಮಗಳು ಗೀತಾ (ರಚಿತಾ ರಾಮ್).
ಶಿಡ್ಲಘಟ್ಟ ಮೂಲದ ರೇಷ್ಮೆ ನೇಕಾರ ಸಂಜು (ಶ್ರೀನಗರ ಕಿಟ್ಟಿ) ತನ್ನ ಮಾವ (ತಬಲಾ ನಾಣಿ) ಜೊತೆ ಪಟ್ಟಣದಲ್ಲಿ ದೊಡ್ಡ ದೊಡ್ಡ ಅಂಗಡಿಗಳಿಗೆ ಸೀರೆಗಳನ್ನ ಮಾರಾಟ ಮಾಡುತ್ತಾನೆ. ಒಮ್ಮೆ ಮಿಸ್ ಕರ್ನಾಟಕ ಬ್ಯೂಟಿ ಕಾಂಟೆಸ್ಟಿಗೆ ಗೀತಾ ಹೋಗುವಾಗ ಮಾರ್ಗ ಮಧ್ಯ ಅಚಾನಕ್ಕಾಗಿ ಸಂಜು ಭೇಟಿಯಾಗಿ ಸೀರೆ ಒಂದನ್ನು ನೀಡಿ ಹೊರಡುತ್ತಾನೆ.
ಮತ್ತೆ ಸಂಜು ನೋಡಲು ಗೀತಾ ಹಲವು ಪ್ರಯತ್ನ ಮಾಡುತ್ತಾ ಹೋಗುತ್ತಾಳೆ. ಇತ್ತ ತಂದೆಯಿಂದಲೂ ವಿರೋಧ ವ್ಯಕ್ತವಾಗುತ್ತಾ ಬರುತ್ತದೆ. ಆಸ್ತಿ , ಅಂತಸ್ತನ್ನ ಲೆಕ್ಕಿಸದ ಗೀತಾ ಸಂಜುವಿನ ಸರಳತೆ , ಶ್ರಮವನ್ನ ಗಮನಿಸಿ ಪ್ರೀತಿಯ ಪಾಶಕ್ಕೆ ಬಿದ್ದು ಮದುವೆ ಆಗಿ , ತಂದೆಯ ಕೋಪಕ್ಕೆ ತುತ್ತಾಗಿ ತಮ್ಮದೇ ಬದುಕನ್ನ ಕಟ್ಟಿಕೊಳ್ಳುತ್ತಾರೆ.
ಗುರಿ , ಛಲ ಇದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವಂತೆ , ಶಿಡ್ಲಘಟ್ಟದ ರೇಷ್ಮೆ ಉದ್ಯಮ ದೇಶದಲ್ಲೂ ಸದ್ದು ಮಾಡುವಂತೆ ಶ್ರಮಪಡುವ ಇವರ ಸಾಧನೆ ಹಾದಿಯಲ್ಲಿ ಹಲವು ಏಳು ಬೀಳುಗಳನ್ನು ಎದುರಿಸುತ್ತಲೇ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾ ಹೋಗುತ್ತಾರೆ. ಇದರ ಹಿನ್ನೆಲೆಯೂ ಒಂದು ಫ್ಲಾಶ್ ಬ್ಯಾಕ್ ನಲ್ಲಿ ತೆರೆದುಕೊಳ್ಳುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿಧಿಯ ಆಟಕ್ಕೆ ಬೆಲೆ ಎಲ್ಲಿ ಎನ್ನುವಂತೆ, ಗೀತಾ ಹಾಗೂ ಸಂಜು ಬದುಕಿನಲ್ಲಿ ಎದುರಾಗುವ ದುರಂತ ಘಟನೆ ಬೇರೆ ಹಾದಿಯಲ್ಲಿ ಸಾಗಿ
ಮನಮುಟ್ಟುವಂತಿದೆ.
ಪ್ರೀತಿನಾ… ಉದ್ಯಮನಾ…
ಏನದು ದುರಂತ…
ಇಬ್ಬರ ಬದುಕು ಏನಾಗುತ್ತೆ…
ವಿಧಿಯ ಆಟ ಏನು…
ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಒಮ್ಮೆ ಈ ಚಿತ್ರ ನೋಡಬೇಕು.
ನಿರ್ದೇಶಕ ನಾಗಶೇಖರ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಭಿನ್ನವಾಗಿದ್ದು, ನೇಕಾರರ ಬದುಕು , ರೇಷ್ಮೆ ಬೆಳೆಗಾರರ ಕಷ್ಟ , ಕಾರ್ಪಣ್ಯಗಳ ಜೊತೆಗೆ ನವಿರಾದ ಪ್ರೀತಿಯ ಸೆಳೆತ , ಬದುಕಿನ ಶಕ್ತಿ , ಸುಖ ದುಃಖಗಳ ಮಿಶ್ರಣವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆಗೆ ಇನ್ನಷ್ಟು ಶಕ್ತಿಯುತವಾಗಿ ಪಾತ್ರ ವರ್ಗಗಳ ಹಾಗೂ ನೇಕಾರರ ಬದುಕಿನ ಸೂಕ್ಷ್ಮತೆಗೆ ಒತ್ತು ಕೊಡಬಹುದಿತ್ತು , ಸ್ಲೋ ಪಾಯಿಸನ್ ನಂತೆ ಮನಮುಟ್ಟುವ ಈ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಕುಮಾರ್ ರವರ ಖರ್ಚು , ಅದ್ದೂರಿತನ ಚಿತ್ರದಲ್ಲಿ ಕಾಣುತ್ತದೆ.
ಇನ್ನು ಇಡೀ ಚಿತ್ರದ ಹೈಲೈಟ್ ಅಂದರೆ ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ಸುಂದರ ಮನಮೋಹಕ ದೃಶ್ಯಗಳನ್ನ ಸೆರೆ ಹಿಡಿದಿದ್ದು , ಅದಕ್ಕೆ ಪೂರಕವಾಗಿ ಸಂಗೀತ ನೀಡಿರುವ ಶ್ರೀಧರ್. ವಿ. ಸಂಭ್ರಮ್ ಸಂಗೀತ ಕೂಡ ಗುನುಗುವಂತಿದೆ. ತಾಂತ್ರಿಕವಾಗಿ ಚಿತ್ರ ಗಮನ ಸೆಳೆಯುತ್ತದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಶ್ರೀನಗರ ಕಿಟ್ಟಿ ಎರಡು ಶೇಡ್ ಗಳ ಪಾತ್ರದಲ್ಲಿ ಜೀವಿಸಿದ್ದಾರೆ.
ನೇಕಾರನಾಗಿ ಮನಸ್ಸಿಗೆ ಹತ್ತಿರವಾಗುವ ಸಂಜು , ಪ್ರೇಮಿಯಾಗಿ ಮನಸ್ಸಿಗೆ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಅದೇ ರೀತಿ ನಾಯಕಿ ರಚಿತಾ ರಾಮ್ ಕೂಡ ಲೀಲಾಜಾಲವಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಗಮನ ಸೆಳೆದಿದ್ದಾರೆ. ಸಾಧು ಕೋಕಿಲ , ರಂಗಾಯಣ ರಘು ಪಾತ್ರ ಸೀಮಿತವಾಗಿ ಸಾಗುತ್ತದೆ. ತಬಲಾ ನಾಣಿ ಮಾತಿನ ಸೊಗಡು , ಹಾಸ್ಯದ ಝಲಕ್ ಗಮನ ಸೆಳೆಯುತ್ತದೆ.
ನಾಯಕಿಯ ತಂದೆಯಾಗಿ ಸಂಪತ್ ಕುಮಾರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದು , ವಿಶೇಷ ಪಾತ್ರದಲ್ಲಿ ಬರುವ ರಾಗಿಣಿ , ಚೇತನ್ ಚಂದ್ರ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಈ ಚಿತ್ರದಲ್ಲಿ ಬರುವ ಇಡ್ಲಿ (idly) ‘ I Deeply Love U ‘ ಎನ್ನುವ ಪ್ರೀತಿಯ ಪರಿಮಳದ ನುಡಿಗಳು ಹಾಗೂ ಸ್ವಿಜರ್ಲ್ಯಾಂಡಿನ ಸುಂದರ ತಾಣಗಳನ್ನು ತೋರಿಸಿರುವ ರೀತಿ ಇಷ್ಟವಾಗಲಿದೆ , ಒಟ್ಟಾರೆ ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡುವಂತಿದೆ.