ಗಾಡವಾದ ಪ್ರೀತಿಗೆ ಸಿಕ್ಕ ಉತ್ತರ… ರೇಟಿಂಗ್ : 4 /5
ಗಾಡವಾದ ಪ್ರೀತಿಗೆ ಸಿಕ್ಕ ಉತ್ತರ…
ರೇಟಿಂಗ್ : 4 /5
ಚಿತ್ರ : ಸಪ್ತ ಸಾರದಾಚೆ ಎಲ್ಲೋ ಸೈಡ್. ಬಿ
ನಿರ್ದೇಶಕ : ಹೇಮಂತ್ ರಾವ್ ನಿರ್ಮಾಪಕ : ರಕ್ಷಿತ್ ಶೆಟ್ಟಿ ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಅದ್ವೈತ ಗುರುಮೂರ್ತಿ
ತಾರಾಗಣ : ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಆಚಾರ್, ರಮೇಶ್ ಇಂದಿರಾ , ಅಚ್ಚುತ್ ಕುಮಾರ್, ಗೋಪಾಲ್ ದೇಶಪಾಂಡೆ, ಹಾಗೂ ಮುಂತಾದವರು…
ಮನು (ರಕ್ಷಿತ್ ಶೆಟ್ಟಿ) ತಾನು ಪ್ರೀತಿಸಿದ ಹುಡುಗಿಯ ಪ್ರಿಯಾ ( ರುಕ್ಮಿಣಿ ವಸಂತ್) ಜೊತೆಗೆ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವ ಹಂತದಲ್ಲಿ ತಾನು ಮಾಡದ ತಪ್ಪಿಗೆ ಸಿಲುಕಿಕೊಂಡು ಹತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಇನ್ನಿಲ್ಲದ ಸಂಕಷ್ಟವನ್ನು ಎದುರಿಸುತ್ತಾನೆ. ಅದನ್ನು “ಸಪ್ತ ಸಾಗರದಾಚೆ ಎಲ್ಲೋ” ಸೈಡ್ -ಎ ನಲ್ಲಿ ನೋಡಿದ್ದೇವೆ. ಈಗ ಬಿಡುಗಡೆಗೊಂಡಿರುವ ಬಿ-ಸೈಡ್ ಮುಂದುವರೆದ ಭಾಗವಾಗಿ ತೆರೆದುಕೊಳ್ಳುತ್ತದೆ.
ಹತ್ತು ವರ್ಷಗಳ ಶಿಕ್ಷೆಯ ನಂತರ ಹೊರಬರುವ ಮನು ಗೆ ತನ್ನ ಜೈಲಿನಲ್ಲಿ ಪರಿಚಯವಾದ ಪ್ರಕಾಶ್ ( ಗೋಪಾಲ್ ದೇಶಪಾಂಡೆ) ಉಳಿದುಕೊಳ್ಳಲು ಜಾಗವನ್ನು ನೀಡಿ , ಮನುಗೆ ತನ್ನ ಪ್ರೀತಿಯ ಗೆಳತಿ ಪ್ರಿಯಾ ಮದುವೆಯಾಗಿ ತನ್ನ ದಾರಿಯನ್ನ ನೋಡಿಕೊಂಡಿದ್ದಾಳೆ. ನೀನು ನಿನ್ನ ದಾರಿಯನ್ನ ಹುಡುಕಿಕೊ ಎನ್ನುತ್ತಾ ಬದುಕು ಕಟ್ಟಿಕೊಳ್ಳಲು ಮಾರ್ಗ ತೋರಿಸ್ತಾನೆ. ಆದರೆ ತನ್ನ ಆಡಿಯೋ ಕ್ಯಾಸೆಟ್ಟಿನಲ್ಲಿರುವ ಧ್ವನಿ ಕೇಳುತ್ತಲೇ ಮನುಗೆ ಪ್ರಿಯಾಳ ಜೊತೆಗಿದ್ದ ಒಡನಾಟದ ನೆನಪು ಕಾಡುತ್ತಲೇ ಇರುತ್ತದೆ. ಇದರಿಂದ ಹೊರಬರಲು ಮನು ಗೆ ಸುರಭಿ ( ಚೈತ್ರ ಆಚಾರ್) ಎಂಬ ದೇಹ ಸುಖ ನೀಡುವ ಹುಡುಗಿಯ ಸಂಪರ್ಕ ಸಿಗುವಂತೆ ಮಾಡುತ್ತಾನೆ. ದೇಹ ಒಂದೆಡೆ ಆದರೆ… ಮನಸು ಮತ್ತೊಂದೆಡೆ… ಎನ್ನುವಂತೆ ಮನು ಸದಾ ಪ್ರಿಯಾ ಬದುಕಿನ ಬಗ್ಗೆ ಗಮನಹರಿಸುತ್ತಾ ಹೋಗುತ್ತಾನೆ. ಇದರ ನಡುವೆ ಮನು ಜೈಲಿನಲ್ಲಿದ್ದ ದುಷ್ಮನ್ ಸೋಮ (ರಮೇಶ್ ಇಂದಿರಾ) ನ ಕಾಟವು ಎದುರಾಗುತ್ತದೆ. ಹಾಡುವುದೇ ತನ್ನ ಜೀವನದ ಗುರಿ ಎಂದುಕೊಂಡಿದ್ದ ಪ್ರಿಯಾ ಬದುಕಿನಲ್ಲಿ ಎದುರಾಗಿರುವ ಸಂಕಷ್ಟ , ಗಂಡನ ಸಮಸ್ಯೆ, ಮಗುವಿನ ಆಸೆ ನೋಡಿ ದೂರದಿಂದಲೇ ಪರಿತಪಿಸುವ ಮನು ಒಂದು ಪ್ಲಾನ್ ಮಾಡುತ್ತಾನೆ. ಅದಕ್ಕೆ ಗೆಳೆಯನ ಸಹಕಾರವು ಪಡೆಯುತ್ತಾ , ತನ್ನ ಈ ಪರಿಸ್ಥಿತಿಗೆ ಕಾರಣರಾದವರಿಗೂ ಪಾಠ ಕಲಿಸಲು ಮುಂದಾಗುವ ಹಾದಿಯಲ್ಲಿ ಎದುರಾಗುವ ಹಲವು ರೋಚಕ ಘಟನೆಗಳು ಮನತಣಿಸುವಂತೆ ಮಾಡುತ್ತದೆ.
ಮನು ಪ್ಲಾನ್ ಏನು…
ಪ್ರಿಯಾ ಆಸೆ ಈಡೇರುತ್ತಾ…
ಸುರಭಿ ಏನಾದಳು…
ಯಾರ ಪ್ರೀತಿ ಮನುಗೆ ಸಿಗುತ್ತೆ..
ಕ್ಲೈಮಾಕ್ಸ್ ನೀಡುವ ಉತ್ತರ… ಇದೆಲ್ಲವನ್ನು ತಿಳಿಯಬೇಕಾದರೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ -ಬಿ ನೋಡಬೇಕು.
ಇನ್ನು ನಟ , ನಿರ್ಮಾಪಕ ರಕ್ಷಿತ್ ಶೆಟ್ಟಿ ಸೈಡ್- ಎ ನಲ್ಲಿ ನೋಡಿದಂತಹ ಮನು ಸೈಡ್- ಬಿ ನಲ್ಲಿ ಹೊಸ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಎದುರಿಸುವ ಪರಿ ಮನಮುಟ್ಟುವಂತಿದೆ. ಕಣ್ಣಿನಲ್ಲಿ ತನ್ನ ಭಾವನೆ ವ್ಯಕ್ತಪಡಿಸುವ ರೀತಿ , ದೇಹದ ತೂಕವನ್ನು ಹೆಚ್ಚಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ ಆಕ್ಷನ್ ಸನ್ನಿವೇಶವನ್ನು ಕೂಡ ಸಮರ್ಥವಾಗಿ ನಿರ್ವಹಿಸಿದ್ದಾರೆ. ಒಬ್ಬ ನಿರ್ಮಾಪನಾಗಿ ಇಡೀ ತಂಡವನ್ನು ಕಟ್ಟಿಕೊಂಡು ಎರಡು ಭಾಗವಾಗಿಸಿ ಕಥೆಗೆ ಪೂರಕವಾಗಿ ಚಿತ್ರವನ್ನು ಮಾಡಿ ಪ್ರೇಕ್ಷಕರ ಮುಂದೆ ತಂದು ಗಮನ ಸೆಳೆಯುವಂತೆ ಮಾಡಿರುವುದು ಮೆಚ್ಚುವಂಥದ್ದು. ಇನ್ನು ನಾಯಕಿಯರಾಗಿ ಅಭಿನಯಿಸಿರುವ ರುಕ್ಮಿಣಿ ವಸಂತ್ ಮಾತಿಗಿಂತ ಮೌನದಲ್ಲೇ ಹೆಚ್ಚು ಗಮನ ಸೆಳೆಯುತ್ತಾರೆ. ಇನ್ನು ಚೈತ್ರ ಆಚಾರ್ ಕೂಡ ಬೋಲ್ಡ್ ಬೆಡಗಿಯ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.
ಇನ್ನು ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿರುವ ಗೋಪಾಲ್ ದೇಶಪಾಂಡೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ಇನ್ನು ವಿಲನ್ ಪಾತ್ರದಲ್ಲಿ ರಮೇಶ್ ಇಂದಿರಾ ನಗುತ್ತಲೇ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಇದಕ್ಕೆ ಅಷ್ಟೇ ಸೂಕ್ಷ್ಮವಾಗಿ ಕಥೆ , ಚಿತ್ರಕಥೆ , ಸಂಭಾಷಣೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ದಾರಿಯನ್ನ ಕಟ್ಟಿಕೊಂಡು ಪ್ರೇಕ್ಷಕರ ಮುಂದೆ ತಂದಿರುವ ನಿರ್ದೇಶಕ ಹೇಮಂತ್. ಎಂ . ರಾವ್ ರವರ ಆಲೋಚನೆ ಉತ್ತಮವಾಗಿದೆ. ಸೈಡ್ ಎ ನಲ್ಲಿ ಇದ್ದ ಪ್ರಶ್ನೆಗೆ ಸೈಡ್ ಬಿ ನಲ್ಲಿ ಉತ್ತರ ನೀಡುವ ಹಾದಿಯಲ್ಲಿ ಗಾಢವಾದ ಪ್ರೀತಿಗೆ ನೆನಪಿನಲ್ಲಿ ಉಳಿಯುವ ಉತ್ತರ ಕೊಟ್ಟಂತಿದೆ. ಆದರೆ ಚಿತ್ರ ದ್ವಿತೀಯ ಭಾಗದ ಓಟ ವೇಗ ಮಾಡಿದರೆ ಚೆನ್ನಾಗಿರುತ್ತಿತ್ತು , ಸೂಕ್ಷ್ಮ ವೇದನೆಯ ದೃಶ್ಯಗಳು ನೋಡುಗರನ್ನು ಸೆಳೆಯುವಂತಿದೆ. ಇನ್ನು ಚಿತ್ರದ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸೊಗಸಾಗಿದ್ದು , ಅದೇ ರೀತಿ ಛಾಯಾಗ್ರಾಹಕರ ಕೈಚಳಕವೂ ಕೂಡ ಅದ್ಭುತವಾಗಿ ಮೂಡಿ ಬಂದಿದೆ.
ಒಟ್ನಲ್ಲಿ ಸೂಕ್ಷ್ಮವಾಗಿ ನೋಡುವ ಸಿನಿಪ್ರಿಯರಿಗೆ ಖಂಡಿತ ಇಷ್ಟವಾಗುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು