ಶಿಕ್ಷಣ ವ್ಯಾಪಾರ “SCAM 1770” (ಚಿತ್ರವಿಮರ್ಶೆ- ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : SCAM 1770
ನಿರ್ದೇಶಕ : ವಿಕಾಸ್ ಪುಷ್ಪಗಿರಿ
ನಿರ್ಮಾಪಕ : ದೇವರಾಜ್.
ಸಂಗೀತ : ಸತೀಶ್ ಆರ್ಯನ್
ಛಾಯಾಗ್ರಾಹಕ : ಶೋಯೆಬ್
ತಾರಾಗಣ : ರಂಜನ್, ನಿಶ್ವಿತ , ಬಿ. ಸುರೇಶ್, ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಸುನೇತ್ರ ಪಂಡಿತ್, ಹಾಗೂ ಮುಂತಾದವರು…
ಸಾಮಾನ್ಯವಾಗಿ ವಿದ್ಯೆಗಿಂತ ದೊಡ್ಡ ದಾನ ಬೇರೊಂದಿಲ್ಲ ಅನ್ನೋ ಮಾತಿದೆ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಕೆಲವೊಂದು ಶಿಕ್ಷಣ ವ್ಯವಸ್ಥೆಯು ವ್ಯಾಪಾರವಾಗಿ ದೊಡ್ಡ ಹಗರಣದ ರೂಪ ಪಡೆದುಕೊಂಡಿದೆ. ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಡಾಕ್ಟರ್ , ಎಂಜಿನಿಯರ್ ಆಗಬೇಕೆಂಬ ಆಸೆಯೊಂದಿಗೆ NEET , CET ಸ್ಪರ್ಧಾರ್ಥಕ ಪರೀಕ್ಷೆಯ ಮೂಲಕ ಪಾಸಾಗಿ ಉಜ್ವಲ ಭವಿಷ್ಯ ಕಾಣುವ ವಿದ್ಯಾರ್ಥಿಗಳ ಬದುಕಲ್ಲಿ ಆಗುವ ಏರುಪೇರುಗಳ ಸುತ್ತ , ತಂದೆ-ತಾಯಿಗಳ ಪರಿಸ್ಥಿತಿ , ಮಧ್ಯವರ್ತಿ ಆಟ, ಕೋಚಿಂಗ್ ಸೆಂಟರ್ ಗಳ ಕೈವಾಡವನ್ನು ಸೂಕ್ಷ್ಮವಾಗಿ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “SCAM 1770”.
ನೂರಕ್ಕೆ ನೂರರಷ್ಟು ಫಲಿತಾಂಶ ನೀಡುವ ಹೆಸರಾಂತ ಆರ್ಯನ್ ಇನ್ಸ್ಟಿಟ್ಯೂಟ್ ಮೂಲಕ ತರಬೇತಿ ಪಡೆದು ನೀಟ್ ಎಕ್ಸಾಮ್ ಬರೆದು ಒಳ್ಳೆ ರ್ಯಾಂಕಿಂಗ್ ಬಂದರೂ ಮೆಡಿಕಲ್ ಸೀಟ್ ಸಿಗದ ವಿದ್ಯಾರ್ಥಿನಿ ಬದುಕಿದ್ದು ಜೀವನ ವ್ಯರ್ಥ ಎಂದು ರೈಲಿಗೆ ಸಿಲುಕಿ ಸಾವನ್ನಪ್ಪುತ್ತಾಳೆ. ಇದು ವಿದ್ಯಾರ್ಥಿಗಳಲ್ಲಿ , ಪೋಷಕರಲ್ಲಿ ಆತಂಕ ಸೃಷ್ಟಿ ಮಾಡುತ್ತದೆ.
ಆದರೂ ವಿದ್ಯಾಸಂಸ್ಥೆ ಈ ಸಾವಿಗೂ ತಮ್ಮ ಸಂಸ್ಥೆಗೂ ಸಂಬಂಧವಿಲ್ಲವೆಂದು ಮಾಹಿತಿ ನೀಡುತ್ತದೆ. ಇದರ ನಡೆಯೋ ಪ್ರತಿ ವರ್ಷವೂ ವಿದ್ಯಾರ್ಥಿಗಳ ಆಸೆ, ಆಕಾಂಕ್ಷೆಗೆ ಕೊರತೆ ಇರುವುದಿಲ್ಲ. ಡಾಕ್ಟರ್ ಆಗಬೇಕೆಂಬ ಮಹಾದಾಸೆಯೊಂದಿಗೆ ತನ್ನ ಅಣ್ಣ ಅತ್ತಿಗೆಯ ಮನೆಯಲ್ಲಿ ವಾಸವಿದ್ದರೂ ದಿನನಿತ್ಯ ಮನೆ ಮನೆಗೆ ಪೇಪರ್ ಹಾಕುತ್ತಾ ಓದಿನ ಕಡೆ ಗಮನ ನೀಡುವ ತಿಮ್ಮೇಗೌಡ(ರಂಜನ್) ಎಲ್ಲರಿಂದ ಟಿ ಎಂದೆ ಗುರುತಿಸಿಕೊಂಡಿರುತ್ತಾನೆ.
ಪ್ರಖ್ಯಾತ ಆರ್ಯನ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆಯುವ ಗೆಳೆಯನಿಂದ ಮಾಹಿತಿ ಪಡೆಯುತ್ತಾ ನೀಟ್ ಎಕ್ಸಾಮ್ ಗೆ ಪ್ರಿಪೇರ್ ಆಗಲು ತನ್ನ ಸ್ನೇಹಿತೆ ಅಮೃತಾ (ನಿಶ್ಚಿತ) ಕೂಡ ಟಿ ಗೆ ಸಾತ್ ನೀಡುತ್ತಾಳೆ. ನೀಟ್ ಪರೀಕ್ಷೆಗೆ ಲಕ್ಷಾಂತರ ವಿದ್ಯಾರ್ಥಿಗಳು ಎಕ್ಸಾಮ್ ಬರೆದು ಪಾಸ್ ಆದರೂ ಸಹ ಸೀಟ್ ಪಡೆಯಲು ವಿದ್ಯಾರ್ಥಿಗಳು ಹರಸಾಹಸ ಪಡಬೇಕಾಗುತ್ತದೆ.
ಅದರಲ್ಲೂ ಉತ್ತಮವಾಗಿ ಓದಿ ಮೆರಿಟ್ ಪಡೆದವರು , ಕೆಲವು ಕೋಟಾಗಳು , ಮ್ಯಾನೇಜ್ಮೆಂಟ್ ಸೀಟ್ಗಳು ಹೀಗೆ ಹಲವು ಸೀಟುಗಳು ಬರ್ತೀಯಾ ನಡುವೆಯೂ ಡಾಕ್ಟರ್ ಆಗಬೇಕೆಂದು ಆಸೆ ಪಡುವ ವಿದ್ಯಾರ್ಥಿಗಳ ಪೋಷಕರು ಲಂಚವನ್ನ ನೀಡುವ ಮೂಲಕ ಸೀಟ್ ಪಡೆಯುವ ಹಾದಿಗೆ ಮುಂದಾಗುತ್ತಾರೆ. ಇದನ್ನೇ ದಾಳವಾಗಿ ಬಳಸಿಕೊಳ್ಳುವ ವ್ಯಕ್ತಿ ಬಶೀರ್ (ಉಗ್ರಂ ಸಂದೀಪ್) ಸೀಟ್ ಕೊಡಿಸುವುದಾಗಿ ಹೇಳಿ ಹಣವನ್ನ ವಸೂಲಿ ಮಾಡುತ್ತಾನೆ. ಇವನ ಮಾತನ್ನ ನಂಬಿ ಹಲವಾರು ಪೋಷಕರು ಲಕ್ಷಗಟ್ಟಲೆ ಹಣವನ್ನು ಕೂಡ ನೀಡುತ್ತಾರೆ.
ಸಿಇಟಿ ರಿಸಲ್ಟ್ ಬರುವ ಹೊತ್ತಿಗೆ ಬಶೀರ್ ಮೋಸ ತಿಳಿಯುತ್ತದೆ. ಕಂಪ್ಲೇಂಟ್ ನೀಡಲು ಹೋದರು ಪೋಲಿಸ್ ಕೇಳುವ ಯಾವುದೇ ಪ್ರೂಫ್ ಇಲ್ಲದೆ ಪರದಾಡುವ ಪೋಷಕರು, ಬಶೀರ್ ಬೆನ್ನೆಲುಬಾಗಿ ನಿಲ್ಲುವ ಲಾಯರ್ , ಇದರ ಹಿಂದೆ ಒಂದು ದೊಡ್ಡ ಜಾಲವೇ ಕೈಜೋಡಿಸಿರುತ್ತದೆ. ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಿರುವ ಈ ಸ್ಕ್ಯಾಮ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಮಾರಕವಾಗಿ ಪರಿಣಮಿಸುತ್ತಿದೆ. ಅದು ಹೇಗೆ… ಏನು… ಯಾರಿಂದ… ಪರಿಹಾರ ಇದೆಯೇ… ಇಲ್ಲವೋ… SCAM 1770 ಗೆ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಈ ಒಂದು ಹಗರಣವನ್ನು ಎಲ್ಲರ ಗಮನಕ್ಕೆ ತರುವ ನಿಟ್ಟಿನಲ್ಲಿ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ದೇವರಾಜ್.ಆರ್ ಸಾಹಸವನ್ನು ಮೆಚ್ಚಲೇಬೇಕು.
ಇನ್ನು ಈ ಚಿತ್ರದ ನಿರ್ದೇಶಕ ವಿಕಾಸ್ ಪುಷ್ಪಗಿರಿ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕರಾಳ ಮುಖಾದ ಅನಾವರಣವನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ.
ಶಿಕ್ಷಣವೇ ಒಂದು ವ್ಯಾಪಾರದ ಜಾಲವಾಗಿದ್ದು ,ವಿದ್ಯಾರ್ಥಿಗಳ, ಪೋಷಕರ ಆಸೆ ಆಕಾಂಕ್ಷೆಗಳ ಮೇಲೆ ಬೆಳಕು ಚೆಲ್ಲಿರುವ ರೀತಿ ಗಮನ ಸೆಳೆಯುತ್ತದೆ. ಇದೊಂದು ಸತ್ಯ ಘಟನೆಗಳನ್ನು ಕಟ್ಟಿಕೊಂಡು ವಾಸ್ತವದಲ್ಲಿ ಏನೆನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಹೇಳುವ ಪ್ರಯತ್ನವಾಗಿದ್ದರು , ಚಿತ್ರ ಓಟ ವೇಗ ಮಾಡಬಹುದಿತ್ತು. ಆದರೂ ಒಂದು ಉತ್ತಮ ಪ್ರಯತ್ನವಾಗಿ ಹೊರ ಬಂದಿದೆ.
ಇನ್ನು ಸಂಗೀತ ಹಾಗೂ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿ ಸಾಗಿದೆ. ಇನ್ನೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಯುವ ಪ್ರತಿಭೆ ರಂಜನ್ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಲು ಶ್ರಮಪಟ್ಟಿದ್ದಾರೆ. ಸಮಯ ವ್ಯರ್ಥ ಮಾಡಿದೆ ಪೇಪರ್ ಹಾಕುತ್ತಾ , ಮನೆಯವರ ಪ್ರೀತಿ, ವಿಶ್ವಾಸದ ಜೊತೆಗೆ ವಿದ್ಯಾರ್ಥಿಯಾಗಿ ಡಾಕ್ಟರ್ ಆಗುವ ಆಸೆ ಪಡುವ ಹುಡುಗನಾಗಿ ಗಮನ ಸೆಳೆಯುತ್ತಾರೆ. ಆದರೆ ನಾಯಕ ಮಾತನಾಡುವಗ ಕೆಲವೊಮ್ಮೆ ಭಾಷೆ ಪೂರಕವಿಲ್ಲ ಅನಿಸುತ್ತದೆ.
ಇನ್ನು ನಾಯಕಿಯಾಗಿ ಅಭಿನಯಿಸಿರುವ ನಿಶ್ಚಿತ ಮುದ್ದು ಮುದ್ದಾಗಿ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಟಿವಿ ವರದಿಗಾರನಾಗಿ ರಾಘು ಶಿವಮೊಗ್ಗ ಹಾಗೂ ಅವರ ಪತ್ನಿಯಾಗಿ ಹರಿಣಿ ಹಾಗೂ ವಿದ್ಯಾಸಂಸ್ಥೆಯ ಮುಖ್ಯಸ್ಥರಾಗಿ ಬಿ.ಸುರೇಶ್, ಲಾಯರ್ ಪಾತ್ರದಲ್ಲಿ ಶ್ರೀನಿವಾಸಪ್ರಭು, ಪೊಲೀಸ್ ಇನ್ಸ್ಪೆಕ್ಟರ್ ಆಗಿ ರಮೇಶ್ ಪಂಡಿತ್, ಮಧ್ಯವರ್ತಿಯಾಗಿ ಉಗ್ರಂ ಸಂದೀಪ್, ಸೇರಿದಂತೆ ಅವಿನಾಶ್, ನಾರಾಯಣ ಸ್ವಾಮಿ, ಹಂಸ, ಸುನೇತ್ರ ಪಂಡಿತ್, ಶೃತಿ ನಾಯಕ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಈ ಒಂದು ಚಿತ್ರ ಎಲ್ಲಾ ಪೋಷಕರು , ವಿದ್ಯಾರ್ಥಿಗಳು ನೋಡುವುದು ಬಹಳ ಮುಖ್ಯವಾಗಿದೆ.