ಶಂಖದ ಮಹಿಮೆಯ ಶಾಲಿವಾಹನ ಶಕೆ (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಶಾಲಿವಾಹನ ಶಕೆ
ನಿರ್ದೇಶಕ : ಗಿರೀಶ್. ಜಿ
ನಿರ್ಮಾಪಕ : ಶೈಲೇಶ್ ಕುಮಾರ್
ಸಂಗೀತ : ಹರಿ ಅಜಯ್, ಕಾರ್ತಿಕ್ ಭೂಪತಿ
ಛಾಯಾಗ್ರಹಣ : ಅರುಣ್ ಸುರೇಶ್
ತಾರಾಗಣ : ಗಿರೀಶ್, ಸುಪ್ರೀತಾ , ಚಿಲ್ಲರ್ ಮಂಜು, ಶೈಲೇಶ್ ಕುಮಾರ್, ಸುಂದರ್ ವೀಣಾ, ದಯಾನಂದ ಸಾಗರ್ , ಗೀತಾ, ಲತಾ, ಪ್ರಶಾಂತ್ ಹಾಗೂ ಮುಂತಾದವರು…
ಯುಗ ಯುಗಾಂತರದ ಸೃಷ್ಟಿಯ ಮೂಲವೇ ವಿಸ್ಮಯ. ತ್ರೇತಾ ಯುಗ , ದ್ವಾಪರ ಯುಗ ಹಾಗೂ ಸತ್ಯ ಯುಗದಲ್ಲಿ ಎದುರಾಗುವ ಒಂದಷ್ಟು ಅಲ್ಲೋಲ ಕಲ್ಲೋಲದ ನಡುವೇ ಸುಳ್ಳಿನ ಸುಳಿಗೆ ಸಿಲುಕುವ ಶೂನ್ಯ ಮಹರ್ಷಿ ತಪಸ್ಸಿನ ಮೂಲಕ ಬ್ರಹ್ಮನಿಂದ ವರವಾಗಿ ಶಕ್ತಿಯುತ ಶಂಕವನ್ನ ಪಡೆದು ಸಮಸ್ಯೆಯಿಂದ ಹೊರ ಬರುತ್ತಾರೆ.
ಆದರೆ ವಿಧಿಯ ಆಟ ಶಂಕುವು ಭೂಮಂಡಲದ ಶಾಲಿವಾಹನ ಎಂಬ ಊರಿನ ಬಾವಿಯೊಳಗೆ ಸೇರುತ್ತದೆ. ಮುಂದೆ ಯುಗಗಳೇ ಉರಳಿ , ಕಾಲಾನುಕಾಲಕ್ಕೆ ಬದುಕು ಸಾಗಿಸುತ್ತಾ ಬರುವ ಊರಿನಲ್ಲಿ ರಂಗ (ಗಿರೀಶ್) ಹಾಗೂ ಅವನ ಗೆಳೆಯರಾದ ಸೂರಿ , ದಯಾ , ಪಾಂಡ್ಯ ಕಬ್ಬಡಿ ಪಂದ್ಯಾವಳಿ ಗೆಲ್ಲುವ ಹುಮ್ಮಸ್ಸಿನಲ್ಲಿ ಊರಿನಲ್ಲಿ ಅಡ್ಡಾಡಿಕೊಂಡಿರುತ್ತಾರೆ.
ಈ ನಾಲ್ವರು ತಮ್ಮ ಕೆಲಸ ಕಾರ್ಯಗಳ ನಡುವೆ ಊರಿನ ಬಾವಿಯಲ್ಲಿ ಈಜುವುದರ ಜೊತೆಗೆ ಕಬ್ಬಡಿಗೆ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಇದರ ನಡುವೆ ರಂಗ ಹಾಗೂ ಶೃತಿ (ಸುಪ್ರೀತಾ)ಯ ಪ್ರೀತಿ , ಸಲ್ಲಾಪ. ಇನ್ನು ತಾಯಿ ಉಗಿದರು ತಲೆಕೆಡಿಸಿಕೊಳ್ಳದ ರಂಗ ಅಜ್ಜಿಯ ಪಂಚಾಂಗದ ಲೆಕ್ಕಾಚಾರದ ಬಗ್ಗೆ ಗೊಂದಲ, ಇದರ ನಡುವೆ ಬುಡುಬುಡಿಕೆಯವನ ಓಡಾಟ, ಮುಸ್ಲಿಮ್ ಭೂಬಯ್ಯನ ನೋಟ ಎಲ್ಲವೂ ಅಯೋಮಯವಾಗಿರುತ್ತದೆ.
ಒಮ್ಮೆ ಬಾವಿಯಲ್ಲಿ ಸಿಗುವ ಶಂಕವು ರಂಗನ ನೆನಪಿನಲ್ಲಿ ಕಾಡುವ ಘಟನೆಗಳು , ಮನಸ್ಥಿತಿ, ಗೋಚರವಾಗುವ ವಿಸ್ಮಯ, ಸಾವು , ನೋವು , ಹಿಂದಾಗಿರುವ , ಮುಂದಾಗುವ ಘಟನೆ , ಪ್ರಸ್ತುತದಲ್ಲಿ ಎದುರಿಸುವ ತಾಳಮಳಗಳು ದೊಡ್ಡ ಗೊಂದಲ್ಲವನ್ನೇ ಸೃಷ್ಟಿ ಮಾಡುತ್ತದೆ. ರಂಗನಿಗೆ ಶಂಕದ ಮಹಿಮೆ ಹಾಗೂ ಶಕ್ತಿಯನ್ನು ಬಳಸಿಕೊಳ್ಳುವ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳು ಸತ್ಯ ಹಾಗೂ ಸುಳ್ಳಿನ ನಡುವೆ ಬದುಕಿನ ವಿಧಿಯ ಆಟದ ಮುಂದೆ ಎಲ್ಲವೂ ಶೂನ್ಯ ಎಂದುಕೊಳ್ಳಬೇಕೋ… ಇಲ್ಲವೋ… ಎನ್ನುವ ಹಂತಕ್ಕೆ ರೋಚಕ ತಿರುವುಗಳು ಪಡೆಯುತ್ತಾ ಸಾಗುತ್ತದೆ.
ಶಂಕದ ಶಕ್ತಿ ಏನು…
ಇದು ಟೈಮ್ ಲೂಪ್ ಕಥೆ ನಾ.
ರಂಗ ಕಂಡ ಉತ್ತರ ಏನು…
ಶಾಲಿವಾಹನ ಶಕೆ…?
ಕ್ಲೈಮಾಕ್ಸ್ ಕೊಟ್ಟ ಉತ್ತರ…
ಇದಕ್ಕಾಗಿ ನೀವು ಈ ಚಿತ್ರವನ್ನು ಒಮ್ಮೆ ನೋಡಲೇಬೇಕು.
ಈ ಚಿತ್ರದ ನಿರ್ದೇಶಕ ಗಿರೀಶ್ ಆಲೋಚನೆ ಮಾಡಿರುವ ವಿಷಯವೇ ವಿಶೇಷವಾಗಿದೆ. ತ್ರೇತಾಯುಗ ,ದ್ವಾಪರ ಯುಗ , ಸತ್ಯಯುಗ ಎನ್ನುತ್ತಾ ಋಷಿಮುನಿಗಳ ಮೂಲಕ ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಕೊಳ್ಳುವ ಹಾಗೆ ಕಥಾನಕ ಬೆಸೆದಿರುವು ರೀತಿಯೇ ವಿಭಿನ್ನ. ಇಲ್ಲಿ ಶಂಕವೇ ಪ್ರಮುಖ ಪಾತ್ರ ವಹಿಸಿದ್ದು, ಈಗಾಗಲೇ ಸಾಕಷ್ಟು ಟೈಮ್ ಲೂಪ್ ಸಿನಿಮಾಗಳು ಬಂದಿವೆ.
ಆದರೆ ಹಳ್ಳಿ ಸೊಗಡಿನೊಂದಿಗೆ ಗೆಳೆಯರ ಸಾವಿನ ರಹಸ್ಯದ ಸುಳಿಯ ಸುತ್ತ , ವಿಸ್ಮಯಗಳ ಪವಾಡ , ಶಂಕದ ಶಕ್ತಿ , ಮಹಿಮೆ ಹಾಗೂ ಅದರ ಹಿಂದಿರುವ ರಹಸ್ಯದ ಜೊತೆ ಚಿರತೆ ಕಾಟದ ನಡುವೆ ಸಾಗುವ ಕಥಾನಕ ರೋಚಕವಾಗಿದೆ. ಆದರೆ ಚಿತ್ರಕಥೆಯಲ್ಲಿ ಒಂದು ವಿಚಾರದ ಸುತ್ತ ನಾಲ್ಕು ಬಾರಿ ನೋಡುವುದು ಕಷ್ಟ ಅನಿಸುತ್ತದೆ.
ಒಂದಷ್ಟು ಬೇರೆ ಅಂಶದೊಂದಿಗೆ ವೇಗ ಮಾಡಬಹುದಿತ್ತು. ನಿರ್ದೇಶನದ ಜವಾಬ್ದಾರಿ ಜೊತೆ ನಾಯಕನಾಗಿ ಅಭಿನಯಿಸಿರುವ ಗಿರೀಶ್ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇಂತಹ ಕುತೂಹಲಕಾರಿ ಚಿತ್ರ ನಿರ್ಮಿಸಿರುವ ಶೈಲೇಶ್ ಕುಮಾರ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಅದೇ ರೀತಿ ಮೂವರು ಗೆಳೆಯರ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಸುಪ್ರೀತಾ ಸತ್ಯನಾರಾಯಣ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಬೂಬಯ್ಯನಾಗಿ ಸುಂದರ್ ವೀಣಾ ಗಮನ ಸೆಳೆದಿದ್ದು , ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ ನೀಡಿದ್ದಾರೆ. ಇನ್ನು ಚಿತ್ರದ ಸಂಗೀತಕ್ಕಿಂತ ಹಿನ್ನಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಹಕ ಹಾಗೂ ಸಂಕಲನದ ಕೈಚಳಕ ಉತ್ತಮವಾಗಿದ್ದು ವಿ.ಎಫ್. ಎಕ್ಸ್ ಆಕರ್ಷಕವಾಗಿದೆ. ಬಹಳ ಥ್ರಿಲ್ಲಿಂಗ್ ಆಗಿದ್ದು , ಟೈಮ್ ಲೂಪ್ ಮೂಲಕ ಒಂದು ವೇಳೆ ಲೈಫ್ ನಲ್ಲಿ ನಡೆದ ಘಟನೆಯನ್ನು ಸರಿಪಡಿಸಿಕೊಳ್ಳಲು ಚಾನ್ಸ್ ಸಿಕ್ಕರೆ ಏನು ನಡೆಯಬಹುದು ಎಂಬುದನ್ನ ತಿಳಿದು ಕೊಳ್ಳಬೇಕಾದರೆ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬೇಕು.