Cini NewsSandalwood

ರವಿಚಂದ್ರನ್ ಚಿತ್ರದ ಪ್ರೇಮಗೀತೆಗೆ ದನಿಯಾದ ಶ್ರೇಯಾ ಘೋಷಾಲ್

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ಅವರು ಕನ್ನಡದಲ್ಲಿ ಹಾಡುತ್ತಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಹಲವು ಸಂಗೀತ ನಿರ್ದೇಶಕರು ಪ್ರಯತ್ನಿಸಿದರೂ ಆಗಿರಲಿಲ್ಲ. ಆದರೆ ಕ್ರೇಜಿಸ್ಡಾರ್ ರವಿಚಂದ್ರನ್ ಅವರ ಚಿತ್ರಕ್ಕಾಗಿ ಅವರು ಮತ್ತೆ ಕನ್ನಡ ಪ್ರೇಮ ಗೀತೆಯೊಂದಕ್ಕೆ ದನಿಯಾಗಿದ್ದಾರೆ. ಹೌದು, ಪಳನಿ ಡಿ.ಸೇನಾಪತಿ ಅವರ ಸಂಗೀತ ನಿರ್ದೇಶನದ, ಕವಿರಾಜ್ ಸಾಹಿತ್ಯವಿರುವ ‘ಒಂದೇ ಮಾತಲ್ಲಿ ಹೇಳೋದಾದರೆ’ ಎಂಬ ಹಾಡನ್ನು ಹಾಡಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಆರಂಭವಾಗಿ, ಇದೀಗ ಕೊನೇ ಹಂತ ತಲುಪಿದೆ. ಎಸ್.ಎಂ. ಪ್ರೊಡಕ್ಷನ್ಸ್ ಮೂಲಕ ಹೆಚ್.ಎಸ್. ನಾಗಶ್ರೀ ಅವರ ನಿರ್ಮಾಣದ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದ ಜನವರಿಯಲ್ಲಿ ಈ ಚಿತ್ರದ ಡ್ಯುಯೆಟ್ ಸಾಂಗನ್ನು ಶ್ರೇಯಾ ಘೋಷಾಲ್ ಅವರ ಕಂಠದಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು.

ಪ್ರೀತಿ ಪ್ರೇಮದ ಕಥೆಯ ಜತೆಗೆ ತಂದೆ ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನೂ ತೆರೆದಿಡುವಂಥ ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರಕ್ಕೆ ಉತ್ತರ ಭಾರತದ ಕಾಶ್ಮೀರ, ರಾಜಸ್ಥಾನ, ಅಂಡಮಾನ್ ದ್ವೀಪ ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಈಗಾಗಲೇ 70 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಇನ್ನೂ 15 ದಿನಗಳ ಕಾಲ ವಿದೇಶದಲ್ಲಿ ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣ ನಡೆಸೋ ಯೋಜನೆಯೂ ಚಿತ್ರತಂಡಕ್ಕಿದೆ. ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ, ಪಳನಿ ಡಿ.ಸೇನಾಪತಿ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸೋನು ನಿಗಮ್, ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮಚ್ಚಲ್ ಕೂಡ ಈ ಚಿತ್ರದಲ್ಲಿ ಹಾಡಿದ್ದಾರೆ. ಹಿರಿಯನಟ ಶ್ರೀನಿವಾಸ ಮೂರ್ತಿ, ವಿಜಯ ಸೂರ್ಯ, ಶಂಕರ್ ಅಶ್ವಥ್ ಉಳಿದ ಪಾತ್ರವರ್ಗದಲ್ಲಿದ್ದಾರೆ.

error: Content is protected !!