ಬದುಕಿನ ವಾಸ್ತವತೆಯ ಕನ್ನಡಿ…’ಸಿದ್ಲಿಂಗು 2′ (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಸಿದ್ಲಿಂಗು 2
ನಿರ್ದೇಶಕ : ವಿಜಯಪ್ರಸಾದ್
ನಿರ್ಮಾಪಕರು : ಶ್ರೀಹರಿ , ರಾಜು ಶೇರಿಗಾರ್
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಪ್ರಸನ್ನ
ತಾರಾಗಣ : ಯೋಗಿ, ಸೋನು ಗೌಡ, ಸುಮನ್ ರಂಗನಾಥ್, ಸೀತಾ ಕೋಟೆ, ಮಹಾಂತೇಶ್, ಆ್ಯಂಟೋನಿ ಕಮಲ್, ಮಂಜುನಾಥ ಹೆಗಡೆ ಹಾಗೂ ಮುಂತಾದವರು…
ಬದುಕಿನ ಪಯಣದಲ್ಲಿ ಪ್ರತಿಯೊಬ್ಬರಿಗೂ ಜೀವ ಹಾಗೂ ಜೀವನದ ಪಾಠದ ಅರಿವು ತಿಳಿಯುವ ಸಮಯ ಬಂದೇ ಬರುತ್ತದೆ. ಸ್ನೇಹ , ಪ್ರೀತಿ , ಮಾನವೀಯತೆ ಮೌಲ್ಯ , ಸಂಬಂಧಗಳ ಅರ್ಥ , ನೋವುವಿನ ತಳಮಳಗಳು ಕಾಲಾನುಕಾಲಕ್ಕೆ ಅರ್ಥವಾಗುತ್ತಾ ಹೋಗುತ್ತದೆ. ಅಂತದೇ ಬದುಕಿನ ವಾಸ್ತವ ಘಟನೆಗಳ ಸುತ್ತ ಬೆಸೆದುಕೊಂಡು ಸಿದ್ಲಿಂಗುವಿನ ಮೊದಲ ಭಾಗದ ಕೊಂಡಿಯಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸಿದ್ಲಿಂಗು ಭಾಗ 2”.
ಇನ್ನು ಸಿದ್ಲಿಂಗು (ಲೂಸ್ ಮಾದ ಯೋಗಿ) ತನ್ನ ನೆಚ್ಚಿನ ಮಂಗಳ ಟೀಚರ್ ಸಾವಿನ ನೋವಿನಲ್ಲಿ ಮುಂದಿನ ಪಯಣ ಆರಂಭಿಸುವಾಗ ಸಿಗುವ ರುದ್ರ ಭೂಮಿ ನೋಡಿಕೊಳ್ಳುವ ಸೀತಮ್ಮ (ಪದ್ಮಿನಿ ಪ್ರಸಾದ್) ಹಾಗೂ ಆಕೆಯ ಗಂಡ , ಮಕ್ಕಳ ಬದುಕಿನ ಸ್ಥಿತಿಗತಿಗಳ ನಡುವೆ, ತನ್ನ ಗಾರ್ಮೆಂಟ್ ಫ್ಯಾಕ್ಟರಿ ಮಾಲೀಕರ ಸಹಕಾರದೊಂದಿಗೆ ನೆಲೆ ಕಾಣುವ ಸಿದ್ಲಿಂಗು , ಮನೆ ಕೆಲಸದಾಕೆ ವಿಶಾಲು ಮೂಲಕ ನಿವೇದಿತ (ಸೋನು ಗೌಡ) ಪರಿಚಯ.
ಆಕೆಯ ಸಮಸ್ಯೆಗೆ ಸಹಕಾರಿ ಆಗುವ ಸಿದ್ಲಿಂಗುಗೆ ತನ್ನ ಅದೃಷ್ಟದ ಪ್ರೀತಿಯ ಕಾರು ಇರುವ ಸ್ಥಳ ತಿಳಿಯುತ್ತದೆ. ಇದೇ ಸಮಯಕ್ಕೆ ತುರುವೇಕೆರೆ ಆಂಡಾಳಮ್ಮ (ಸುಮನ್ ರಂಗನಾಥ್) ಪ್ರವೇಶವಾಗುತ್ತದೆ. ಇನ್ನು ಕಾರ್ ಪಡೆಯುವ ಹಾದಿಯಲ್ಲಿ ನಿವೇದಿತ ಪ್ರೀತಿ ಗಳಿಸುವ ಸಿದ್ಲಿಂಗುಗೆ, ಕಾರ್ ಓನರ್ ಮುಕುಂದರಾಯ (ಬಿ. ಸುರೇಶ್) ನಿಂದ ಒಂದು ಸಮಸ್ಯೆ ಎದುರಾಗುತ್ತದೆ.
ಇದು ಚಿತ್ರದ ಸೂಕ್ಷ್ಮ ತಿರುವಿಗೆ ಕಾರಣವಾಗುತ್ತದೆ ಅದು ಏನು… ಯಾರಿಂದ… ಏಕೆ… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ನೀವೆಲ್ಲರೂ ಈ ಚಿತ್ರವನ್ನು ನೋಡಬೇಕು.
ಇನ್ನು ಡಬಲ್ ಮೀನಿಂಗ್ ಸಂಭಾಷಣೆ ಇರಬಹುದು ಎನ್ನುವವರಿಗೆ ಮೀನಿಂಗ್ ಫುಲ್ ಚಿತ್ರವನ್ನು ನೀಡಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್. ಬಹಳ ಸೂಕ್ಷ್ಮವಾಗಿ ಮಾನವೀಯ ಮೌಲ್ಯ , ಬದುಕಿನ ಏರಿಳಿತ, ಸಂಬಂಧಗಳ ಬೆಸುಗೆ , ವಾಸ್ತವತೆಯ ಸ್ಪಷ್ಟ ಅನುಭವಗಳನ್ನು ಹಂತ ಹಂತವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದ ಹೈಲೈಟ್ಗಳಲ್ಲಿ ಸಂಭಾಷಣೆ ಕೂಡ ಪ್ರಮುಖ, ಯಾಕೆಂದರೆ ಓಟಕ್ಕೆ ಪೂರಕವಾಗಿ ಕೆಲವು ವಿಶೇಷ ವ್ಯಕ್ತಿಗಳ ಹೆಸರು ಬಳಸಿರುವ ರೀತಿ ಅದ್ಭುತವಾಗಿದೆ. ಚಿತ್ರಕಥೆ ವಿಭಿನ್ನವಾಗಿದ್ದರೂ ಕಮರ್ಷಿಯಲ್ ಅಂಶಗಳಿಂದ ಹೊರ ಉಳಿದಂತಿದೆ. ಇನ್ನು ಭಾಗ-1ಕ್ಕೆ ಕೊಂಡಿಯಂತೆ ಚಿತ್ರ ಸಾಗಿದ್ದು, ಪಾತ್ರಗಳನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನಸ್ಸನ್ನ ಸೆಳೆಯುವಂತಿದೆ.
ಸಮಾಜಕ್ಕೆ ಒಂದು ಅರ್ಥಪೂರ್ಣ ಚಿತ್ರವನ್ನು ನೀಡಲು ಮುಂದಾದ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೇಬೇಕು. ಇನ್ನು ಈ ಚಿತ್ರಕ್ಕೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿಬಂದಿದ್ದು, ಸ್ವಾಮಿ ಶರಣಂ ಅಯ್ಯಪ್ಪ ಹಾಡು ಸೇರಿದಂತೆ ಒಂದೊಂದು ಹಾಡು ಮನ ಸೆಳೆಯುತ್ತದೆ.
ಸಂಭಾಷಣೆ ಹಂತ ಹಂತವಾಗಿ ಗಮನ ಸೆಳೆಯುತ್ತದೆ. ಸಂಕಲನ , ಛಾಯಾಗ್ರಾಹಣ ಸೇರಿದಂತೆ ತಾಂತ್ರಿಕ ವರ್ಗದ ಕೆಲಸ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇನ್ನು ನಟ ಯೋಗಿ ನೈಜಕ್ಕೆ ಪೂರಕವಾಗಿ ಜೀವ ತುಂಬಿದ್ದಾರೆ. ಸಿದ್ಲಿಂಗು ನನ್ನ ನೆನಪು ಹಾಗೂ ನೋವಿನ ಬುತ್ತಿಯನ್ನು ಭಾಗ ಎರಡಕ್ಕೂ ಹೊತ್ತುಕೊಂಡು ಬಂದಿರುವ ರೀತಿ ಗಮನ ಸೆಳೆಯುತ್ತದೆ. ಇನ್ನು ಹೆಚ್ಚು ಮಾಗಿದಂತೆ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.
ಅದೇ ರೀತಿ ನಟಿ ಸೋನು ಗೌಡ ಸರ್ಕಾರಿ ಟೀಚರ್ ನಿವೇದಿತ ಪಾತ್ರವನ್ನು ಮಾತಿಗಿಂತ ಹೆಚ್ಚು ಮೌನದಲ್ಲೇ ಸೆಳೆದಿದ್ದಾರೆ. ರುದ್ರ ಭೂಮಿಯಲ್ಲಿ ಕಾಯಕ ಮಾಡುವ ಸೀತಮ್ಮ ಪಾತ್ರದಲ್ಲಿ ಪದ್ಮಜಾ ರಾವ್ ಮನ ಮಿಡಿಯುವಂತೆ ಅಭಿನಯಿಸಿದ್ದು , ಎರಡು ಶೇಡ್ ಗಳಲ್ಲಿ ಮಂಜುನಾಥ್ ಹೆಗಡೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ನಟಿ ಸುಮನ್ ರಂಗನಾಥ್ ಮೊದಲ ಭಾಗದ ತುರುವೇಕೆರೆ ಆಂಡಲಮ್ಮನಾಗಿ ಇಲ್ಲಿಯೂ ಮುಂದುವರೆದಿದ್ದಾರೆ.
ಇನ್ನು ಮಿನಿಮಿನಿ ಪಾತ್ರದ ಬಾಲ ನಟಿ , ಹಳೆ ಬೆವರ್ಸಿ ಪಾತ್ರಧಾರಿ ಮಂಜುನಾಥ್ , ವಿಶಾಲು ಪಾತ್ರದಲ್ಲಿ ಸೀತೆ ಕೋಟೆ , ಮುಕುಂದರಾಯ ಪಾತ್ರಧಾರಿ ಬಿ. ಸುರೇಶ್ , ಮಾಂತೇಶ್ ಹಿರೇಮಠ್ , ಆಂಟೋನಿ ಕಮಾಲ್ , ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿರುವ ನಿರ್ದೇಶಕ ವಿಜಯ್ ಪ್ರಸಾದ್ ಓಟದ ಪ್ರತಿ ತಿರುವಿಗೂ ಕೊಂಡಿಯಾಗಿದ್ದು , ಎಲ್ಲಾ ಪಾತ್ರಗಳು ಆಕರ್ಷಕವಾಗಿದೆ. ಒಟ್ನಲ್ಲಿ ಒಂದು ಉತ್ತಮ ಅರ್ಥಪೂರ್ಣ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದು , ಎಲ್ಲರೂ ಕುಳಿತು ಒಮ್ಮೆ ನೋಡುವಂತ ಚಿತ್ರ ಇದಾಗಿದೆ.