“ಸಿದ್ಲಿಂಗು-2” ಚಿತ್ರದ ಮುಹೂರ್ತಕ್ಕೆ ಚಾಲನೆ
ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ವಿಭಿನ್ನ ಶೈಲಿಯ ಚಿತ್ರಕಥೆ ಮೂಲಕ ತುಂಟಾಟ , ತರ್ಲೆ , ಚೇಷ್ಟೆಯನ್ನ ಚಿತ್ರಗಳ ಮೂಲಕ ಒಂದಷ್ಟು ಹಸಿ ಬಿಸಿ ಮಾತುಗಳಿಂದ ಗಮನ ಸೆಳೆದಂತ ನಿರ್ದೇಶಕ ವಿಜಯ್ ಪ್ರಸಾದ್. ಸರಿಸುಮಾರು 12 ವರ್ಷಗಳ ಹಿಂದೆ ಬಂದ “ಸಿದ್ಲಿಂಗು” ಸಿನಿಮಾ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಒಂದೊಳ್ಳೆ ಕಥೆ, ಸಂಬಂಧಗಳ ಮೌಲ್ಯಗಳು, ಕಾಮಿಡಿ, ಪ್ರೀತಿ, ಡೈಲಾಗ್ಸ್, ಸಾಹಿತ್ಯ, ಸಂಗೀತ ಹಾಗೂ ಮೇಕಿಂಗ್.
ಈಗ ಅಂತಹದ್ದೇ ಒಂದಿಷ್ಟು ವಿಭಿನ್ನ ಫೀಲ್ ನೀಡುವಂತಹ ಹಾದಿಯಲ್ಲಿ ಸಿದ್ಲಿಂಗು-2 ಸೆಟ್ಟೇರಿದೆ. ಈ ಸೀಕ್ವೆಲ್ ಸಿನಿಮಾನದಲ್ಲಿ ಲೂಸ್ ಮಾದ ಯೋಗಿ ಜೊತೆಗೇನೇ ಸಿನಿಮಾ ಶುರು ಮಾಡ್ತಿರೋ ವಿಜಯ್ ಪ್ರಸಾದ್ ನಿರ್ಮಾಪಕರ ಮನೆದೇವರ ಆಲಯದಲ್ಲಿ ಮುಹೂರ್ತ ನೆರವೇರಿಸಿದರು. ಈ ಚಿತ್ರವನ್ನು ಜಮಾಲಿಗುಡ್ಡ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ತಮ್ಮ ನಿಹಾರಿಕಾ ಫಿಲಂಸ್ ಬ್ಯಾನರ್ನಡಿ ನಿರ್ಮಿಸುತ್ತಿದ್ದು, ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಮಾಡಿ ಒಂದಷ್ಟು ಮಾಹಿತಿ ನೀಡಿದರು.
ಈ ಹಿಂದೆ ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಸಿನಿಮಾಗಳ ಬಳಿಕ ಡಬಲ್ ಮೀನಿಂಗ್ ಡೈಲಾಗ್ಸ್ ಗೆ ಕಡಿವಾಣ ಹಾಕಿ, ಹೊಸ ಹುರುಪು ಹುಮ್ಮಸ್ಸಿನಿಂದ ಸಿದ್ಲಿಂಗು-2 ಮಾಡೋಕೆ ಮುಂದಾಗಿರುವ ನಿರ್ದೇಶಕ ವಿಜಯ ಪ್ರಸಾದ್ ಮಾತನಾಡುತ್ತಾ ಇಲ್ಲಿ ಬರೀ ಮೀನಿಂಗ್ ಇರಲಿದೆ. ಡಬಲ್ ಮೀನಿಂಗ್ ಇರಲ್ಲ ಅಂತ ಜನಕ್ಕೆ ಕೈ ಮುಗಿದರು. ಅಲ್ಲದೆ, ಯಾರೂ ನಂಬಲಾರದ ಸ್ಥಿತಿಯಲ್ಲಿದ್ದ ತನ್ನನ್ನ ನಂಬಿದ ಪ್ರೊಡ್ಯೂಸರ್ ಗೆ ಥ್ಯಾಂಕ್ಸ್ ಹೇಳಿದ್ರು.
ಈ ಬಾರಿ 6 ರಿಂದ 60 ವರ್ಷದ ಎಲ್ಲರೂ ನೋಡಬಹುದಾದ ಸಿನಿಮಾ ಕೊಡೋ ಭರವಸೆ ನೀಡಿದರು. ಇನ್ನು ಈ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ಮಾತನಾಡುತ್ತಾ ನಮ್ಮ ಚಿತ್ರದ ನಿರ್ದೇಶಕ , ಕಲಾವಿದರ ಬಗ್ಗೆ ಬಹಳಷ್ಟು ನಂಬಿಕೆ ಇದೆ. ಒಂದು ವಿಭಿನ್ನ ಚಿತ್ರ ನಿಮಗೆ ನೀಡುವ ಭರವಸೆಯನ್ನು ಕೊಡುತ್ತೇನೆ. ನಿಮ್ಮೆಲ್ಲರ ಸಹಕಾರ , ಪ್ರೀತಿ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಂಡರು.
ನಾಯಕ ನಟ ಲೂಸ್ ಮಾದ ಯೋಗಿ ಮಾತನಾಡಿ, ಇದು ನನ್ನ ಕರಿಯರ್ ಗೆ ಮಹತ್ವದ ತಿರುವು ಕೊಟ್ಟ ಸಿನಿಮಾ. ಹಾಗಾಗಿ ಅದ್ರ ಸೀಕ್ವೆಲ್ ಬರ್ತಿರೋದು ಖುಷಿಯ ವಿಚಾರ. ಹದಿನೈದು ವರ್ಷದ ಗೆಳತಿ ಸೋನು ಗೌಡ ಜೊತೆ ಇಲ್ಲಿಯವರೆಗೂ ಸಿನಿಮಾ ಮಾಡೋ ಅವಕಾಶಗಳು ಸಿಗಲೇ ಇಲ್ಲ. ಇದೀಗ ಒಟ್ಟಿಗೆ ಕೆಲಸ ಮಾಡ್ತಿರೋದು ಸಂತೋಷವಾಗ್ತಿದೆ. ರಮ್ಯಾ ಅವ್ರು ಇರಲ್ಲ, ಆಂಡಾಳಮ್ಮ ನನ್ನ ಬಿಡಲ್ಲ ಅಂದ್ರು.
ಈ ಒಂದು ಚಿತ್ರ ಬೇರೆದೇ ಶೈಲಿಯಲ್ಲಿ ಹೊರಬರಲಿದೆ ನಿಮ್ಮೆಲ್ಲರ ಸಹಕಾರ ವಿರಲಿ ಎಂದು ಕೇಳಿಕೊಂಡರು. ಇನ್ನು ನಟಿ ಸೋನು ಗೌಡ ಮಾತನಾಡುತ್ತಾ ಕಿರಗೂರಿನ ಗಯ್ಯಾಳಿಗಳು ಸಿನಿಮಾದ ಪಾತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಡೈರೆಕ್ಟರ್, ಸಿದ್ಲಿಂಗು-2ಗೆ ಆಫರ್ ಮಾಡಿದ್ದು ನಿಜಕ್ಕೂ ಸರ್ಪ್ರೈಸ್ ಅಗಿದೆ. ಕಲಾವಿದೆಯಾಗಿ ನಾನು ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತೇನೆ ಅಂತ ಅವಕಾಶ ನೀಡಿದ ಡೈರೆಕ್ಟರ್ ಗೆ ಧನ್ಯವಾದ ಹೇಳಿದ್ರು, ಹಾಗೆಯೇ ಸುಮಾರು ವರ್ಷದ ಗೆಳೆಯನ ಯೋಗಿ ಜೊತೆ ಅಭಿನಯಿಸುತ್ತಿರುವ ಬಗ್ಗೆ ಕೊಂಡಾಡಿದ್ರು , ಈ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ಇದೆ ಎಂದು ಹೇಳಿಕೊಂಡರು.
ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿರಲಿದ್ದು, ಪದ್ಮಜಾ ರಾಜ್, ಆಂಟೊನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ. ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಟೀಂ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ತಂಡ ಹಂತ ಹಂತವಾಗಿ ನೀಡಲಿದೆ.