ದೇವಿ ಶಕ್ತಿ , ಪವಾಡಗಳ “ಸಿಂಹರೂಪಿಣಿ ” ಟೀಸರ್ ಬಿಡುಗಡೆ.
ಬಹಳ ವರ್ಷಗಳ ನಂತರ ಮತ್ತೊಮ್ಮೆ ದೇವಿ ಶಕ್ತಿ , ಪವಾಡ , ಭಕ್ತವೃಂದ ಕಥಾನಕವನ್ನು ಬೆಳ್ಳಿ ಪರದೆ ಮೇಲೆ ನೋಡುವ ಅವಕಾಶ ಒದಗಿ ಬಂದಿದೆ. ವಿಶೇಷವಾಗಿ ಗುರು ಪೂರ್ಣಿಮೆ ದಿನದಂದು ’ಸಿಂಹರೂಪಿಣಿ’ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆ ಸಮಾರಂಭವು ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವೇದಿಕೆ ಮೇಲೆ ಸಾಕ್ಷಾತ್ ಮಾರಮ್ಮ ದೇವಿ ಪ್ರತಿಷ್ಠಾಪನೆ, ಮಾವಿನ ಮತ್ತು ಬೇವಿನ ಎಲೆಯಿಂದ ಸಿಂಗಾರ ಗೊಳಿಸಿದ್ದು, ಬಂದಂತ ಭಕ್ತವೃಂದ ಹಾಗೂ ಸಿನಿಮಾ ಪ್ರೇಮಿಗಳಿಗೆ ಅಮ್ಮನವರ ದರ್ಶನ ಸಿಕ್ಕಂತಾಯಿತು. ಈ ಒಂದು ವಿಶೇಷವಾದ ಭಕ್ತಿ ಪ್ರಧಾನ ಚಿತ್ರಕ್ಕೆ ಕಿನ್ನಾಳ್‌ರಾಜ್ ಚಿತ್ರಕಥೆ , ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದು , ದೊಡ್ಡಬಳ್ಳಾಪುರ ಕೆ.ಎಂ. ನಂಜುಂಡೇಶ್ವರ ಕಥೆ ಬರೆದು ಶ್ರೀ ಚಕ್ರ ಫಿಲಿಂಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಆಕಾಶ್‌ಪರ್ವ ಸಂಗೀತ, ಕಿರಣ್‌ಕುಮಾರ್ ಛಾಯಾಗ್ರಹಣ, ವೆಂಕಿ.ಯುಡಿವಿ ಸಂಕಲನ, ಕಿಶೋರ್ ಕಲರಿಸ್ಟ್, ಸಾಹಸ ಥ್ರಿಲ್ಲರ್‌ಮಂಜು-ಚಂದ್ರು ಬಂಡೆ-ಮಂಜುನಾಗಪ್ಪ, ಸೌಂಡ್ ಎಫೆಕ್ಟ್ ನಂದು.ಜೆ ಇವರುಗಳ ಶ್ರಮದಿಂದ ಸಿದ್ದಗೊಂಡಿರುವ 1.45 ನಿಮಿಷದ ತುಣುಕುಗಳು ದೊಡ್ಡ ಪರದೆ ಮೇಲೆ ಅನಾವರಣಗೊಂಡಿತು.
ಪ್ಯಾನ್ ಇಂಡಿಯಾ ಸಂಗೀತ ಸಂಯೋಜಕ ರವಿಬಸ್ರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಿರ್ದೇಶಕರು, ನಿರ್ಮಾಪಕರ ದೇವಿಯ ಮೇಲಿನ ಭಕ್ತಿ, ತಂತ್ರಜ್ಘರ ಕೆಲಸಗಳು ಚೆನ್ನಾಗಿ ಮೂಡಿಬಂದಿದೆ. ದೃಶ್ಯಗಳನ್ನು ನೋಡಿ ನನಗೆ ಆದಂತ ಕಂಪನ ಎಲ್ಲರಿಗೂ ಆಗಿದೆ ಅಂತ ಭಾವಿಸುತ್ತೇನೆ. ನನ್ನ ನಿರ್ದೇಶಕರ ಪಯಣ ಸುಮಾರು 15 ವರ್ಷದಷ್ಟು ಹಳೆಯದು. ಇವರ ನಿರ್ದೇಶನದಲ್ಲಿ ನಾನು ಸಂಗೀತ ಕಂಪೋಸ್ ಮಾಡಬೇಕೆಂದು ಆ ಸಮಯದಲ್ಲಿ ಮಾತಾಡಿಕೊಂಡಿದ್ದೇವು. ಅಲ್ಲಿಂದ ಒಂದಷ್ಟು ಸಿನಿಮಾಗಳಲ್ಲಿ ನಾವಿಬ್ಬರು ಸೇರಿದ್ದೇವು. ಉದ್ಯಮದ ಬೆಳವಣಿಗೆಗೆ ಇಂತಹ ಪ್ರತಿಭೆಗಳ ಪಾತ್ರ ತುಂಬ ಅಗತ್ಯವಿದೆ ಎಂದರು.
ಇನ್ನು ಕಾಟೇರ ಚಿತ್ರಕ್ಕೆ ದುಡಿದಂತ ಜಡೇಶ್‌ಕುಮಾರ್ ಪೋಸ್ಟರ್ ಬಿಡುಗಡೆ ಮಾಡಿ ನಂತರ ಮಾತನಾಡುತ್ತಾ, ನಿರ್ದೇಶಕರು ನಮ್ಮ ಊರಿನ ಪಕ್ಕದವರು. ಪ್ರಾರಂಭದಿಂದಲೂ ಅವರ ಶ್ರಮವನ್ನು ನೋಡುತ್ತಾ ಬಂದಿದ್ದೇನೆ. ಚಿತ್ರದಲ್ಲಿ ನಮ್ಮ ಊರಿನ, ಭಾಗದ ಸಂಸ್ಕ್ರತಿಯನ್ನು ತೋರಿಸಲಾಗಿದೆ. ಅಂತಹ ಪ್ರಯತ್ನಗಳು ನಡೆದಾಗಲೇ ಮಾಹಿತಿಗಳು ಎಲ್ಲರಿಗೂ ತಿಳಿಯುತ್ತದೆ. ಮ್ಯೂಸಿಕ್ ಚೆನ್ನಾಗಿದೆ. ಕಾಟೇರ ಕೋಣ ಇಲ್ಲಿಗೆ ಯಾಕೆ ಬಂತು ಅಂತ ಕೇಳಿದೆ. ಸಿನಿಮಾ ನೋಡಿ ಅಂತಾರೆ. ನಿಮ್ಮಗಳ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಜೀವನದಲ್ಲಿ ನನ್ನ ಹೆಸರು ಟೈಟಲ್ ಕಾರ್ಡ್‌ದಲ್ಲಿ ಕಾಣಿಸಬೇಕೆಂದು ಆಸೆಪಟ್ಟವನು. ರವಿಬಸ್ರೂರು ’ಅಂಜನಿಪುತ್ರ’ ಸಿನಿಮಾಕ್ಕೆ ಹಾಡು ಬರೆಯಲು ಅವಕಾಶ ಮಾಡಿಕೊಟ್ಟರು. ನಂತರ ’ಕೆಜಿಎಫ್’ನಿಂದ ಎಲ್ಲರೂ ಗುರುತು ಹಿಡಿಯುವಂತಾಯಿತು. ಈಗ ತಾಯಿ ಚಿತ್ರ ಮಾಡುತ್ತಿದ್ದೇನೆ. ಶೀರ್ಷಿಕೆ ಹೇಳುವಂತೆ ಶ್ರೀ ಮಾರಮ್ಮ ದೇವಿ ಕುರಿತಾಗಿದ್ದು, ಗ್ರಾಫಿಕ್ಸ್ ತಂತ್ರಜ್ಘಾನ ಇರುವುದು ವಿಶೇಷ. ಸಪ್ತ ಮಾತ್ರ್ರಿಕೆಯರ ವಿಷಯಗಳನ್ನು ಹೊಂದಿದ್ದು, ರಾಕ್ಷಸನನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾಳೆ. ಅದರಲ್ಲಿ ಕೊನೆಯದು ಶ್ರೀ ಮಾರಮ್ಮ ದೇವಿಯದು ಆಗಿರುತ್ತದೆ. ತಾಯಿಯ ಮಹಿಮೆ, ಪವಾಡಗಳು, ಈಗಿನ ಟ್ರೆಂಡ್‌ಗೆ ತಕ್ಕಂತೆ ಕಮರ್ಷಿಯಲ್ ಅಂಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನಿರ್ಮಾಪಕರ ಹುಟ್ಟಿದ ಹಬ್ಬ, ಗುರುಪೂರ್ಣೀಮೆ ಶುಭದಿನವಾಗಿದ್ದರಿಂದ ಕಾರ್ಯಕ್ರಮ ಏರ್ಪಾಟು ಮಾಡಲಾಗಿದೆ. ಚಿತ್ರದಲ್ಲಿ 132 ಕಲಾವಿದರು ಅಭಿನಯಿಸಿದ್ದಾರೆ. ನಿರ್ಮಾಪಕರ ಕಥೆಗೆ ಚಿತ್ರರೂಪ ಕೊಟ್ಟಿದ್ದೇನೆ. ಹಾಡು ಬರೆಯಲು ಹೋದವನು, ಅಂತಿಮವಾಗಿ ನಿರ್ದೇಶನ ಮಾಡಲು ಹೇಳಿದ್ದೆ, ಇಲ್ಲಿಯ ತನಕ ತಂದು ನಿಲ್ಲಿಸಿದೆ. ಗ್ರಾಫಿಕ್ಸ್ 15 ನಿಮಿಷದ ಕಾಲ ಬರುತ್ತದೆ. ಸದ್ಯ ಸಿಜಿ ನಡೆಯುತ್ತಿದ್ದು, ಕೋಣ ಯಾಕೆ ಇದೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದೆಂದು ಕಿನ್ನಾಳ್‌ರಾಜ್ ಕುತೂಹಲ ಕಾಯ್ದಿರಿಸಿದರು.
ನಿರ್ಮಾಪಕ ಕೆ.ಎಂ. ನಂಜುಡೇಶ್ವರ ಹೇಳುವಂತೆ ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ಅನುಭವ ಆಗಿರುತ್ತದೆ. ತಾಯಿ ವಿರಾಜಮಾನವಾಗಿ ಕೂತಿದ್ದಾಳೆ. ನೀವುಗಳು ದರ್ಶನ ಮಾಡಿದ್ದೀರಾ. ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ. ತಾಯಿಯ ಅನುಭವವನ್ನು ಫೀಲ್ ಮಾಡಿ. ತ್ರಿಮೂರ್ತಿ, ತ್ರಿಶಕ್ತಿ , ಸರ್ವಶಕ್ತಿ ಸ್ವರೂಪಿಣಿ ಗ್ರಾಮ ದೇವತೆ ಮಾರಮ್ಮ. ಮೂರು ದೇವತೆಗಳು, ತ್ರಿಮೂರ್ತಿಗಳು. ಎಲ್ಲಾ ದೇವರುಗಳಿಗೆ ಮೂಲ ದೇವರು ಗ್ರಾಮ ದೇವತೆ. ನಿಮ್ಮೂರಿನ ದೇವತೆಯ ಪೂಜೆ ಮಾಡಿ, ಶ್ರೀಮನ್ ನಾರಾಯಣ ತಿರುಪತಿಯಲ್ಲಿ ದರ್ಶನವಾದಂತೆ ಆಗುತ್ತದೆ. ಚಿತ್ರ ನೋಡಿದ ಮೇಲೆ ನೀವುಗಳು ತಾಯಿ ಪ್ರೀತಿ ಬಗ್ಗೆ ಮಾತನಾಡುತ್ತಿರಾ. ಮನುಷ್ಯನಾಗಿ ಹುಟ್ಟಿ ಎಲ್ಲವನ್ನು ದೇವರ ಅನುಗ್ರಹದಿಂದ ಪಡೆದುಕೊಂಡು ನಾವು ಏನು ಮಾಡಿಲ್ಲ. ಅದಕ್ಕಾಗಿ ಸಿನಿಮಾ ಮಾಡಿದ್ದೇನೆ. ಅಮ್ಮ ಅಂತ ಒಂದು ಹೆಜ್ಜೆ ಇಟ್ಟರೆ, ತಾಯಿ ಮೂರು ಹೆಜ್ಜೆ ಮುಂದಿಡುತ್ತಾಳೆ. ನಮಗೆ ಹರಸಲು ಎಲ್ಲಾ ವರ್ಗದಿಂದ ಹಿತೈಷಿಗಳು ಬಂದಿದ್ದಾರೆ. ನಿಮ್ಮಗಳ ಪ್ರೋತ್ಸಾಹ ಇದೇ ರೀತಿ ಇರಬೇಕೆಂದು ಕೋರಿಕೊಂಡರು.
ಖ್ಯಾತ ನಿರೂಪಕಿ ಅಂಕಿತಾಗೌಡ ಈ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿ ಕೊಂಡಿದ್ದಾರೆ. ದೇವಿಯಾಗಿ ಯಶಸ್ವಿನಿಸಿದ್ದೇಗೌಡ, ರವಿಬಸ್ರೂರು ಪುತ್ರಿ ಕುಮಾರಿ.ಖುಷಿಬಸ್ರೂರು ಬಾಲ ದೇವಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಹರೀಶ್‌ರಾಯ್, ಯಶ್‌ಶೆಟ್ಟಿ, ದಿನೇಶ್ ಮಂಗಳೂರು, ಪುನೀತ್‌ರುದ್ರನಾಗ್, ಭಜರಂಗಿ ಪ್ರಸನ್ನ, ನೀನಾಸಂ ಅಶ್ವತ್ಥ್, ಹಿರಿಯ ನಟ ಸುಮನ್, ತಮಿಳಿನ ದಿನಾ, ಸಾಗರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ತಬಲನಾಣಿ, ವಿಜಯ್ ಚೆಂಡೂರು, ದಿವ್ಯಾಆಲೂರು, ಮನಮೋಹನ್‌ರೈ, ಆರವ್‌ಲೋಹಿತ್, ಪಿಳ್ಳಣ್ಣ, ಮಧುಶ್ರೀ, ದಿವ್ಯಾ ಆಲೂರು., ವೇದಾಹಾಸನ್, ಸುನಂದ ಕಲ್ಬುರ್ಗಿ, ಶಶಿಕುಮಾರ್, ಕೆ.ಬಾಲಸುಬ್ರಮಣ್ಯಂ ಮುಂತಾದವರು ನಟಿಸಿದ್ದಾರೆ.
ಕಲಾವಿದರು, ತಂತ್ರಜ್ಘರು ಹಾಗೂ ಚಿತ್ರಕ್ಕೆ ದುಡಿದವರನ್ನು ವೇದಿಕೆಗೆ ಆಹ್ವಾನಿಸಿ ಅವರುಗಳಿಗೂ ಮಾತನಾಡಲು ಅವಕಾಶ ಕಲ್ಪಸಿದ್ದು ನಿರ್ದೇಶಕರ ದೊಡ್ಡ ಗುಣವೆಂದು ಹೇಳಬಹುದು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸುಂದರ ಸಮಾರಂಭವು ಬಹಳ ಅಚ್ಚುಕಟ್ಟಾಗಿ ನೆರವೇರಿತು.