‘ಸಿಂಹರೂಪಿಣಿ’ ಯಲ್ಲಿ ದೇವಿಯ ಶಕ್ತಿ , ಪವಾಡಗಳ ದರ್ಶನ(ಚಿತ್ರವಿಮರ್ಶೆ- ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಸಿಂಹರೂಪಿಣಿ
ನಿರ್ದೇಶಕ : ಕಿನ್ನಾಳ್ ರಾಜ್
ನಿರ್ಮಾಪಕ : ಕೆ.ಎಂ. ನಂಜುಡೇಶ್ವರ
ಸಂಗೀತ: ಆಕಾಶ್ ಪರ್ವ
ಛಾಯಾಗ್ರಹಣ : ಕಿರಣ್
ತಾರಾಗಣ : ಸಾಗರ್, ಅಂಕಿತಾಗೌಡ , ಯಶಸ್ವಿನಿ , ಖುಷಿ ಬಸ್ರೂರು, ಹರೀಶ್ ರಾಯ್, ಯಶ್ ಶೆಟ್ಟಿ, ದಿನೇಶ್ ಮಂಗಳೂರು, ಪುನೀತ್ ರುದ್ರನಾಗ್, ನೀನಾಸಂ ಅಶ್ವತ್ಥ್, ಸುಮನ್, ದಿನಾ, ವಿಜಯ್ ಚೆಂಡೂರು, ದಿವ್ಯಾ ಆಲೂರು, ತಬಲನಾಣಿ, ಕೆ. ಬಾಲಸುಬ್ರಮಣ್ಯಂ ಹಾಗೂ ಮುಂತಾದವರು…
ನಮ್ಮ ಭಕ್ತಿ , ನಂಬಿಕೆಯೇ ನಮಗೆ ದಾರಿ ತೋರಿಸುತ್ತದೆ ಎಂಬುವುದರ ಉದಾಹರಣೆಯಾಗಿ ಬಂದಿರುವಂತಹ ಚಿತ್ರ “ಸಿಂಹರೂಪಿಣಿ’. ಸಮಸ್ತ ಲೋಕಕ್ಕೆ ಅಧಿದೇವತೆ, ಶಕ್ತಿಸ್ವರೂಪಿಣಿ, ಆದಿಪರಾಶಕ್ತಿ, ಜಗನ್ಮಾತೆ ಪಾರ್ವತಿ. ದುಷ್ಟ ರಾಕ್ಷಸರನ್ನು ಸಂಹರಿಸಲು ತಾಯಿ ರೌದ್ರಾವತಾರವನ್ನ ತಾಳಿ ಶಿಷ್ಟರನ್ನು ರಕ್ಷಿಸಿರುವ ವಿಚಾರವನ್ನು ಪುರಾಣದಿಂದಲೂ ಕೇಳಿದ್ದೇವೆ.
ಹಾಗೆಯೇ ಇಂದಿಗೂ ಕೆಲವು ದುಷ್ಟ ವಾಮಾಚಾರ , ಮಾಟ, ಮಂತ್ರದ ಶಕ್ತಿಯಿಂದ ಹೊರಬಂದ ಅದೆಷ್ಟೋ ಪವಾಡಗಳು , ದೇವರ ಮಹಿಮೆಯಿಂದ ಮುಕ್ತಿ ಸಿಕ್ಕ ನಿದರ್ಶನ ಆಶ್ಚರ್ಯ ಎನ್ನುವಂತೆ ಕಂಡಿದ್ದು ಉಂಟು. ಈ ಚಿತ್ರ ಆರಂಭದಲ್ಲಿ ಬರುವ ಸಪ್ತಮಾತೃಕೆಯರ ವಿಷಯ ಮೂಲ ಕಥೆಗೆ ನಾಂದಿ ಹಾಡಿದಂತಿದೆ. ಪ್ರತಿಯೊಂದು ಊರಿನಲ್ಲೂ ಹಬ್ಬ , ಪೂಜೆ , ಆಚಾರ , ವಿಚಾರ , ದೈವಾರಾಧನೆ ಇದ್ದೇ ಇರುತ್ತದೆ.
ಅದೇ ರೀತಿ ಊರಿನಲ್ಲಿ ಗ್ರಾಮ ದೇವತೆಯು ಇರುವುದು ಸರ್ವೇ ಸಾಮಾನ್ಯ. ಒಂದೊಂದು ಊರಿನಲ್ಲಿ ಒಂದೊಂದು ದೇವಿಯ ಆರಾಧನೆ ಪೂಜೆ ನಿರಂತರವಾಗಿ ನಡೆದರೂ ಮೂಲ ದೇವಿ ಜಗನ್ಮಾತೆಯ ಅಂಶವೇ ಆಗಿರುತ್ತದೆ. ಎರಪನಹಳ್ಳಿ ಎಂಬ ಗ್ರಾಮದಲ್ಲಿ ನೆಲೆಸಿರುವ ಮಾರಮ್ಮ ದೇವಿ ಭಕ್ತ ಮಹಾಬಲನ ಕೋರಿಕೆಯಂತೆ ನೋಂದವರಿಗೆ ದಾರಿ ದೀಪವಾಗುವಂತಹ ಶಕ್ತಿ ನೀಡಿದನ್ನ ದುರುಪಯೋಗ ಪಡಿಸಿಕೊಂಡು ದೇವಿಯ ಶಾಪಕ್ಕೆ ಗುರಿಯಾಗಿ ಕಣ್ಣು ಕಳೆದುಕೊಳ್ಳುತ್ತಾನೆ.
ಇದನ್ನ ಗಮನಿಸಿದ ಮಗ ದೇವಿಯನ್ನು ದ್ವೇಷಿಸುತ್ತಾನೆ. ಇನ್ನು ಉರ ಗೌಡನ ದೌರ್ಜನ್ಯ , ಬಡಜನರ ಜಮೀನು , ಆಸ್ತಿ ವಂಚನೆಮಾಡುತ್ತ ಅಂತ್ಯ ಕಾಣುತ್ತಾನೆ. ಇನ್ನು ವರ್ಷಗಳು ಕಳೆದಂತೆ ಮುಂದಿನ ಪೀಳಿಗೆ ಬೆಳೆಯುತ್ತದೆ. ಇನ್ನು ಮುನಿಯಮ್ಮ (ದಿವ್ಯ ಅಲ್ಲೂರ್) ಎಂಬ ಭಕ್ತೆಯ ಮನೆಗೆ ಆಶ್ರಯ ಕೇಳಲು ಬರುವ ಮಾರಮ್ಮ ತನ್ನ ಶಕ್ತಿ , ಪವಾಡಗಳ ಮೂಲಕ ಗ್ರಾಮದಲ್ಲಿ ನೆಲೆಸುತ್ತಾಳೆ.
ಸಮಸ್ಯೆ ಎದುರಾದಾಗ ಭಕ್ತರ ಮೈಮೇಲೆ ಬಂದು ಪರಿಹಾರಕ್ಕೆ ದಾರಿ ತೋರುತ್ತೇನೆ ಎಂದು ವಾಗ್ದಾನ ಮಾಡುತ್ತಾಳೆ. ದೇವಿಯನ್ನ ಆರಾಧಿಸುತ್ತಾ ಪೂಜೆ ಮಾಡುತ್ತಾ ಬರುವ ಚೆನ್ನಪ್ಪ (ಹರೀಶ್ ರೈ)ನ ವಂಶ.
ಆ ವಂಶದ ಕುಡಿ ಸೂರ್ಯ (ಸಾಗರ್). ಊರ ಗೌಡ ನರಸಿಂಹ (ದಿನೇಶ್ ಮಂಗಳೂರು) ಪುತ್ರಿ ಸಿಂಧು (ಅಂಕಿತ ಗೌಡ) ಳನ್ನ ಪ್ರೀತಿಸುತ್ತಾನೆ. ಇದರ ನಡುವೆ ಊರಿನ ಸಮಸ್ಯೆ , ಗೌಡನ ಆರ್ಭಟ , ಕೋಪಕ್ಕೆ ಬೆಂಬಲವಾಗಿ ಬರುವ ಮಂತ್ರವಾದಿ (ಪುನೀತ್ ರುದ್ರ ನಾಗ್) ದೇವಿಯ ಮೇಲಿನ ಸೇಡು ಹಾಗೂ ಊರು ನಾಶಕ್ಕೆ ಮುಂದಾಗುತ್ತಾನೆ.
ಮಾರಮ್ಮ ದೇವಿಯ ಶಕ್ತಿ , ಪವಾಡಗಳ ಬಗ್ಗೆ ತಿಳಿದುಕೊಳ್ಳುವ ಭಕ್ತರಿಗೆ ವಿಶ್ವನಾಥ್ (ನಿನಾಸಂ ಅಶ್ವಥ್)ರ ಐದನೆಯ ಮುದ್ದಿನ ಮಗಳಾಗಿ ಮಹಾಲಕ್ಷ್ಮಿ ( ಯಶಸ್ವಿನಿ) ಯಾಗಿ ಕಾಣುವ ದೇವಿಯ ಜೀವನ ಹಾದಿಯಲ್ಲಿ ಗಂಡನಾಗಿ ಬರುವ ಜ್ಞಾನೇಂದ್ರ (ಯಶ್ ಶೆಟ್ಟಿ) ನ ಮೋಸದಿಂದ ಮಾರಮ್ಮ ದೇವಿಯಾದ ಕಥೆ ಗೋಚರವಾಗುತ್ತಾ ಹೋಗುತ್ತದೆ. ಸೂಕ್ಷ್ಮವಾಗಿ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗುವ ಈ ಕಥಾನಕ ಪವಾಡಗಳು , ಮಹಿಮೆಯನ್ನು ತೆರೆದಿಡುತ್ತಾ ಕ್ಲೈಮ್ಯಾಕ್ಸ್ ನತ್ತ ಸಾಗುತ್ತದೆ.
ತಮ್ಮ ಪ್ರಥಮ ಪ್ರಯತ್ನದಲ್ಲೇ ನಿರ್ದೇಶಕರು ಭಕ್ತಿ ಪರವಶ ಮೂಡುವಂತೆ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆದಿಟ್ಟಿದ್ದಾರೆ. ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ಬಹಳ ಅದ್ಭುತವಾಗಿದ್ದು, ನಂಬಿಕೆ , ಭಕ್ತಿ , ಶ್ರದ್ಧೆ ಇದ್ದರೆ ಮಾಡುವ ಕೆಲಸದಲ್ಲಿ ಜಯಕ್ಕೆ ಸಿಗುತ್ತದೆ ಎಂಬ ವಿಚಾರದೊಂದಿಗೆ ಸತ್ಯಕ್ಕೆ ಜಯ, ಮೋಸ , ವಂಚನೆ , ತಂತ್ರಗಾರಿಕೆ ಯಾವುದು ಲಭಿಸುವುದಿಲ್ಲ, ಎಲ್ಲದಕ್ಕೂ ದೇವಿಯೇ ಮೂಲ. ದೇವಿಯ ಮಹಿಮೆ , ಪವಾಡ ಇಂದಿಗೂ ಜೀವಂತ ಎಂದು ಸಾರಿದ್ದಾರೆ.
ಇಂತಹ ಭಕ್ತಿ ಪ್ರಧಾನ ಚಿತ್ರವನ್ನ ನಿರ್ಮಿಸಿರುವ ನಿರ್ಮಾಪಕರ ಶ್ರದ್ಧೆ , ಆಸಕ್ತಿ ಖಂಡಿತ ಮೆಚ್ಚುವಂಥದ್ದು, ಇನ್ನು ಚಿತ್ರದ ಸಾಹಿತ್ಯ , ಸಂಗೀತ , ಛಾಯಾಗ್ರಹಣ , ವಿ.ಎಫ್.ಎಕ್ಸ್ , ಸಂಕಲನ ಕೆಲಸಗಳು ಅದ್ಭುತವಾಗಿ ಮೂಡಿಬಂದಿದೆ. ನಾಯಕನಾಗಿ ಸಾಗರ್ ಬಹಳಷ್ಟು ಶ್ರಮ ಪಟ್ಟಿದ್ದು , ಆಕ್ಷನ್ ಸನ್ನಿವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಇನ್ನು ನಿರೂಪಕಿ ಅಂಕಿತ ಗೌಡ ನಾಯಕಿಯಾಗಿ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಮತ್ತೋರ್ವ ನಿರೂಪಕಿ ದಿವ್ಯ ಆಲೂರ್ ಭಕ್ತೆಯಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಮಾರಮ್ಮ ದೇವಿ ಪಾತ್ರ ಮಾಡಿರುವ ಯಶಸ್ವಿನಿ ಸುಬ್ಬೇಗೌಡ ಭಕ್ತಿ ಮೂಡಿಸುವ ಹಾಗೆ ನಟಿಸಿದ್ದಾರೆ. ಮಂತ್ರವಾದಿ ಪಾತ್ರ ಮಾಡಿರುವ ಪುನೀತ್ ರುದ್ರನಾಗ , ಮಾರಮ್ಮನ ಪತಿಯಾಗಿ ಯಶ್ ಶೆಟ್ಟಿ ಅದ್ಬುತವಾಗಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ.
ಇನ್ನು ಹಿರಿಯ ನಟ ಸುಮನ್ , ಹರೀಶ್ ರೈ , ಸಾಯಿ ದೀನ , ನೀನಾಸಂ ಅಶ್ವಥ್ , ಖುಷಿ ಬಸ್ರೂರು, ದಿನೇಶ್ ಮಂಗಳೂರು, ಭಜರಂಗಿ ಪ್ರಸನ್ನ , ತಬಲನಾಣಿ, ವಿಜಯ್ ಚೆಂಡೂರು , ಮನಮೋಹನ್‌ರೈ, ಆರವ್ ಲೋಹಿತ್, ಪಿಳ್ಳಣ್ಣ, ಮಧುಶ್ರೀ, ವೇದಾಹಾಸನ್, ಸುನಂದ ಕಲ್ಬುರ್ಗಿ, ಕೆ.ಬಾಲಸುಬ್ರಮಣ್ಯಂ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇಡೀ ಕುಟುಂಬ ಕುಳಿತು ನೋಡಬಹುದಾದಂತ ಒಂದು ಭಕ್ತಿ ಪ್ರಧಾನ ಚಿತ್ರ ಇದಾಗಿದ್ದು , ಪ್ರತಿಯೊಬ್ಬರು ಈ ಚಿತ್ರವನ್ನು ಒಮ್ಮೆ ನೋಡಬೇಕು.