ಇದೇ 06ರಂದು “ಸೂರಿ ಲವ್ಸ್ ಸಂಧ್ಯಾ” ಚಿತ್ರ ಬಿಡುಗಡೆ.
ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದೆ. ಅದರಲ್ಲಿ ಕೆಲವು ಚಿತ್ರಗಳು ಬಹಳ ನಿರೀಕ್ಷೆಯನ್ನ ಹುಟ್ಟು ಹಾಕಿದ್ದು , ಆ ಸಾಲಿನಲ್ಲಿ ನಟ ಅಭಿಮನ್ಯು ಕಾಶಿನಾಥ್ ನಟನೆಯ “ಸೂರಿ ಲವ್ಸ್ ಸಂಧ್ಯಾ” ಚಿತ್ರ ಈ ವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇದೊಂದು ಪ್ರೇಮಮಯ ಚಿತ್ರವಾದರೂ ಬಹಳಷ್ಟು ಕುತೂಹಲಕಾರಿ ಅಂಶವನ್ನು ಒಳಗೊಂಡಿದೆಯಂತೆ. ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದಲ್ಲಿ ಅಭಿಮನ್ಯು ಕಾಶಿನಾಥ್ ಗೆ ಜೋಡಿಯಾಗಿ ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ.
ಈಗಾಗಲೇ ತನ್ನ ಟೈಲರ್ ಮೂಲಕ ಬಾರಿ ಸದ್ದನ್ನ ಮಾಡಿರುವ ಈ ಚಿತ್ರವನ್ನು ರಿಯಲ್ ಸ್ಟಾರ್ , ಸೂಪರ್ ಸ್ಟಾರ್ ಉಪೇಂದ್ರ ರವರು ವೀಕ್ಷಿಸಿ ಮಾತನಾಡುತ್ತಾ ನಾಯಕ ಹಾಗೂ ನಾಯಕಿ ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿ ತಂದೆ ಕಾಶೀನಾಥ್ ಇರಬೇಕಿತ್ತು. ಈ ಚಿತ್ರ ನೋಡಬೇಕಿತ್ತು. ತುಂಬಾ ಖುಷಿಪಟ್ಟಿರುತ್ತಿದ್ದರು. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡಬೇಕು. ಹೃದಯ ಕಿತ್ತುಕೊಂಡು ಬರುವಷ್ಟು ಫೀಲ್ ಆಗುತ್ತದೆ. ಕೊನೆಯ 20 ನಿಮಿಷಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ಹಾಗೆಯೇ ಛಾಯಾಗ್ರಹಣ , ಮೇಕಿಂಗ್ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದರು.
ಏಳು ಕೋಟಿ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಕೆ .ಟಿ. ಮಂಜುನಾಥ್ ನಿರ್ಮಾಣದ ಮೊದಲ ಚಿತ್ರ ಇದಾಗಿದ್ದು ,
ಮತ್ತಷ್ಟು ಉತ್ತಮ ಚಿತ್ರವನ್ನು ನೀಡುವ ಉತ್ಸಾಹದಲ್ಲಿದ್ದಾರೆ. ‘ಸೂರಿ ಲವ್ಸ್ ಸಂಧ್ಯಾ’ ಚಿತ್ರಕ್ಕೆ ಯಾದವ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅಭಿಮನ್ಯು ಕಾಶೀನನಾಥ್, ಅಪೂರ್ವ, ಪ್ರತಾಪ್ ನಾರಾಯಣ್, ಪ್ರದೀಪ್ ಕಾಬ್ರಾ, ‘ಭಜರಂಗಿ’ ಪ್ರಸನ್ನ, ಖುಷಿ ಆಚಾರ್ ಮುಂತಾದವರು ನಟಿಸಿದ್ದಾರೆ. ಎಸ್.ಎನ್. ಅರುಣಗಿರಿ ಸಂಗೀತ ಸಂಯೋಜಿಸಿದ್ದು, ಶ್ರೀನಿವಾಸ್ ಛಾಯಾಗ್ರಹಣವಿದೆ. ಒಟ್ಟಿನಲ್ಲಿ ಬಹಳಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿರುವ ಈ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಸಿದ್ಧವಾಗಿದೆ.