ನಿಷ್ಕಲ್ಮಶ ಪ್ರೀತಿಯಲ್ಲಿ ಮನಕಲಕುವ ಪಯಣ. ‘ಸೂರಿ ಲವ್ಸ್ ಸಂಧ್ಯಾ’ (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಸೂರಿ ಲವ್ಸ್ ಸಂಧ್ಯಾ
ನಿರ್ದೇಶಕ : ಯಾದವ್ ರಾಜ್
ನಿರ್ಮಾಪಕ : ಕೆ. ಟಿ. ಮಂಜುನಾಥ್
ಸಂಗೀತ : ಅರುಣಗಿರಿ
ಛಾಯಾಗ್ರಹಣ : ಶ್ರೀನಿವಾಸ್
ತಾರಾಗಣ : ಅಭಿಮನ್ಯು ಕಾಶಿನಾಥ್, ಅಪೂರ್ವ, ಪ್ರತಾಪ್ ನಾರಾಯಣ್, ಪ್ರದೀಪ್ ಕಾಬ್ರಾ , ಭಜರಂಗಿ ಪ್ರಸನ್ನ , ಖುಷಿ ಆಚಾರ್ ಹಾಗೂ ಮುಂತಾದವರು…
ಪ್ರೀತಿ , ಪ್ರೇಮದ ಕಥಾನಕ ಇರುವ ಚಿತ್ರಗಳು ಬಹಳಷ್ಟು ಬಂದಿವೆ. ಆದರೆ ಅದನ್ನ ಒಂದೊಂದು ತಂಡ ತನ್ನದೇ ಶೈಲಿಯಲ್ಲಿ ತೋರಿಸುವ ಪರಿಯೇ ವಿಭಿನ್ನ ಎನ್ನುವಂತಿದೆ. ಪ್ರೀತಿಸುವ ಹೃದಯಗಳ ಶಕ್ತಿಯನ್ನ ಅರಿಯುವುದೇ ಬಹಳ ಕಷ್ಟ. ಅದರಲ್ಲೂ ನಿಷ್ಕಲ್ಮಶವಾದ , ನಿರ್ಮಲ ಪ್ರೀತಿ ಎಂದೆಂದಿಗೂ ಅಜರಾಮರ ಎನ್ನಬಹುದು , ಅಂತದ್ದೇ ಒಂದು ಮುಗ್ದ ಪ್ರೇಮಿಗಳ ಸುತ್ತ ಸಂಬಂಧ, ಸ್ನೇಹ , ಗೆಳೆತನ , ಕ್ರೌರ್ಯ, ಅಟ್ಟಹಾಸಗಳನ್ನ ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸೂರಿ ಲವ್ಸ್ ಸಂಧ್ಯಾ”.
ಅನಾಥ ಹುಡುಗ ಸೂರ್ಯ ( ಅಭಿಮನ್ಯು ಕಾಶಿನಾಥ್) ಜಯರಾಮನ ಆಶ್ರಯದಲ್ಲಿ ಬೆಳೆಯುತ್ತಾ ಬೀದಿ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಕಲೆಗಾರನ ಕೆಲಸವೇ ಅವನ ಬದುಕಿಗೆ ಆಧಾರ. ಸುಂದರ ಶಿವನ ಚಿತ್ರ ನೋಡುವ ಹುಡುಗಿ ಸಂಧ್ಯಾ (ಅಪೂರ್ವ). ಮನಸಾರೆ ಸೂರ್ಯ ನನ್ನ ಇಷ್ಟಪಡುತ್ತಾಳೆ. ಇನ್ನು ಸಂಧ್ಯಾಳ ಅಣ್ಣ ವಿಜಿ (ಪ್ರತಾಪ್ ನಾರಾಯಣ್) ತನ್ನ ರೌಡಿ ಗ್ಯಾಂಗ್ ಮೂಲಕ ಸದ್ದು ಮಾಡುತ್ತಾ , ಚುನಾವಣೆಗೆ ನಿಲ್ಲುವ ತಯಾರಿ ನಡೆಸುತ್ತಿರುತ್ತಾನೆ.
ಇದರ ನಡುವೆ ಸೂರಿ ಹಾಗೂ ಸಂದ್ಯಾಳ ಪ್ರೀತಿ ವಿಚಾರ ತಿಳಿದು ವಾರ್ನಿಂಗ್ ಮಾಡುತ್ತಾನೆ. ಇದಕ್ಕೆ ಜಗದಿದ್ದಾಗ ಒಂದಷ್ಟು ಪ್ಲಾನ್ ಕೂಡ ಮಾಡಿ ಬೇರೆ ಮಾಡಲು ದಾರಿ ಹುಡುಕುತ್ತಾನೆ. ಮರ್ಡರ್ ಕೇಸ್ನಲ್ಲಿ ಜೈಲಿ ಸೇರುವ ಸೂರಿ , ಮತ್ತು ಮನೆ ಬಿಟ್ಟು ದೂರ ಹೋಗುವ ಸಂಧ್ಯಾ ಬದುಕು ಅತಂತ್ರ ವಾಗುತ್ತದೆ.
ಹೇಗೋ ಪಾಡು ಪಟ್ಟಿ ಈ ಎರಡು ಜೋಡಿ ಭೇಟಿಯಾಗುವ ಸಂದರ್ಭ ಎದುರಾಗಿ ಮತ್ತೆ ಗಲಾಟೆ ನಡುವೆ ಉತ್ತರ ಭಾರತದ ಕಡೆಗೆ ಸಾಗುತ್ತಾರೆ. ಎಲ್ಲವೂ ಶುಭವಾಗುತ್ತಿದೆ ಎನ್ನುತ್ತಿರುವಾಗಲೇ ದುರಂತ ಘಟನೆ ಇವರಿಬ್ಬರ ಬದುಕಿನಲ್ಲಿ ಎದುರಾಗುತ್ತದೆ. ಆ ಮನ ಮಿಡಿಯುವ ಘಟನೆ ಯಾವುದು… ಯಾರಿಗೂ ಬರಬಾರದು ಈ ಸ್ಥಿತಿ…
ಪ್ರೀತಿ ಅಜರಾಮರವೇ…ಇದಕ್ಕೆ ಉತ್ತರ ನೀವು ಈ ಚಿತ್ರವನ್ನು ನೋಡಬೇಕು.
ಈ ಚಿತ್ರದ ಮೂಲಕ ಎರಡು ಮುದ್ದಾದ ಮನಸ್ಸುಗಳ ಪ್ರೀತಿಯ ತಲ್ಲಣ , ಆತ್ಮೀಯತೆ , ಆತಂಕ , ನಂಬಿಕೆ, ವಿಶ್ವಾಸದ ಹಾದಿಯಲ್ಲಿ ಎದುರಾಗುವ ನೋವು , ಸಂಕಷ್ಟದ ನಡುವೆ ವಿಧಿಯ ಆಟ ಏನು ಎಂಬುದನ್ನು ಬಹಳ ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಹಿಡಿತ ಹೆಚ್ಚುಬೇಕಿತ್ತು ಅನಿಸುತ್ತದೆ. ನಿಧಾನ ಗತಿಯಲ್ಲಿ ಸಾಗಿದರು ಕ್ಲೈಮ್ಯಾಕ್ಸ್ ಗಾಸಿ ಮಾಡುತ್ತದೆ.
ನಿರ್ಮಾಪಕರು ಒಂದು ವಿಭಿನ್ನ ಪ್ರಯತ್ನದ ಚಿತ್ರಕ್ಕೆ ಕೈ ಹಾಕಿ ಗಮನ ಸೆಳೆದಿದ್ದಾರೆ. ಸಂಗೀತ , ಛಾಯಾಗ್ರಹಣ , ಸಂಕಲನದ ಕೆಲಸ ಉತ್ತಮವಾಗಿದೆ. ಇನ್ನು ನಟ ಅಭಿಮನ್ಯು ಕಾಶಿನಾಥ್ ಉತ್ತಮ ಅಭಿನಯವನ್ನು ನೀಡಿದ್ದಾರೆ. ಆಕ್ಷನ್ ಗೂ ಸೈ ಎನ್ನುವಂತೆ ಅಭಿನಯಿಸಿರುವ ಅಭಿಮನ್ಯು ವಾಯ್ಸ್ ಕೇಳಿದಾಗ ತಂದೆ ಖ್ಯಾತ ನಟ ಕಾಶಿನಾಥ್ ಧ್ವನಿ ಕೇಳಿದಂತಾಗುತ್ತದೆ. ಇನ್ನಷ್ಟು ಪರಿಪಕ್ವತೆ ಅವರಲ್ಲಿ ಅಗತ್ಯ ಅನಿಸುತ್ತದೆ.
ಇನ್ನು ನಟಿ ಅಪೂರ್ವ ಬಹಳ ಅದ್ಭುತವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದು , ಕ್ಲೈಮಾಕ್ಸ್ ದೃಶ್ಯವನ್ನು ನಾಯಕ ನಾಯಕಿ ಅದ್ಭುತವಾಗಿ ನಿಭಾಯಿಸಿದ್ದಾರೆ. ಇಡೀ ಚಿತ್ರದ ಕೇಂದ್ರ ಬಿಂದು ನಾಯಕಿಯ ಅಣ್ಣನಾಗಿ ಕಾಣಿಸಿಕೊಂಡಿರುವ ಪ್ರತಾಪ್ ನಾರಾಯಣ್ ಗತ್ತು , ಹವಾ ಭಾವ ಅದ್ಭುತವಾಗಿ ನಿಭಾಯಿಸಿದ್ದಾರೆ. ನಾಯಕನ ಸಾಕು ತಂದೆ ಪಾತ್ರದಾರಿಗೆ ಜಯರಾಮಣ್ಣ ಜೀವ ತುಂಬಿ ನಟಿಸಿದ್ದು , ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ. ಪ್ರೇಮಿಗಳ ಹೃದಯ ಮುಟ್ಟುವ ಈ ಚಿತ್ರವು ಎಲ್ಲರೂ ಒಮ್ಮೆ ನೋಡುವಂತಿದೆ.