ಹಳ್ಳಿ ಪರಿಸರದಲ್ಲಿ ಭರ್ಜರಿ ಬಾಡೂಟದ ಟಗರು ಪಲ್ಯ (ಚಿತ್ರವಿಮರ್ಶೆ-ರೇಟಿಂಗ್ : 4/5)
ವರದಿ : ಎಸ್. ಜಗದೀಶ್ ಕುಮಾರ್
ಇ-ಮೇಲ್ : sjagadishtv@gmail.com
ಚಿತ್ರ : ಟಗರು ಪಲ್ಯ
ರೇಟಿಂಗ್ : 4/5
ನಿರ್ದೇಶಕ :ಉಮೇಶ್. ಕೆ. ಕೃಪ ನಿರ್ಮಾಪಕ:ಡಾಲಿ ಧನಂಜಯ ಸಂಗೀತ : ವಾಸುಕಿ ವೈಭವ್ ಛಾಯಾಗ್ರಾಹಕ:ಎಸ್.ಕೆ.ರಾವ್
ತಾರಾಗಣ : ನಾಗಭೂಷಣ್ , ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧಾ , ಪೂರ್ಣಚಂದ್ರ, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ , ಶರತ್ ಲೋಹಿತಾಶ್ವ ಹಾಗೂ ಮುಂತಾದವರು…
ನಾವು , ನಮ್ಮೂರು , ಸಂಬಂಧ , ಆಚಾರ , ವಿಚಾರ , ನಂಬಿಕೆ ಅನ್ನೋದು ಎಷ್ಟು ಮುಖ್ಯ ಅನ್ನೋದನ್ನ ಬಹಳ ನೈಜವಾಗಿ ಕಣ್ಣಿಗೆ ಕಟ್ಟುವಂತೆ ಹಳ್ಳಿಯ ಪರಿಸರದ ನಡುವೆಯೇ , ಗ್ರಾಮೀಣ ಭಾಷೆಯ ಸೊಗಡಿನ ಮೂಲಕ ಗಮನ ಸೆಳೆಯುವಂತೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಟಗರು ಪಲ್ಯ”.
ನಾವು ಮಾಡುವ ಕೆಲಸದಲ್ಲಿ ದೇವರನ್ನ ಕಾಣಬೇಕು , ದೇವರನ್ನ ನಂಬಿ ಮುಂದೆ ಸಾಗಬೇಕು ಎನ್ನುವ ಮನೆಯ ಹಿರಿಯ ವ್ಯಕ್ತಿ ಪಾಂಡು (ರಂಗಾಯಣ ರಘು) ತನ್ನ ಮುದ್ದಾದ ಒಬ್ಬಳೇ ಮಗಳು ಜ್ಯೋತಿ (ಅಮೃತ ಪ್ರೇಮ್)ಗೆ ಒಳ್ಳೆ ಗಂಡು ಸಿಕ್ಕಿದರೆ ದೇವರಿಗೆ ಹರಿಕೆಯ ರೂಪದಲ್ಲಿ ಟಗರು ಮರಿಯನ್ನು ಬಲಿಕೊಡುತ್ತೇನೆಂದು ಹರಿಸಿಕೊಂಡಿರುತ್ತಾನೆ, ಅದರಂತೆ ಕೈಗೂಡಿದಾಗ ಊರ ಜನರನ್ನೆಲ್ಲ ಒಗ್ಗೂಡಿಸಿಕೊಂಡು ದೇವರಿಗೆ ಹರಿಕೆಯನ್ನ ಅರ್ಪಿಸಲು ಮುಂದಾಗುತ್ತಾನೆ.
ಇದರ ಉಸ್ತುವಾರಿಯನ್ನ ಪಾಂಡುವಿನ ಸೋದರಳಿಯ ಚಿಕ್ಕ (ನಾಗಭೂಷಣ್) ನೋಡಿಕೊಳ್ಳುತ್ತಿರುತ್ತಾನೆ. ಹಾಗೆ ಗಂಡಿನ ಮನೆಯವರನ್ನು ಕೂಡ ಈ ಒಂದು ಪೂಜೆಗೆ ಬರ ಮಾಡಿಕೊಂಡಿರುತ್ತಾರೆ. ಇದರ ನಡುವೆ ಜ್ಯೋತಿ ಬೇರೆ ಹುಡುಗನನ್ನು ಪ್ರೀತಿ ಮಾಡುತ್ತಿರುವುದು ತಾಯಿ (ತಾರಾ ಅನುರಾಧ)ಗೆ ತಿಳಿಯುತ್ತದೆ. ಮತ್ತೊಂದೆಡೆ ಈ ಒಂದು ಹರಿಕೆಗೆ ತಂದಿರುವ ಟಗರುವಿನ ಬಾಡೂಟ ತಿನ್ನಲು ಸಂಬಂಧಿಕರು , ಸ್ನೇಹಿತರು , ಊರ ಜನರ ದಂಡು ಹಾಗೆ ಮುಖಂಡರು ಕೂಡ ಆಗಮಿಸಿರುತ್ತಾರೆ. ಆದರೆ ಪಾಂಡು ಕುಟುಂಬಕ್ಕೆ ಟಗರು ಕೊಡುವ ದೊಡ್ಡ ಎಡವಟ್ಟೆ ಇಡೀ ಚಿತ್ರದ ದಿಕ್ಕನೆ ಬದಲಿಸುತ್ತದೆ.
ಟಗರು ಕೊಡುವ ಕಾಟ ಏನು…
ಪಾಂಡು ಆಸೆ ನೆರವೇರುತಾ…
ಮಗಳ ಪ್ರೀತಿಸಿದ್ದು ಯಾರನ್ನ…
ಮದುವೆ ಯಾರ ಜೊತೆ…
ಕ್ಲೈಮಾಕ್ಸ್ ಸಂದೇಶ ಏನು…
ಈ ಎಲ್ಲಾ ವಿಚಾರ ತಿಳಿಯಬೇಕಾದರೆ ಒಮ್ಮೆ ಟಗರು ಪಲ್ಯ ಚಿತ್ರ ನೋಡಬೇಕು.
ಒಬ್ಬ ನಟನಾಗಿ , ನಿರ್ಮಾಪನಾಗಿ ಡಾಲಿ ಧನಂಜಯ ತಾವು ಬೆಳೆಯುತ್ತಾ , ತನ್ನ ಜೊತೆ ಇರುವವರನ್ನು ಬೆಳೆಸುತ್ತಾ ಒಂದು ವಿಭಿನ್ನ ಬಗೆಯ ಹಳ್ಳಿ ಸೊಗಡಿನ ನೈಜಕ್ಕೆ ಹತ್ತಿರವಾಗಿರುವಂತಹ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿರುವ ರೀತಿ ಮೆಚ್ಚುವಂಥದ್ದು, ಒಬ್ಬ ನಿರ್ಮಾಪಕ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕೆಂಬುದನ್ನ ಈ ಚಿತ್ರದ ಮೂಲಕ ತೋರಿಸಿಕೊಟ್ಟಂತಿದೆ.
ಇನ್ನು ಈ ಚಿತ್ರವನ್ನ ನಿರ್ದೇಶನ ಮಾಡಿರುವ ಉಮೇಶ್. ಕೆ. ಕೃಪ ಆಯ್ಕೆಮಾಡಿಕೊಂಡಿರುವ ಕಥಾವಸ್ತು ಮಾಮೂಲಿ ಆದರೂ ಚಿತ್ರಕಥೆಯ ಶೈಲಿ ಗಮನ ಸೆಳೆಯುತ್ತದೆ. ಅದೇ ರೀತಿ ಸಂಭಾಷಣೆ ಕೂಡ ಸೊಗಡಿಗೆ ತಕ್ಕಂತೆ ಅದ್ಭುತವಾಗಿದೆ. ಮಾತಿನ ಅಬ್ಬರಗಳ ಗಿರಿಕಿ ಹೆಚ್ಚಾದಂತಿದೆ. ಜನರನ್ನ ನಗುಸುತ್ತ ಎಲ್ಲರಿಗೂ ಇಷ್ಟವಾಗುವಂತಹ ಈ ಚಿತ್ರದಲ್ಲಿ ಒಂದು ತಂದೆ ಮಗಳ ಬಾಂಧವ್ಯ , ಪ್ರೀತಿಯ ಸೆಳೆತ ಜೊತೆಗೆ ಉತ್ತಮ ಸಂದೇಶವನ್ನು ಕೂಡ ಹೊರಹಾಕಿದ್ದಾರೆ.
ಸುಂದರ ಪರಿಸರವನ್ನು ಛಾಯಾಗ್ರಹಕ ಅಷ್ಟೇ ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ. ಪೂರಕವಾದಂತ ಸಂಗೀತವನ್ನು ವಾಸುಕಿ ವೈಭವ್ ನೀಡುವುದರ ಜೊತೆಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಕಡ್ಲೆಕಾಯಿ ಬೀಜದ ಮಹತ್ವವನ್ನು ಹೇಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
ಇನ್ನು ಈ ಚಿತ್ರದ ಕೇಂದ್ರ ಬಿಂದು ಟಗರು ಎಲ್ಲರ ಗಮನ ಸೆಳೆದರೆ. ರಂಗಾಯಣ ರಘು ಅದ್ಭುತವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದು , ಇವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ತಾರಾ ಅನುರಾಧ ಕೂಡ ಪಾತ್ರಕ್ಕೆ ಜೀವ ತುಂಬಿ ಭಾಷೆಯ ಸೊಗಡಿಗೆ ತಕ್ಕಂತೆ ಇಬ್ಬರು ಅಭಿನಯಿಸಿದ್ದಾರೆ. ಇನ್ನು ನಟ ನಾಗಭೂಷಣ ಚಿತ್ರವನ್ನ ಆವರಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ನಿಭಾಯಿಸಿ ಗಮನ ಸೆಳೆದಿದ್ದಾರೆ.
ಇನ್ನು ಮೊದಲ ಬಾರಿಗೆ ಬೆಳ್ಳಿ ಪರದೆಯ ಪ್ರವೇಶ ಮಾಡಿರುವ ಅಮೃತಾ ಪ್ರೇಮ್ ಆರಂಭದಲ್ಲಿ ಸಾಧಾರಣ ಪಾತ್ರ ಅನಿಸಿದರು ಫ್ರೀ ಕ್ಲೈಮಾಕ್ಸ್ ನಲ್ಲಿ ಅದ್ಭುತವಾಗಿ ಮಿಂಚಿ ಎಲ್ಲರ ಗಮನ ಸೆಳೆದಿದ್ದು , ಭರವಸೆಯ ನಟಿಯಾಗುವ ಲಕ್ಷಣವನ್ನು ಹೊಂದಿದ್ದಾರೆ. ಇನ್ನು ಟಗರು ಕಡಿಯುವ ಪಾತ್ರಧಾರಿ , ಕುಡುಕನ ಪಾತ್ರದಾರಿ ಸೇರಿದಂತೆ , ಪೂರ್ಣಚಂದ್ರ, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ , ಶ್ರೀನಾಥ್ ವಸಿಷ್ಠ , ಶರತ್ ಲೋಹಿತಾಶ್ವ ಹಾಗೂ ಇನ್ನುಳಿದ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಒಂದು ಹಳ್ಳಿ ಸೊಗಡಿನ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡುವಂತಿದೆ.
ರೇಟಿಂಗ್ : 4/5