“ತಾರಕೇಶ್ವರ” ಚಿತ್ರ ಸಂಸ್ಥೆಯ ಲೋಗೋ , ಹಾಡುಗಳ ಬಿಡುಗಡೆ ಮಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್.
ಚಂದನವನದಲ್ಲಿ ತಮ್ಮದೇ ಆದ ಚಾಪನ್ನ ಮೂಡಿಸಿಕೊಂಡು ಸಿನಿಮಾ , ಕಿರುತೆರೆ , ಸಮಾಜ ಸೇವೆಯಲ್ಲಿ ತಮ್ಮನ್ನ ತೊಡಗಿಸಿಕೊಂಡು ಬೆಳೆದಂತಹ ಪ್ರತಿಭೆ ಗಣೇಶ್ ರಾವ್ ಕೇಸರ್ ಕರ್. ಹಲವಾರು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಂತ ಗಣೇಶ್ ರಾವ್ ಈಗ ತಮ್ಮದೇ ನಿರ್ಮಾಣ ಸಂಸ್ಥೆಯ ಜೊತೆಗೆ ತಾವು ಅಭಿನಯಿಸುತ್ತಿರುವ 333ನೇ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಗಣ್ಯರ ಸಮ್ಮುಖದಲ್ಲಿ ಆಯೋಜನೆ ಮಾಡಿದರು.
ಪೊಲೀಸ್ , ರಾಜಕಾರಣಿ ಹೀಗೆ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡ ಗಣೇಶ್ ರಾವ್ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಒಂದು ಭಕ್ತಿ ಪ್ರಧಾನ ಚಿತ್ರವನ್ನು ಮಾಡಿದ್ದಾರೆ. ಅದುವೇ “ತಾರಕೇಶ್ವರ”. ಈ ಚಿತ್ರದ ಸಮಾರಂಭಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸಂಸ್ಥೆಯ ನಾಮಫಲಕವನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಇದರ ಬೆನ್ನಲ್ಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಶೀರ್ಷಿಕೆ ಅನಾವರಣಗೊಳಿಸಿದರೆ, ಸಿರಿ ಮ್ಯೂಸಿಕ್ ಸಂಸ್ಥೆಯು ಹೊರತಂದಿರುವ ಹಾಡುಗಳ ಪೈಕಿ, ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೈಟಲ್ ಸಾಂಗ್ ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಟೆಲಿವಿಷನ್ ಸಂಘದ ಅಧ್ಯಕ್ಷ ರವಿ.ಆರ್.ಗರಣಿ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್. ಕೆ ವಿಶ್ವನಾಥ್ ಮುಂತಾದ ಗಣ್ಯರುಗಳು ಉಪಸ್ತಿತರಿದ್ದು ಚಿತ್ರ ತಂಡಕ್ಕೆ ಶುಭವನ್ನು ಹಾರೈಸಿದರು.
ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಪುರುಷೋತ್ತಮ್ ಓಂಕಾರ್ ಹೇಳುವಂತೆ ಈ ಹಿಂದೆ ’ಸಿದ್ದರಾಮೇಶ್ವರ’ ಚಿತ್ರದಲ್ಲಿ ಗಣೇಶ್ರಾವ್ ಶಿವನಾಗಿ ನಟಿಸುತ್ತಿರುವಾಗ, ಆ ಸಂದರ್ಭದಲ್ಲೇ ’ತಾರಕೇಶ್ವರ’ ಕುರಿತಂತೆ ಒನ್ ಲೈನ್ ಎಳೆ ಚರ್ಚಿಸಲಾಗಿದ್ದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ.
ಈ ತಾರಕೇಶ್ವರ ಚಿತ್ರದ ಅಡಿ ಬರಹದಲ್ಲಿ ಹೇಳಿದಂತೆ ‘ಅಸುರ ಕುಲತಿಲಕ’ ಎಂಬುವುದು ಚಿತ್ರಕ್ಕೆ ಪೂರಕವಾಗಿದೆ. ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ, ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ.
ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂದು ಕುತೂಹಲದ ಸನ್ನಿವೇಶಗಳೊಂದಿಗೆ ತೋರಿಸಲಾಗಿದೆ. ಗಣೇಶ್ ರಾವ್ ಕೇಸರ್ಕರ್ ಪುತ್ರ ಪ್ರಜ್ವಲ್ ಕೇಸರ್ಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು ಶ್ರೀರಂಗಪಟ್ಟಣ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.
ನಟ , ನಿರ್ಮಾಪಕ ಗಣೇಶ್ ರಾವ್ ಕೇಸರ್ಕರ್ ಮಾತನಾಡುತ್ತಾ ನಮ್ಮ ಈ ಕಾರ್ಯಕ್ರಮಕ್ಕೆ ಬಂದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ್ ಸೇರಿದಂತೆ ಎಲ್ಲಾ ಗಣ್ಯರಿಗೂ ಧನ್ಯವಾದಗಳು ತಿಳಿಸುತ್ತೇನೆ. ನಾನು ಈಗಾಗಲೇ ಹಲವಾರು ಪಾತ್ರಗಳನ್ನ ಮಾಡಿದ್ದೇನೆ. ನಾನು ಇತ್ತೀಚೆಗೆ ನಮ್ಮ ನಿರ್ದೇಶಕರ ಒಂದು ಚಿತ್ರದಲ್ಲಿ ಈಶ್ವರ ಪಾತ್ರ ಮಾಡಿದಾಗ ಎಲ್ಲರೂ ಇಷ್ಟಪಟ್ಟರು.
ಮುಂದೆ ’ಗಂಗೆಗೌರಿ’ ಶುರು ಮಾಡಲಾಯಿತು, ಎಡಿಟಿಂಗ್ ಸಮಯದಲ್ಲಿ ’ತಾರಕೇಶ್ವರ’ ಚಿತ್ರ ಮಾಡುವ ಬಗ್ಗೆ ಪ್ರಸ್ತಾಪ ಬಂತು. ಆಗ ಒಂದಷ್ಟು ಆಪ್ತರು ಹಣ ಹೂಡಲು ಮುಂದೆ ಬಂದರು. ಇವರೆಲ್ಲರ ಸಹಕಾರದಿಂದಲೇ ತಾರಕೇಶ್ವರನ ಪಾತ್ರ ಮಾಡಲು ಅನುಕೂಲವಾಯಿತು. ಇದು ನನ್ನ 333 ನೇ ಚಿತ್ರ. ನನ್ನ ಜರ್ನಿಗೆ ಬಹಳಷ್ಟು ಜನರ ಸಹಕಾರ ಸಿಕ್ಕಿದೆ. ಇಂದಿಗೂ ಸಿಗುತ್ತಿದೆ. ಮುಂದೆಯೂ ಸಿಗಲಿ, ನಿಮ್ಮೆಲ್ಲರ ಪ್ರೀತಿ ಸಹಕಾರ ನಿರಂತರವಾಗಿ ಇರಲಿ ಎಂದು ಕೇಳಿಕೊಂಡರು.
ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಮಾತನಾಡುತ್ತಾ ನನ್ನ ಶಿಷ್ಯ ಪುರುಷೋತ್ತಮ್ ನನ್ನ ಅಣ್ಣ ಬಸವಣ್ಣ ಧಾರವಾಹಿಯಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ, ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾನೆ. ಇನ್ನು ಈ ಚಿತ್ರದ ಬಗ್ಗೆ ಮಾತನಾಡಬೇಕಾದರೆ ಯಾವುದೇ ಕಲಾವಿದನ ಮುಖಕ್ಕೆ ಆ ಪಾತ್ರ ಸೂಟ್ ಆದ್ರೆ ಮೆರುಗು ತಾನಾಗಿಯೇ ಬರುತ್ತದೆ.
ಕಲಾವಿದನಿಗೆ ಪಾತ್ರವು ಚೆನ್ನಾಗಿದ್ದರೆ ಅಂತಹ ಭಾಗ್ಯ ಬೇರೊಂದು ಇಲ್ಲ. ಗಣೇಶ್ರಾವ್ ಕೇಸರ್ಕರ್ ಅವರಿಗೆ 50ರಷ್ಟು ಮಾರ್ಕ್ಸ್ ಈಗಾಗಲೇ ಸಿಕ್ಕಿದೆ. ಮೊದಲನೆಯದಾಗಿ ಮೇಕಪ್, ಕಾಸ್ಟ್ಯೂಮ್ ನೋಡಿದಾಗ ಇವನೇ ತಾರಕೇಶ್ವರ ಅನಿಸಬೇಕು ಅಲ್ಲೇ ಅರ್ಧ ಗೆದ್ದಂತೆ , ಇನ್ನು ನಟನೆ ಉತ್ತಮವಾಗಿದ್ದರೆ ಖಂಡಿತ 100% ಗೆದ್ದ ಹಾಗೆಯೇ, ಇಂತಹ ಭಕ್ತಿ ಪ್ರಧಾನ , ಪೌರಾಣಿಕ ಚಿತ್ರಗಳು ಬಹಳ ವಿರಳ. ಇಡೀ ತಂಡ ಬಹಳ ಶ್ರಮಪಟ್ಟು ಈ ಚಿತ್ರವನ್ನು ಮಾಡಿದೆ ಇವರಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಇನ್ನು ಪಾರ್ವತಿಯಾಗಿ ನಾಯಕಿ ರೂಪಾಲಿ, ರತಿಮನ್ಮಥರಾಗಿ ವಿಕ್ರಂ ಸೂರಿ ಹಾಗೂ ನಮಿತಾರಾವ್ ಸೇರಿದಂತೆ ಬಾಲ ನಟಿ ಋತುಸ್ಪರ್ಶ , ಸುಮಿತ ಪ್ರವೀಣ್, ಅನ್ನಪೂರ್ಣ, ಶಂಕರಭಟ್, ಶ್ರೀವಿಷ್ಣು , ಜಿಮ್ಶಿವು, ಎನ್.ಟಿ. ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜ ದೇಸಾಯಿ , ವೀರೇಂದ್ರ ಬೆಳ್ಳಿಚುಕ್ಕಿ , ಮಧು ಕಾರ್ತಿಕ್, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ.ಈ ಚಿತ್ರಕ್ಕೆ ತುಳಜಾ ಬಾಯಿ, ರೂಪ.ಎಸ್.ದೊಡ್ಮನಿ, ಡಾ.ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತ ರಾಜ್ಭಾಸ್ಕರ್, ಛಾಯಾಗ್ರಹಣ ಮುತ್ತುರಾಜ್, ಸಂಕಲನ ಅನಿಲ್ಕುಮಾರ್, ನೃತ್ಯ ಕಪಿಲ್ ನಿರ್ವಹಿಸಿದ್ದಾರೆ.ಈ ಒಂದು ಚಿತ್ರವು ಆದಷ್ಟು ಬೇಗ ಬೆಳ್ಳಿ ಪರದೆಯ ಮೇಲೆ ಬರಲಿದೆ.