ಮನುಷ್ಯತ್ವ ಇಲ್ಲದ ಮುಖವಾಡ ‘ತರ್ಕ’ (ಚಿತ್ರವಿಮರ್ಶೆ -ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ತರ್ಕ
ನಿರ್ದೇಶಕ :ಪುನೀತ್ ಮಾನವ
ನಿರ್ಮಾಪಕ : ರಶ್ಮಿತಾ ಸಂತೋಷ್ ಕುಮಾರ್
ಸಂಗೀತ : ಸೂರಜ್ ಜೋಯಿಸ್
ಛಾಯಾಗ್ರಹಣ : ಅರುಣ್ ಕುಮಾರ್
ತಾರಾಗಣ : ಅಂಜನ್ ಮೂರ್ತಿ, ಪ್ರತಿಮಾ ಠಾಕೂರ್, ನಿವಾಸ್ ಶ್ರೀ , ಶ್ವೇತಾ ಶ್ರೀನಿವಾಸ್, ಮುರಳಿ ಮೋಹನ್ ಹಾಗೂ ಮುಂತಾದವರು…
ಒಂದು ಏರಿಯಾ ಅಂದಮೇಲೆ ಪಡ್ಡೆ ಹುಡುಗರ ಲೋಕಲ್ ಗ್ಯಾಂಗ್ ಕಾಮನ್, ಬೇರೆ ಬೇರೆ ಭಾಷೆಯ ಹುಡುಗರ ಗುಂಪುಗಳ ಆರ್ಭಟವು ಇದ್ದದ್ದೇ. ಕೆಲಸ , ಆಟ , ತರಲೆ , ರೌಡಿಸಂ ಹಾಗೂ ಪ್ರೀತಿಯ ಗುಂಗಿನ ಸುತ್ತ ಬೆಸೆದುಕೊಂಡು ಸಾಗುವ ಕಥೆಯಲ್ಲಿ ಊಹಿಸಲು ಅಸಾಧ್ಯವಾದಂತಹ ವ್ಯಕ್ತಿಯ ಮನಸ್ಥಿತಿಯ ಕ್ರೌರ್ಯದ ಮುಖವಾಡವನ್ನ ತೆರೆದಿಡುವ ಪ್ರಯತ್ನವಾಗಿ ಈ ವಾರ ಬಂದಿರುವಂತಹ ಚಿತ್ರ “ತರ್ಕ”.
ಸಂಜೆಯಾದರೆ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಎಣ್ಣೆ ಪಾರ್ಟಿ ಮಾಡುವ ಫ್ರೂಟ್ ಅಣ್ಣ (ನಿವಾಸ್ ಶ್ರೀ) ಬಡ್ಡಿಗೆ ಹಣ ಕೊಟ್ಟು ವಸೂಲಿ ಮಾಡುತ್ತಾ ಹುಡುಗರ ಗ್ಯಾಂಗ್ ಮೈಂಟೆನ್ ಮಾಡುತ್ತಿರುತ್ತಾನೆ.
ಇದರ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್ ಮಾಮೂಲಿ. ಇನ್ನು ಅದೇ ಏರಿಯಾದ ಪುರುಷೋತ್ತಮ್ ( ಅಂಜನ್ ಮೂರ್ತಿ) ಮಾಂಸದ ಅಂಗಡಿ ಇಟ್ಟುಕೊಂಡು ತಂದೆ-ತಾಯಿ ತಮ್ಮನ ಜೊತೆ ವಾಸ ಮಾಡುತ್ತಿರುತ್ತಾನೆ. ಒಮ್ಮೆ ಈತನ ಸ್ನೇಹಿತ ರೊನಾಲ್ಡಿನೋ ಪ್ರೀತಿಸುತ್ತಿರುವ ಮುಸ್ಲಿಂ ಹುಡುಗಿ ಸೂಫಿಯಾ ತಂಗಿ ಆಫೀಫಾ (ಪ್ರತಿಮಾ ಠಾಗೋರ್) ಳನ್ನ ಪರಿಚಯ ಮಾಡಿಕೊಂಡು ಪ್ರೀತಿಸಲು ಮುಂದಾಗುತ್ತಾನೆ.
ಹಿಂದೂ ಹುಡುಗ , ಮುಸ್ಲಿಂ ಹುಡುಗಿ ಪ್ರೀತಿಯ ಓಡಾಟ ಹಲವರ ಕಣ್ಣಿಗೆ ಬೀಳುತ್ತದೆ. ಇದರ ನಡುವೆ 20 ವರ್ಷಗಳಿಗೊಮ್ಮೆ ನಡೆಯುವ ಊರಿನ ಉತ್ಸವದ ವಿಶೇಷ ಪದ್ಧತಿಯು ನಡೆಯುತ್ತಿದ್ದು , ಪ್ರತಿದಿನ ಒಬ್ಬೊಬ್ಬರು ದೀಪ ಹಚ್ಚುವ ಸ್ಥಳವನ್ನು ಕಾಯಬೇಕಾಗುತ್ತದೆ.
ಹಬ್ಬ ಹರಿದಿನದ ಸಂಭ್ರಮ ನಡುವೆ ಪೂರ್ಷಿ ತನ್ನ ಮನೆಗೆ ಯಾರು ಇಲ್ಲದ ಸಮಯದಲ್ಲಿ ಅಫೀಫಳನ್ನ ಕರೆದುಕೊಂಡು ಹೋಗುತ್ತಾನೆ , ನಂತರ ಬೈಕ್ ನಲ್ಲಿ ಸುತ್ತಾಡಿಸಿ ಆಕೆಯನ್ನ ಮನೆ ಬಳಿ ಬಿಡುತ್ತಾನೆ. ತಡರಾತ್ರಿಯಾದರೂ ಅಫೀಫ ಮನೆಗೆ ಬರೆದ ಕಾರಣ ಪೊಲೀಸ್ ಗೆ ಕಂಪ್ಲೇಂಟ್ ನೀಡುವ ಫಾರೂಕ್ ಕುಟುಂಬ.
ಇನ್ಸ್ಪೆಕ್ಟರ್ ರೋಹಿಣಿ (ಶ್ವೇತಾ ಶ್ರೀನಿವಾಸ್) ಹಾಗೂ ತಂಡ ನಾಪತ್ತೆಯಾದ ಹುಡುಗಿಯನ್ನು ಹುಡುಕುವ ವಿಚಾರದಲ್ಲಿ ಹಲವಾರು ರೀತಿ ಇನ್ವೆಸ್ಟಿಗೇಷನ್ ಆರಂಭಿಸುತ್ತಾರೆ. ಪ್ರಿಯಕರ ಪುರುಷೋತ್ತಮ ಸೇರಿದಂತೆ ಒಬ್ಬೊಬ್ಬರ ಮೇಲೆ ಅನುಮಾನ ಮಾಡುತ್ತಾ ಹೋಗುತ್ತದೆ.
ಒಂದಷ್ಟು ತಿರುವು , ಸಾವು ,ನೋವುಗಳ ನಡುವೆ ಬೇರೆಯದೇ ದಾರಿ ತೆರೆದುಕೊಳ್ಳುತ್ತದೆ. ಆದರೆ ಕ್ಲೈಮ್ಯಾಕ್ಸ್ ತೋರುವ ನಿಜವಾದ ಕ್ರೂರಿಯಾ ಮುಖವಾಡ ಹೀಗೂ ಇರ್ತಾರಾ ಎನ್ನುವಂತಿದೆ.
ಆಫೀಫಾ ಎಲ್ಲಿ… ಮುಖವಾಡ ಯಾರದು… ಕೊಲೆಯೋ… ನಾಪತ್ತೆಯೋ… ಕ್ಲೈಮಾಕ್ಸ್ ಉತ್ತರ ಏನು… ಇದಕ್ಕಾಗಿ ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.
ಪ್ರೇಮಿಗಳು ಹೇಗಿರಬೇಕು ,
ಯಾರು ಯಾರನ್ನ ನಂಬಬೇಕು , ಹೇಗೆ ಇರಬೇಕು , ಸರಿ ತಪ್ಪುಗಳ ಅರಿವು ಎಷ್ಟು ಮುಖ್ಯ ಎನ್ನುವುದರ ಜೊತೆಗೆ ಮುಖವಾಡದ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸಿರುವುದು ಗಮನ ಸೆಳೆಯುತ್ತದೆ. ಆದರೆ ಚಿತ್ರಕಥೆ ಇನ್ನೆಷ್ಟು ಹಿಡಿತ ಮಾಡಬಹುದಿತ್ತು ಹಾಗೂ ಕ್ರೌರ್ಯದ ದೃಶ್ಯಗಳನ್ನ ನೋಡುವುದು ಹಿಂಸೆ ಎನಿಸುತ್ತದೆ. ಇದರ ಹೊರತಾಗಿ ಪ್ರಯತ್ನ ಉತ್ತಮವಾಗಿದೆ. ಕ್ರೌಡ್ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸಿ ಮಾಡಿರುವ ಈ ಚಿತ್ರ ಪ್ರೇಮಿಗಳಿಗೆ ಎಚ್ಚರಿಕೆಯ ಸಿನಿಮಾವಾಗಿದೆ.
ಇನ್ನು ನಟ ಅಂಜನ್ ಮೂರ್ತಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದು, ಕ್ಲೈಮಾಕ್ಸ್ ಸನ್ನಿವೇಶಗಳ್ನ ಮೂಲಕ ನೆನಪಿನಲ್ಲಿ ಉಳಿಯುತ್ತಾರೆ. ಇನ್ನು ನಟಿ ಪ್ರತಿಮಾ ಠಾಕೂರ್ ಮುಸ್ಲಿಂ ಹುಡುಗಿಯಾಗಿ ಲವಲವಿಕೆಯಿಂದ ಮುದ್ದಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ಸ್ಪೆಕ್ಟರ್ ಪಾತ್ರಧಾರಿ ಶ್ವೇತಾ ಶ್ರೀನಿವಾಸ್ ಕೂಡ ಲೇಡಿ ಖದರ್ ಆಫೀಸರ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ನು ನಿವಾಸ ಶ್ರೀ ಕೂಡ ಪಡ್ಡೆ ಹುಡುಗರ ಗ್ಯಾಂಗ್ ಲೀಡರ್ ನಾಗಿ , ಕಷ್ಟ ಸುಖಕ್ಕೆ ಸ್ಪಂದಿಸುವ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು , ಧೈರ್ಯವಿದ್ದು ತಾಳ್ಮೆಯಿಂದ ನೋಡುವವರಿಗೆ ಈ ಚಿತ್ರ ಇಷ್ಟವಾಗಲಿದ್ದು, ಎಚ್ಚರಿಕೆಯ ಸಂದೇಶ ನೀಡಿರುವ ಚಿತ್ರ ಇದಾಗಿದೆ.