Cini NewsSandalwood

“ದೂರ ತೀರ ಯಾನ”ದ ಮೊದಲ ಪ್ರೇಮಗೀತೆಗೆ ಮೆಚ್ಚುಗೆಯ ಸುರಿಮಳೆ

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ, ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸುತ್ತಿರುವ `ದೂರ ತೀರ ಯಾನ’ ಸಿನೆಮಾದ ಮೊದಲ ಪ್ರೇಮಗೀತೆ ಎಂ ಆರ್ ಟಿ ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರಶಂಸೆ ಪಡೆಯುತ್ತಿದೆ. ಕವಿರಾಜ್ ಅವರು ಬರೆದಿರುವ ಸಾಹಿತ್ಯಕ್ಕೆ, ಬಕ್ಕೇಶ್-ಕಾರ್ತಿಕ್ ಸ್ವರ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕರಾದ ಅರ್ಮಾನ್ ಮಲಿಕ್ ಹಾಡಿದ್ದಾರೆ.

ಮಂಸೋರೆ ಬರೆದಿರುವ ಕಥೆಗೆ ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ. ಈ ಸಿನೆಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಬಕ್ಕೇಶ್ ಹಾಗೂ ಕಾರ್ತೀಕ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಹಾಗೂ ಕಿರಣ್ ಕಾವೇರಪ್ಪ ಹಾಡುಗಳನ್ನು ಬರೆದಿದ್ದಾರೆ. ಸಿನೆಮಾದ ಶೀರ್ಷಿಕೆ ಗೀತೆಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ತಿಳಿಸಿರುವ ನಿರ್ದೇಶಕ ಮಂಸೋರೆಯವರು, ಆ ಹಾಡನ್ನು ವಿಶೇಷವಾಗಿ ಪ್ರೇಕ್ಷಕರಿಂದಲೇ ಬಿಡುಗಡೆ ಮಾಡಿಸುವ ಆಲೋಚನೆ ಇದ್ದು, ರಾಜ್ಯದ ಪ್ರಮುಖ ನಗರವೊಂದರಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.

ಮಂಸೋರೆ ನಿರ್ದೇಶನ ಮಾಡಿರುವ ಈ ಸಿನೆಮಾ ಬೆಂಗಳೂರು, ಉಡುಪಿ, ಕುಂದಾಪುರ, ಗೋಕರ್ಣ, ಮುರುಡೇಶ್ವರ, ಕಾರವಾರ, ಯಲ್ಲಾಪುರ, ದಾಂಡೇಲಿ, ಗೋವಾದಲ್ಲಿ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಸಿನೆಮಾ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗಿದೆ. ಜುಲೈ ತಿಂಗಳಿನಲ್ಲಿ ತೆರೆಗೆ ತರುವುದಾಗಿ, ನಿರ್ಮಾಪಕರಾದ ದೇವರಾಜ್ ಆರ್. ರವರು ತಿಳಿಸಿದ್ದಾರೆ.

ಇದೊಂದು ಪ್ರೇಮಕಥೆ ಆಧರಿಸಿದ ಸಿನೆಮಾ ಆಗಿದ್ದು, ಹರೆಯದ ಇಬ್ಬರು ಪ್ರೇಮಿಗಳು ಬೆಂಗಳೂರಿನಿಂದ ಗೋವಾಗೆ ಪಯಣ ಆರಂಭಿಸಿ, ಆ ಪ್ರಯಾಣದಲ್ಲಿ ತಮ್ಮ ಪ್ರೀತಿಯ ಅರ್ಥ ಹುಡುಕಿಕೊಳ್ಳುವುದು ಮೂಲಕಥೆಯಾಗಿದೆ. ಈ ಸಿನೆಮಾಗೆ ಸರವಣ ಕುಮಾರ್ ಅವರ ಕಲಾನಿರ್ದೇಶನವಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತರಾದ ನಾಗೇಂದ್ರ ಕೆ ಉಜ್ಜನಿ ಅವರು ಸಿನೆಮಾದ ಸಂಕಲನ ಮಾಡುತ್ತಿದ್ದಾರೆ.

error: Content is protected !!