ಆಗ ಕ್ರಿಕೆಟರ್… ಈಗ ಆಕ್ವರ್… : ನಟ ಪ್ರವೀಣ್ ಸಿನಿ ಜರ್ನಿ.
ನೀವೇನಾದರೂ ಕಳೆದ ವರ್ಷ (2024ರಲ್ಲಿ) ತೆರೆಕಂಡ ಇಂದ್ರಜಿತ್ ಲಂಕೇಶ್ ನಿರ್ದೇಶನದ ʼಗೌರಿʼ ಮತ್ತು ಕಿಚ್ಚ ಸುದೀಪ್ ಅಭಿನಯದ ʼಮ್ಯಾಕ್ಸ್ʼ ಸಿನೆಮಾಗಳನ್ನು ನೋಡಿದ್ದರೆ, ಖಂಡಿತವಾಗಿಯೂ ಈ ಹುಡುಗನ ಮುಖವನ್ನು, ಅವರ ಅಭಿನಯವನ್ನು ನೋಡಿರುತ್ತೀರಿ. ನೋಡಲು ಸ್ಫುರದ್ರೂಪಿಯಾಗಿರುವ, ಅಭಿನಯದ ಜೊತೆಗೆ ಮೊದಲ ನೋಟದಲ್ಲೇ ನೋಡುಗರ ಮನ-ಗಮನ ಎರಡನ್ನೂ ಸೆಳೆಯುವಂತಿರುವ ಈ ಹುಡುಗನ ಹೆಸರು ಪ್ರವೀಣ್.
ಅಂದಹಾಗೆ, ಬೆಂಗಳೂರು ಮೂಲದ ಪ್ರವೀಣ್ ವೃತ್ತಿಪರ ಕ್ರಿಕೆಟ್ ಪಟು ಕೂಡ ಹೌದು. ಅನೇಕ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಪ್ರವೀಣ್, ಈಗ ಕ್ರಿಕೆಟ್ ಅಂಕಣದಿಂದ ಸಿನೆಮಾ ಅಂಗಳಕ್ಕೆ ನಟನಾಗಿ ಅಡಿಯಿಡುತ್ತಿದ್ದಾರೆ. ಇನ್ನು ಕ್ರಿಕೆಟಿಗನಾಗಿದ್ದ ಪ್ರವೀಣ್ ಅವರನ್ನು ನಟನನ್ನಾಗಿ ಪರಿಚಯಿಸಿ ಚಿತ್ರರಂಗದ ಅಂಗಳಕ್ಕೆ ಬರುವಂತೆ ಮಾಡಿದ್ದು, ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದರೆ ನೀವು ನಂಬಲೇಬೇಕು.
ಕ್ರಿಕೆಟ್ ನಿಂದ ಸಿನೆಮಾ ಲೋಕಕ್ಕೆ…
ಬಹುತೇಕರಿಗೆ ಗೊತ್ತಿರುವಂತೆ, ನಟ ಕಿಚ್ಚ ಸುದೀಪ್ ಅವರಿಗೆ ಸಿನೆಮಾದಷ್ಟೇ ಆಸಕ್ತಿ ಕ್ರಿಕೆಟ್ ಮೇಲೂ ಇದೆ. ವರ್ಷಕ್ಕೊಮ್ಮೆ ಸಿನೆಮಾ ಮಂದಿಗಾಗಿಯೇ ‘ಸಿಸಿಎಲ್’ ಪಂದ್ಯಗಳನ್ನೂ ಕೂಡ ಸುದೀಪ್ ಮುನ್ನಡೆಸಿಕೊಂಡು ಬಂದಿದ್ದಾರೆ. ಕ್ರಿಕೆಟ್ ಬಗ್ಗೆ ಸುದೀಪ್ ಅವರಿಗೆ ಇರುವಂಥ ಆಸಕ್ತಿ, ಪ್ರವೀಣ್ ಎಂಬ ಈ ಕ್ರಿಕೆಟ್ ಪಟುವನ್ನು ಸುದೀಪ್ ಅವರಿಗೆ ಹತ್ತಿರವಾಗುವಂತೆ ಮಾಡಿದೆ.
ಆರಂಭದಿಂದಲೂ ಪ್ರವೀಣ್ ಅವರ ಕ್ರಿಕೆಟ್ ಪ್ರತಿಭೆಯನ್ನು ಹತ್ತಿರದಿಂದ ಕಂಡಿದ್ದ ಸುದೀಪ್, ಆ ನಂತರ ಪ್ರವೀಣ್ ಅವರನ್ನು ‘ಸಿಸಿಎಲ್’ ಟೂರ್ನಿಗಳಲ್ಲಿ ತಮ್ಮ ಬಳಗಕ್ಕೆ ಸೇರಿಸಿಕೊಂಡಿದ್ದರು. ಇದೇ ವೇಳೆ ಪ್ರವೀಣ್ ಅವರಿಗೆ ಕ್ರಿಕೆಟ್ ಜೊತೆಗೆ ಸಿನೆಮಾದ ಬಗ್ಗೆಯೂ ಇರುವಂಥ ಆಸಕ್ತಿಯನ್ನ ಗಮನಿಸಿದ ಸುದೀಪ್, ತಮ್ಮ ಬಳಗದ ಈ ಹುಡುಗನಿಗೆ ಮಾರ್ಗದರ್ಶನ ಮಾಡಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ಗುರುರಾಜ್ ಕುಲಕರ್ಣಿ ಹೊಸಚಿತ್ರಕ್ಕೆ ಪ್ರವೀಣ್ ಹೀರೋ
ಕನ್ನಡದಲ್ಲಿ ಈಗಾಗಲೇ ‘ಅಮೃತ್ ಅಪಾರ್ಟ್ಮೆಂಟ್’, ‘ದಿ ಜಡ್ಜಮೆಂಟ್’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಗುರುರಾಜ ಕುಲಕರ್ಣಿ ಸದ್ಯ ರೊಮ್ಯಾಂಟಿಕ್, ಕ್ರೈಂ-ಥ್ರಿಲ್ಲರ್ ಚಿತ್ರಕ್ಕೆ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕನ್ನಡದ ಜೊತೆಗೆ ಏಕಕಾಲಕ್ಕೆ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾದಲ್ಲಿ ಪ್ರವೀಣ್ ನಾಯಕ ನಟರಲ್ಲಿ ಒಬ್ಬರಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನೆಮಾದ ಕಥೆ ಮತ್ತು ಪಾತ್ರವನ್ನು ಕೇಳಿ ಒಪ್ಪಿಕೊಂಡಿರುವ ಪ್ರವೀಣ್, ಈ ಸಿನೆಮಾಕ್ಕಾಗಿ ಒಂದಷ್ಟು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.
ಅಭಿನಯದ ಮೂಲಕ ಪ್ರೇಕ್ಷಕರ ಮನಮುಟ್ಟುವ ಹಂಬಲ…
ಇನ್ನು ತಮ್ಮ ಚಿತ್ರರಂಗದ ಜರ್ನಿಯ ಬಗ್ಗೆ ಮಾತನಾಡುವ ನಟ ಪ್ರವೀಣ್, ‘ಕ್ರಿಕೆಟ್ ನಂತರ ಮುಂದೇನು ಎಂಬ ಯೋಚನೆ ಬಂದಾಗ, ನನ್ನ ಆಸಕ್ತಿಯ ಸಿನೆಮಾರಂಗವನ್ನು ಆಯ್ಕೆ ಮಾಡಿಕೊಂಡೆ. ಸುದೀಪ್ ಅಣ್ಣ ನನಗೆ ಇಲ್ಲಿ ಮಾರ್ಗದರ್ಶನ ಮಾಡಿ ಮುನ್ನಡೆಸುತ್ತಿದ್ದಾರೆ. ಅವರಿಂದಾಗಿಯೇ ಕ್ರಿಕೆಟರ್ ಆಗಿದ್ದ ನಾನು ಆ್ಯಕ್ಟರ್ ಆಗುವಂತಾಯಿತು. ಇಲ್ಲಿ ನಟನಾಗಿ ಗುರುತಿಸಿಕೊಳ್ಳಬೇಕು ಎಂಬುದಷ್ಟೇ ನನ್ನ ಬಯಕೆ. ಹೀರೋ, ವಿಲನ್, ಅಥವಾ ಬೇರೆ ಯಾವುದೇ ಪಾತ್ರವಾದರೂ ಸರಿ, ಅದಕ್ಕೆ ಜೀವ-ಭಾವ ತುಂಬಿ ಅಭಿನಯಿಸಬೇಕು ಎಂಬುದಷ್ಟೇ ನನಗೆ ಇಲ್ಲಿ ಗೊತ್ತಿರುವುದು. ನಟನಾಗಿ ಅಭಿನಯದ ಮೂಲಕ ಪ್ರೇಕ್ಷಕರ ಮನ ಮುಟ್ಟಬೇಕು’ ಎಂಬ ಹಂಬಲದ ಮಾತುಗಳನ್ನಾಡುತ್ತಾರೆ ಪ್ರವೀಣ್.
ಈ ವರ್ಷಾಂತ್ಯಕ್ಕೆ ಹೊಸ ಪಾತ್ರಗಳ ಮೂಲಕ ಪ್ರವೀಣ್ ಆಗಮನ
ಸದ್ಯ ಪ್ರಜ್ವಲ್ ದೇವರಾಜ್ ಅಭಿನಯದ ‘ಕರಾವಳಿ’, ಸುದೀಪ್ ಅಭಿನಯದ ‘ಬಿಲ್ಲ ರಂಗ ಬಾಷ’ ಚಿತ್ರಗಳಲ್ಲಿ ಪ್ರವೀಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಜಿ9 ಕಮ್ಯುನಿಕೇಶನ್ ಆ್ಯಂಡ್ ಮೀಡಿಯಾ’ ಬ್ಯಾನರಿನಲ್ಲಿ ಗುರುರಾಜ ಕುಲಕರ್ಣಿ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಹೊಸಚಿತ್ರದಲ್ಲಿ ಪ್ರವೀಣ್ ಇಂದಿನ ಜನರೇಶನ್ ಹುಡುಗರನ್ನು ಪ್ರತಿನಿಧಿಸುವಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ‘ಸದ್ಯ ನಾನು ಅಭಿನಯಿಸುತ್ತಿರುವ 3-4 ಸಿನೆಮಾಗಳಲ್ಲಿ ಪ್ರತಿ ಸಿನೆಮಾದ ಪಾತ್ರ ಕೂಡ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಗುರುರಾಜ್ ಕುಲಕರ್ಣಿ ನಿರ್ದೇಶನ ಪಾತ್ರವಂತೂ ತುಂಬ ಸವಾಲಿನದ್ದಾಗಿದ್ದು, ಆ ಪಾತ್ರಕ್ಕಾಗಿ ಒಂದಷ್ಟು ತಯಾರಿ ಕೂಡ ಮಾಡಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲಿಯೇ ಈ ಸಿನೆಮಾ ಅನೌನ್ಸ್ ಆಗಲಿದೆ. ಈ ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ’ ಎನ್ನುತ್ತಾರೆ ಪ್ರವೀಣ್.