Cini NewsMovie ReviewSandalwood

“UI” ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ (ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : UI
ನಿರ್ದೇಶಕ : ಉಪೇಂದ್ರ
ನಿರ್ಮಾಪಕರು : ಜಿ. ಮನೋಹರನ್ , ಕೆ.ಪಿ.ಶ್ರೀಕಾಂತ್ , ವೇಲು ತುಳಸಿ ರಾಮ್ , ನವೀನ್.
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ವೇಣು
ತಾರಾಗಣ : ಉಪೇಂದ್ರ , ರೀಷ್ಮಾ ನಾಣಯ್ಯ , ಮುರಳಿ ಶರ್ಮ , ಅಚ್ಚುತ್ ಕುಮಾರ್ , ರವಿಶಂಕರ್ , ಸಾಧುಕೋಕಿಲ , ನಿಧಿ ಸುಬ್ಬಯ್ಯ , ಕಾಕ್ರೋಚ್ ಸುಧಿ , ವಿ. ಮನೋಹರ್
ಹಾಗೂ ಮುಂತಾದವರು…

ನೇರ ನೇರ ವಿಚಾರಗಳ ಮೇಲೆ ಬೆಳಕು ಚೆಲ್ಲಿರುವ ಚಿತ್ರ “ಯುಐ”.
1. ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ.
2. ಜಾತಿ, ಧರ್ಮ, ಅಧಿಕಾರ.
3. ಸತ್ಯ ಯುಗದಲ್ಲಿ ತಲ್ಲಣ.
4. ಆಪಲ್… ಮುಂಚೆ… , ಹೆಣ್ಣು ಮುಂಚೆ… ಬೆಲೆ ಜಾಸ್ತಿ.
5. ಪ್ರಕೃತಿ ನಾಶಕ್ಕೆ ಕಲ್ಕಿ ಉತ್ತರನಾ.
6. ಮನುಷ್ಯನಿಗಿಂತ ಪ್ರಾಣಿಗಳು ಉತ್ತಮ..

ಹೀಗೆ ಒಂದಷ್ಟು ದೃಶ್ಯಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಪ್ರಪಂಚದಾದ್ಯಂತ ಇರುವ ಜಾತಿ , ಧರ್ಮ , ಆಸೆ ವ್ಯಾಮೋಹ , ಆಚಾರ , ಪದ್ಧತಿ , ಅಧಿಕಾರ , ಪ್ರಸ್ತುತ ಬದುಕಿನ ಸ್ಥಿತಿಗತಿ, ಪರಿಸರ ನಾಶಕ್ಕೆ ತಮ್ಮನ್ನ ತಾವೇ ತೊಡಗಿಸಿಕೊಂಡಿರುವ ದುರಹಂಕಾರಿ ಮನುಷ್ಯರ ದರ್ಪದ ನಡೆ ಮನುಕುಲವನ್ನೇ ಸಂಕಷ್ಟಕ್ಕೆ ತಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂಬ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಬಂದಿರುವಂತಹ ಚಿತ್ರ “ಯುಐ”. ನಮ್ಮ ವನ ದೇವತೆಯ ಮಡಿಲಲ್ಲಿ ಪ್ರಕೃತಿ ಸೌಂದರ್ಯವನ್ನ ಆಸ್ವಾದಿಸುತ್ತ ಬದುಕು ನಡೆಸುವುದನ್ನ ಮರೆತು ವನನಾಶ, ಗಣಿಗಾರಿಕೆ, ಬೃಹತ್ ಕಟ್ಟಡಗಳು , ಪರಿಸರ ನಾಶ ಮಾಡುವವರ ಜೊತೆಗೆ ಜನಸಾಮಾನ್ಯರ ಬದುಕು ಕೂಡ ಕಗ್ಗಂಟು ಮಾಡುತ್ತಿರುವ ಸಮಾಜಘಾತಕ ಶಕ್ತಿಗಳ ಆರ್ಭಟಕ್ಕೆ ಸರಿ ದಾರಿ ತೋರುವ ಸತ್ಯಯುಗ ಬಂದು ಕಲ್ಕಿ ಅವತಾರ ಪಡೆದು ಎಲ್ಲವೂ ಸುಧಾರಿಸುತ್ತದೆ ಎಂಬ ನಂಬಿಕೆ ನಡುವೆ ಯಾವುದು ಸರಿ… ಯಾವುದು ತಪ್ಪು… ನಾವು ಕೊಂಡುಕೊಳ್ಳಬೇಕಾದಂತ ಮಾರ್ಗ ಯಾವುದು… ಜಾತಿ , ಧರ್ಮ , ಆಸ್ತಿ , ಅಧಿಕಾರದ ಲೆಕ್ಕಾಚಾರದ ನಡುವೆ ನಮ್ಮ ಪ್ರಕೃತಿ ವಿನಾಶದ ಅಂಚಿನಲ್ಲಿ ಮುಳುಗಿದ್ದು , ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿರುವ ವಿಷಯವನ್ನು ಹಲವು ದೃಷ್ಟಿಕೋನಗಳ ಮೂಲಕ ತೆರೆದಿಟ್ಟಿದೆ “ಯುಐ”.

ಸಾಮಾನ್ಯವಾಗಿ ವಿಭಿನ್ನ ಆಲೋಚನೆಗೆ ತಮ್ಮನ್ನ ತಾವು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ , ಭವಿಷ್ಯದ ದಾರಿ ಹೇಗೆಲ್ಲ ಇರಬಹುದು , ಏನೇನು ನಡೆಯಬಹುದು ಎಂಬ ಊಹೆಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಸಮರ್ಥ ನಿರ್ದೇಶಕ ಉಪೇಂದ್ರ ಎನ್ನಬಹುದು.

ಈ ಹಿಂದೆ ಬಂದಂತಹ ಕೆಲವು ಚಿತ್ರಗಳನ್ನು ಗಮನಿಸಿದರು ಇಂತಹ ಅಂಶಗಳು ಕಾಣುತ್ತದೆ. ಆ ನಿಟ್ಟಿನಲ್ಲಿ ಇನ್ನು ಮುಂದಿನ 20 ವರ್ಷ ಹೇಗಿರಬಹುದು ಎಂಬ ಸತ್ಯದ ಮೇಲೆ ಬೆಳಕು ಚೆಲ್ಲಿದಂತಿದೆ. ನಟನಾಗಿ ಸತ್ಯ ಹಾಗೂ ಕಲ್ಕಿ ದ್ವಿಪಾತ್ರದಲ್ಲಿ ಅಭಿನಯಿಸಿರುವ ಉಪೇಂದ್ರ ಸಂಭಾಷಣೆಯ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಈ ಸಿನಿಮಾವನ್ನು ಎರಡು ಬಾರಿ ನೋಡಿದರೆ ಚಿತ್ರದ ಮೂಲ ಹೆಚ್ಚು ಅರ್ಥವಾಗುವಂತಿದೆ.

ನಿರ್ದೇಶಕನಾಗಿ ಗೆದ್ದಿರುವ ಉಪೇಂದ್ರ ನಟನಾಗಿಯೂ ಕೂಡ ಉತ್ತಮ ಅಭಿನಯ ನೀಡಿದ್ದಾರೆ. ಇಂತಹ ವಿಭಿನ್ನ ಚಿತ್ರಕ್ಕೆ ಸಾತ್ ನೀಡಿರುವ ನಿರ್ಮಾಪಕರ ಸಾಹಸವು ಕೂಡ ಮೆಚ್ಚಲೇಬೇಕು. ಇನ್ನು ಟಿಕ್ ಪ್ಯಾಕೆಟ್ ಸೀನಾ ಅಧಿಕಾರದ ರಾಜನಾಗುವ ಪಾತ್ರಕ್ಕೆ ರವಿಶಂಕರ್ ಜೀವ ತುಂಬಿದ್ದಾರೆ.

ಗುರುಜಿಯಾಗಿ ಅಚ್ಚುತ್ ಕುಮಾರ್ , ನಾಯಕಿಯಾಗಿ ರೀಷ್ಮಾ ನಾಣಯ್ಯ , ಜೋಕರ್ ಪಾತ್ರದಲ್ಲಿ ಸಾಧುಕೋಕಿಲ ಪಾತ್ರಗಳನ್ನು ಹೆಚ್ಚು ಬಳಸಿಕೊಳ್ಳಬಹುದಿತ್ತು. ಪತ್ರಕರ್ತರ ಪಾತ್ರದಲ್ಲಿ ಮುರುಳಿ ಶರ್ಮ , ನಿಧಿ ಸುಬ್ಬಯ್ಯ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ಇನ್ನು ಇಡೀ ಚಿತ್ರದ ಹೈಲೈಟ್ ಛಾಯಾಗ್ರಹಣ , ಕಾಸ್ಟ್ಯೂಮ್ ಡಿಸೈನರ್ , ಸೆಟ್ ವರ್ಕ್ , ಗ್ರಾಫಿಕ್ಸ್ ಹಾಗೂ ಮ್ಯೂಸಿಕ್ ಗಮನ ಸೆಳೆಯುವಂತಿದೆ. ಈ ಚಿತ್ರ ನೋಡಿದ ಕೂಡಲೇ ಇಷ್ಟವಾಗುವುದಕ್ಕಿಂತ ಯೋಚನೆ ಮಾಡುತ್ತಾ ನೋಡಿದರೆ ಖಂಡಿತ ಇದರ ಒಳ ಸತ್ಯ ಅರಿವಾಗುತ್ತಾ ಹೋಗುತ್ತದೆ. ಒಟ್ಟಾರೆ ಜನರಲಿ ಜಾಗೃತಿ ಮೂಡಿಸುತ್ತಾ ಮುಂದಿನ ಪೀಳಿಗೆಗೆ ಎಚ್ಚರ ಎನ್ನುತ್ತಲೆ ಸರಿಯಾದ ಫೋಕಸ್ಸನ್ನ ಕಂಡುಕೊಳ್ಳಿ ಎಂಬ ದೃಷ್ಟಿಯಿಂದ ಬಿಡುಗಡೆಯಾಗಿರುವ ಈ ಚಿತ್ರವನ್ನು ಎಲ್ಲರೂ ನೋಡಬಹುದು.

error: Content is protected !!