ಸಿಕ್ಕಾಪಟ್ಟೆ ಸದ್ದುಮಾಡುತ್ತಿದೆ ಉಪ್ಪಿಯ “ಯುಐ” ಟೀಸರ್
ಅಂತೂ ಇಂತೂ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದಂತಹ ರಿಯಲ್ ಸ್ಟಾರ್ , ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ “ಯುಐ” ಚಿತ್ರದ ಟೀಸರ್ ಬಿಡುಗಡೆಗೊಂಡು ಅಭಿಮಾನಿಗಳು , ಚಿತ್ರಪ್ರೇಮಿಗಳ ತಲೆಗೆ ಭರ್ಜರಿ ಹುಳವನ್ನೇ ಬಿಟ್ಟಿದ್ದಾರೆ ಉಪ್ಪಿ. ಈ ಒಂದು ಟೀಸರ್ ಬಿಡುಗಡೆಯ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದ್ದು , ಟಾಲಿವುಡ್ ನ ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್ ಹಾಗೂ ಕರುನಾಡ ಚಕ್ರವರ್ತಿ , ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಟೀಸರ್ ಗೆ ಚಾಲನೆ ನೀಡಿದರು.
‘ಯುಐ’ ಸಿನಿಮಾದ ಫಸ್ಟ್ ಲುಕ್ ಟೀಸರ್ ನಲ್ಲಿ ಬಳಸಲಾದ ದೃಶ್ಯ ವೈಭವ ಹಾಗೂ ಸಂಗೀತಕ್ಕೆ ಪ್ರೇಕ್ಷಕ ಫಿದಾ ಆಗಿದ್ದಾರೆ. ಈ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕರಾಗಿಯೂ ಅಭಿನಯಿಸಿದ್ದಾರೆ. ಚಿತ್ರವನ್ನು ಲಹರಿ ಫಿಲಂಸ್ ನ ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ‘ನಾನು ಓಂ ಚಿತ್ರ ನೋಡಿದಾಗಿನಿಂದ ಶಿವಣ್ಣ ಹಾಗೂ ಉಪ್ಪಿಯ ಅಭಿಮಾನಿಯಾದವನು. ಈಗ ಅವರಿಬ್ಬರ ಜೊತೆಗೂ ಸಿನಿಮಾ ಮಾಡಿದ್ದೇನೆ. ಈ ಚಿತ್ರ ಇಷ್ಟು ಅದ್ದೂರಿಯಾಗಿ ಮೂಡಿಬರಲು ಮನೋಹರನ್ ಅವರ ಸಹಕಾರ ತುಂಬಾ ಇದೆ. ಸಿನಿಮಾ ಬಗ್ಗೆ ಏನಾದರೂ ಅಪ್ಡೇಟ್ ಕೊಡಿ ಎಂದು ಅಭಿಮಾನಿಗಳು ತುಂಬಾನೇ ಕೇಳ್ತಾ ಇದ್ದರು. ಕೊನೆಗೂ ಟೀಸರ್ ಬಂದಿದೆ. ಈಗ ನೋಡಿದ್ದಕ್ಕಿಂತ ಹತ್ತು ಪಟ್ಟು ವಿಶೇಷತೆಗಳು ಚಿತ್ರದಲ್ಲಿವೆ’ ಎಂದರು.
ನಂತರ ಚಿತ್ರದ ನಾಯಕ ಕಮ್ ನಿರ್ದೇಶಕ ಉಪೇಂದ್ರ ಮಾತನಾಡಿ ಸಿನಿಮಾ ಮಾಡಿದ ಮೇಲೆ ನಾವು ಮಾತನಾಡ ಬಾರದು, ಜನ ಅದರ ಬಗ್ಗೆ ಮಾತನಾಡಬೇಕು. ಹಾಗಾಗಿ ಸಿನಿಮಾ ಬಗ್ಗೆ ಹೆಚ್ಚಾಗಿ ಮಾತನಾಡಲ್ಲ. ಮೊದಲು ನಾನು ಸರಿಯಾಗಿದ್ದೇನೆ ಬೇರೆಯವರು ಇಲ್ಲಾ ಎಂದುಕೊಂಡು ಒಂದಷ್ಟು ಸಿನಿಮಾ ಮಾಡಿದೆ. ನಂತರ ಬೇರೆಯವರೆಲ್ಲಾ ಸರಿಯಾಗಿದ್ದಾರೆ ನಾನೇ ಸರಿಯಿಲ್ಲ ಎಂದು ಸಿನಿಮಾ ಮಾಡಿದೆ.
ಈಗ ನಾವೆಲ್ಲಾ ಸರಿಯಾಗಿದ್ದೇವೆ ಎನ್ನುವುದಕ್ಕಾಗಿ ‘ಯುಐ’ ಸಿನಿಮಾ ಮಾಡಿದ್ದೇನೆ. ಇದೊಂದು ಪ್ರೇಕ್ಷಕರ ವರ್ಲ್ಡ್ ಸಿನಿಮಾ ಎಂದರು. ಚಿತ್ರದ ನಾಯಕಿ ರೇಶ್ಮಾ ನಾಣಯ್ಯ ಇದು ನಂಗೆ ಸ್ಪೆಷಲ್ ಸಿನಿಮಾ. ಉಪ್ಪಿ ಅವರ ನಿರ್ದೇಶನದಲ್ಲಿ ನಟಿಸಿದ್ದು ತುಂಬಾ ಖುಷಿ ಇದೆ. ಉಪ್ಪಿ ಅವರ ಅಭಿಮಾನಿ ಯಾಗಿ ಸಿನಿಮಾ ನೋಡಲು ನಾನೂ ಕಾಯ್ತಿದ್ದೇನೆ ಎಂದರು. ನಂತರ ಮತ್ತೋರ್ವ ನಾಯಕಿ ನಿಧಿ ಸುಬ್ಬಯ್ಯ ಉಪೇಂದ್ರ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸೋದು ಕನಸು. ಈಗ ನನಸಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅಥಿಯಾಗಿ ಆಗಮಿಸಿದ್ದ ನಟ ಶಿವರಾಜ್‌ಕುಮಾರ್ ಮಾತನಾಡುತ್ತ ಟೀಸರ್ ತುಂಬಾ ಕುತೂಹಲ ಹುಟ್ಟು ಹಾಕಿದೆ. ಉಪೇಂದ್ರ ಅವಾಗಿಂದಲೇ ಒಳ್ಳೆಯ ನಿರ್ದೇಶಕ. ಇಷ್ಟು ದಿನ ವೇಟ್ ಮಾಡಿದ್ದಕ್ಕೂ ಒಳ್ಳೆಯ ಟೀಸರ್ ಕೊಟ್ಟಿದ್ದಾರೆ ಎಂದರು.
ಮತ್ತೋರ್ವ ಅತಿಥಿ ಅಲ್ಲು ಅರವಿಂದ್ ಮಾತನಾಡುತ್ತ ಇಂದು ನಾನು ಫ್ಯಾಮಿಲಿ ಕಾರ್ಯಕ್ರಮಕ್ಕೆ ಬಂದ ಹಾಗೆ ಆಗುತ್ತಿದೆ.
ಶಿವಣ್ಣ ನಮ್ಮ ಫ್ಯಾಮಿಲಿ ಮೊದಲಿನಿಂದಲೂ ಆತ್ಮೀಯರು. ಉಪೇಂದ್ರ ಕನ್ನಡಕಷ್ಟೇ ಅಲ್ಲ ತೆಲುಗು ಭಾಷೇಗೂ ಹೀರೋ. ಈ ಚಿತ್ರವನ್ನು ಅವರು 8 ಭಾಷೆಯಲ್ಲಿ ರಿಲೀಸ್ ಮಾಡುತ್ತಿದ್ದಾರೆ. ನಾನು ಈ ಚಿತ್ರವನ್ನು ಕನ್ನಡಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದ್ದೂರಿಯಾಗಿ ತೆಲಗು ಭಾಷೆಯಲ್ಲಿ ರಿಲೀಸ್ ಮಾಡುತ್ತೇನೆ. ಟೀಸರ್‌ನಲ್ಲಿ ಒಳ್ಳೆಯ ಸೌಂಡ್, ದೃಶ್ಯಗಳು ಬಂದಿವೆ. ಇದು ಬರೀ ಕನ್ನಡ ಸಿನಿಮಾ ಅಲ್ಲ ಎಲ್ಲಾ ಭಾಷೆಯ ಚಿತ್ರ. ಇದು ಸೂಪರ್ ಹಿಟ್ ಆಗಬೇಕು ಎಂದರು.
ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದಂತ ನಟಿ ಪ್ರಿಯಾಂಕ ಉಪೇಂದ್ರ , ನಿರ್ಮಾಪಕ ಕೆ. ಮಂಜು, ಕಾರ್ತಿಕ್ ಗೌಡ, ನವೀನ್ ಮನೋಹರನ್, ಲಹರಿ ವೇಲು ಚಿತ್ರದ ಬಗ್ಗೆ ಮಾತನಾಡಿದರು. ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ ಉಪೇಂದ್ರ ಅವರ ಸಿನಿಮಾ ನೋಡಿಕೊಂಡು ಬೆಳೆದವ ಅವರ ಜೊತೆ ಕೆಲಸ ಮಾಡೋದು ಖುಷಿ ಕೊಟ್ಟಿದೆ. ಅವರ ವಿಚಾರಗಳು ತುಂಬಾ ವಿಭಿನ್ನ. ಇದು ಉಪ್ಪಿಯವರ ‘ಯುಐ’ ವರ್ಡ್ ಎಂದು ಹೇಳಿದರು. ಇನ್ನು ಮುಂದೆ ಹಂತ ಹಂತವಾಗಿ ಹಲವು ವಿಚಾರಗಳನ್ನು ಚಿತ್ರತಂಡ ತಿಳಿಸಲಿದ್ದು , ಈಗ ಬಿಡುಗಡೆಗೊಂಡಿರುವ “ಯುಐ” ಟೀಸರ್ ಬಾರಿಗೆ ವೈರಲ್ ಆಗಿದ್ದು , ಸಿನಿಮಾ ನೋಡುವ ಕುತೂಹಲವನ್ನು ಹೆಚ್ಚಿಸಿದೆ.