ಲವ್ , ಥ್ರಿಲ್ಲಿಂಗ್, ಎಂಟರ್ಟೈನ್ಮೆಂಟ್… ಅನ್‌ಲಾಕ್ ರಾಘವ (ಚಿತ್ರವಿಮರ್ಶೆ-ರೇಟಿಂಗ್ : 4 /5)
ರೇಟಿಂಗ್ : 4 /5
ಚಿತ್ರ : ಅನ್‌ಲಾಕ್ ರಾಘವ
ನಿರ್ದೇಶಕ : ದೀಪಕ್ ಮಧುವನಹಳ್ಳಿ
ನಿರ್ಮಾಪಕರು :ಮಂಜುನಾಥ್, ಗಿರೀಶ್ ಕುಮಾರ್
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಲವಿತ್
ತಾರಾಗಣ : ಮಿಲೆಂದ್ ಮಂಜುನಾಥ್, ರಚೆಲ್ ಡೇವಿಡ್, ಅವಿನಾಶ್, ಸಾಧು ಕೋಕಿಲ, ಭೂಮಿ ಶೆಟ್ಟಿ, ರಮೇಶ್ ಭಟ್, ಶೋಭರಾಜ್ , ಸುಂದರ್ ವೀಣಾ ಹಾಗೂ ಮುಂತಾದವರು…
ಭೂಮಿಯ ಮೇಲೆ ಹಾಗೂ ಒಳಗೆ ಇರುವ ಅದೆಷ್ಟೋ ನಿಗೂಢ ವಸ್ತುಗಳ ಬಗ್ಗೆ ಇಂದಿಗೂ ಹುಡುಕಾಟಗಳು ನಡೆಯುತ್ತಿವೆ. ಇದಕ್ಕಾಗಿ ರಾಜ್ಯ ಪ್ರಾಚ್ಯ ವಸ್ತು ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ನಿರಂತರ ಸಂಶೋಧನೆ ಮಾಡ್ತಿದ್ದು , ಕೆಲವೊಂದು ಪುರಾತನ ವಿಗ್ರಹಗಳು , ನಿಧಿ ಸಿಕ್ಕಿರುವ ವಿಚಾರವು ಬೆಳಕಿಗೆ ಬಂದಂತಿದೆ.
ಇಂಥದ್ದೇ ಒಂದು ವಿಚಾರದೊಂದಿಗೆ ಕಥೆಯನ್ನ ಬೆಸೆದುಕೊಂಡು ಪುರಾತನ ಪೆಟ್ಟಿಗೆಯ ಲಾಕ್ ಸೇರಿದಂತೆ ಈಗಿನ ಲಾಕ್ ಸಿಸ್ಟಮ್ ತೆಗೆಯುವ ಹುಡುಗನೊಬ್ಬನ ಪ್ರೀತಿಯ ಕಥೆಯ ಸುತ್ತ ಕುತೂಹಲಕಾರಿಯಾಗಿ ಅಂಶಗಳೊಂದಿಗೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಅನ್ ಲಾಕ್ ರಾಘವ”.
ಇನ್ನು ಎಂತದೇ ಲಾಕ್ ಆದರೂ ಅದನ್ನ ಕ್ಷಣಮಾತ್ರದಲ್ಲಿ ಸಣ್ಣ ಕಡ್ಡಿಯ ಮೂಲಕ ಚಾಣಾಕ್ಷತೆಯಿಂದ ತೆಗೆಯುವ ಹುಡುಗ ರಾಘವ( ಮಿಲೆಂದ್ ಮಂಜುನಾಥ್). ಶಾಲಾ ದಿನಗಳಿಂದಲೂ ಪ್ರೀತಿಸುವ ಹುಡುಗಿ ಜಾನಕಿ( ರಾಚೆಲ್ ಡೇವಿಡ್). ಆದರೆ ಆಕೆಯ ತಂದೆ ಜಗಪತಿ (ಅವಿನಾಶ್) ವರ್ಗಾವಣೆಯಾದ ಕಾರಣ ಜಾನಕಿ ಆ ಊರನ್ನೇ ಬಿಟ್ಟು ಹೋಗುತ್ತಾಳೆ.
ಇನ್ನೊಂದೆಡೆ ರಾಘವ ಜಾನಕಿ ಅನ್‌ಲಾಕ್ ವಿಶ್ವವಿದ್ಯಾಲಯ ಎನ್ನುವ ತರಗತಿ ತೆರೆದು, ಬಂದವರ ಸಮಸ್ಯೆಗಳನ್ನು ಅನ್‌ಲಾಕ್ ಮಾಡುತ್ತಾ ತನ್ನ ಮಾವ (ಸಾಧುಕೋಕಿಲ) ಜೊತೆಗೂಡಿ ಜಾನಕಿಯ ಹುಡುಕಾಟವನ್ನು ನಡೆಸುತ್ತಿರುತ್ತಾನೆ. ಇನ್ನು ಪುರಾತತ್ತ್ವ ಇಲಾಖೆಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ಜಾನಕಿ ಹಾಗೂ ಅವಳ ತಂದೆ ಜಗಪತಿಗೆ ಹಳ್ಳಿಯೊಂದರ ಜಮೀನಿನಲ್ಲಿ ಸುಮಾರು ವರ್ಷಗಳ ಹಿಂದಿನ ನಿಧಿ ಪೆಟ್ಟಿಗೆಯನ್ನು ಹುಡುಕುವ ಕೆಲಸ ಬರುತ್ತಾರೆ.
ಅಚಾನಕ್ಕಾಗಿ ರಾಘವನ ಭೇಟಿ ಮಾಡುವ ಜಾನಕಿ ತನ್ನ ಹಳೆಯ ಪರಿಚಯದ ವಿಚಾರ ಹೇಳಿಕೊಳ್ಳುವುದಿಲ್ಲ , ಇವರ ನಡುವೆ ಜಗಪತಿ ಹಾಗೂ ಹಳೇ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡುವ ಪೀಟರ್ (ಶೋಭ ರಾಜ್) ಹೊಂಚು ಹಾಕುತ್ತಾರೆ. ಇಲಾಖೆಯ ಅಧಿಕಾರಿಗಳ ತಂಡವು ಜಮೀನಿನಲ್ಲಿ ನಿಧಿಯನ್ನು ಹುಡುಕಿ ಪತ್ತೆ ಮಾಡುತ್ತಾರೆ. ಅದರ ಲಾಕ್ ತೆಗೆಯಲು ಜಾನಕಿ, ರಾಘವನನ್ನು ಕರೆಯುತ್ತಾಳೆ. ಆದರೆ ಪೀಟರ್ ಕಡೆಯವರು ನಿಧಿಯನ್ನು ತೆಗೆದುಕೊಂಡು ಹೊಗಲು ಯತ್ನಿಸುತ್ತಾರೆ. ಆಗ ರಾಘವನಿಗೆ ತನ್ನ ಜಾನಕಿ ಯಾರೆಂದು ಗೊತ್ತಾಗುತ್ತದೆ. ಹಾಗೆಯೇ ಕಳ್ಳರನ್ನ ಹಿಂಬಾಲಿಸುವ ರಾಘವ ಕೊನೆಗೂ ನಿಧಿಯ ಪೆಟ್ಟಿಗೆಯನ್ನು ಪಡೆಯುತ್ತಾನೆ.
ಈ ವಿಚಾರ ತಿಳಿಯುವ ಪೀಟರ್ ಜಾನಕಿಯನ್ನು ಅಪಹರಿಸಲು ಹೇಳುತ್ತಾನೆ. ಅದೇ ವೇಳೆ ತನ್ನ ಪ್ರೇಯಸಿ ಸಿಕ್ಕಿದ ಖುಷಿಯಲ್ಲಿದ್ದ ರಾಘವನಿಗೆ, ಜಾನಕಿಯ ಅಪಹರಣ ಹಾಗೂ ಮಾವ ಸಾಧು ಕೋಕಿಲ ತಲೆಗೆ ಬಿದ್ದ ಹೊಡೆತದಿಂದ ಕಂಗಾಲಾಗುತ್ತಾನೆ. ಮುಂದೇನು ಎಂಬ ಗೊಂದಲದಲ್ಲಿ ರಾಘವನೇ ಒಂದು ದೊಡ್ಡ ಸಮಸ್ಯೆಯಲ್ಲಿ ಲಾಕ್ ಆಗುತ್ತಾನೆ. ಲಾಕ್ ಓಪನ್ ಆಗುತ್ತಾ… ನಿಧಿ ಯಾರಿಗೆ ಸಿಗುತ್ತೆ… ಪ್ರೇಮಿಗಳು ಒಂದಾಗ್ತಾರಾ… ಕ್ಲೈಮಾಕ್ಸ್ ಏನು… ಇದಕ್ಕಾಗಿ ನೀವು ಚಿತ್ರವನ್ನು ನೋಡಬೇಕು.
ಇದು ಈ ಚಿತ್ರದ ಕಥಾವಸ್ತು ವಿಭಿನ್ನವಾಗಿದ್ದು ಸಸ್ಪೆನ್ಸ್ , ಥ್ರಿಲ್ಲಿಂಗ್ , ಲವ್, ಎಮೋಷನ್, ಆಕ್ಷನ್ ಸೇರಿದಂತೆ ಎಂಟರ್ಟೈನ್ಮೆಂಟ್ ಅಂಶಗಳ ಮೂಲಕ ನಿರ್ದೇಶಕರು ತೆರೆಯ ಮೇಲೆ ಹೇಳಿರುವ ರೀತಿ ಸೊಗಸಾಗಿದೆ. ಬಂಡವಾಳ ಹೂಡಿರುವ ನಿರ್ಮಾಪಕರು ಸಿನಿಮಾಗೆ ಏನು ಬೇಕೋ ಅದನ್ನ ಅಚ್ಚುಕಟ್ಟಾಗಿ ಒದಗಿಸಿದ್ದಾರೆ.
ಚಿತ್ರದ ಸಂಗೀತ ಹಾಗೂ ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಇನ್ನು ಯುವ ನಟ ಮಿಲಿಂದ್ ಬಹಳ ಸೊಗಸಾಗಿ ಪಾತ್ರಕ್ಕೆ ಜೀವ ತುಂಬಿದ್ದು, ಭರವಸೆಯ ನಾಯಕನಾಗಿ ನಿಲ್ಲುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಲವ್ , ಆಕ್ಷನ್ , ಎಮೋಷನ್ ಗೂ ಜೈ ಎನ್ನುವಂತೆ ಅಭಿನಯಿಸಿದ್ದಾರೆ. ಇನ್ನು ನಾಯಕಿಯಾಗಿ ರೆಚೆಲ್ ಡೇವಿಡ್ ಕೂಡ ತೆರೆಯ ಮೇಲೆ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಾ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ.
ಇನ್ನು ಸಾಧು ಕೋಕಿಲ ರ ಜಪಾನ್ ಭಾಷೆ ಚಿತ್ರದ ಹೈಲೈಟ್ ನಲ್ಲಿ ಒಂದು,ಅಷ್ಟೇ ಅದ್ಭುತವಾಗಿ ಮತ್ತೊಬ್ಬ ನಟ ಶೋಭ್ ರಾಜ್ ಕೂಡ ನಟಿಸಿದ್ದಾರೆ. ಉಳಿದಂತೆ ಅವಿನಾಶ್, ವೀಣಾ ಸುಂದರ್ , ಧರ್ಮಣ್ಣ, ಸುಂದರ್ ವೀಣಾ, ಭೂಮಿ ಶೆಟ್ಟಿ ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಕೂತು ನೋಡಬಹುದಾದಂಥ ಚಿತ್ರ ಇದಾಗಿದೆ.