Movie Review

ದುಷ್ಟರ ಸುಳಿಯಲ್ಲಿ ಸಂಬಂಧದ ಕಥೆ. ‘ವಾಮನ’ : ಚಿತ್ರವಿಮರ್ಶೆ ರೇಟಿಂಗ್ : 3.5/ 5

ರೇಟಿಂಗ್ : 3.5/ 5

ಚಿತ್ರ : ವಾಮನ
ನಿರ್ದೇಶಕ : ಶಂಕರ್ ರಾಮನ್
ನಿರ್ಮಾಪಕ : ಚೇತನ್ ಗೌಡ
ಸಂಗೀತ : ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ
ಛಾಯಾಗ್ರಹಣ : ಮಹೇನ್ ಸಿಂಹ
ತಾರಾಗಣ : ಧನ್ವೀರ್ , ರೀಷ್ಮಾ ನಾಣಯ್ಯ ,ತಾರಾ ಅನುರಾಧ , ಸಂಪತ್ ರಾಜ್, ಆದಿತ್ಯ ಮೆನನ್ , ಅಚ್ಚುತ್ ಕುಮಾರ್, ಅವಿನಾಶ್, ಪೆಟ್ರೋಲ್ ಪ್ರಸನ್ನ , ಕಾಕ್ರೋಜ್ ಸುಧೀ ಹಾಗೂ ಮುಂತಾದವರು…

ಪ್ರತಿ ಒಂದು ಸಂಬಂಧಗಳ ಹಿನ್ನೆಲೆಯಲ್ಲಿ ಒಂದೊಂದು ಕಥೆ ಇದ್ದೇ ಇರುತ್ತದೆ. ಸ್ನೇಹ , ಪ್ರೀತಿ , ತ್ಯಾಗ , ನೋವು , ದ್ವೇಷದ ನಡುವೆ ತಾಯಿ ಮಗನ ನೋವಿನ ಕಥೆ ವ್ಯಥೆಯ ಸುತ್ತ ದುಷ್ಟ ವ್ಯಕ್ತಿಗಳ ಆರ್ಭಟಕ್ಕೆ ತಕ್ಕ ಪಾಠವನ್ನು ಕಲಿಸುವ ಹಾದಿಯಲ್ಲಿ ಸಾಗಿ ಈ ವಾರ ಪರದೆಯ ಮೇಲೆ ಬಂದಿರುವಂತಹ ಚಿತ್ರವೇ “ವಾಮನ”. ಅಂಡರ್ವರ್ಲ್ಡ್ ಲಿಂಕ್ ಮೂಲಕ ಗನ್ಸ್ ಹಾಗೂ ಡ್ರಗ್ಸ್ ಗಳ ದಂಧೆ ನಡೆಸುವ ಕರಂ ಲಾಲ್ ಸೇಟ್ (ಆದಿತ್ಯ ಮೆನನ್) ತನ್ನ ಗ್ಯಾಂಗ್ ಮೂಲಕ ಹಾವಳಿ ನಡೆಸುತ್ತಾನೆ. ಇವನ ವಿರುದ್ಧ ಮತ್ತೊಬ್ಬ ಗ್ಯಾಂಗ್ ಲೀಡರ್ ಪಾಪಣ್ಣ (ಸಂಪತ್ ರಾಜ್) ಕೂಡ ದಂಧೆಯಲ್ಲಿ ತೊಡಗಿರುತ್ತಾನೆ. ಇಬ್ಬರ ಗ್ಯಾಂಗ್ ವಾರ್ ನಲ್ಲಿ ಪೊಲೀಸರು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಇದರ ನಡುವೆ ತನ್ನ ತಾಯಿ ಪಾರ್ವತಿ (ತಾರಾ) ಹಾಗೂ ಗೆಳೆಯರೊಟ್ಟಿಗೆ ಗ್ಯಾರೇಜ್ ನೋಡಿಕೊಳ್ಳುತ್ತಾ ನೋವಿನ ಕಿಚ್ಚಿಗೆ ಕಾಯುವ ಸಿಡಿಗುಂಡಿನಂತಹ ಹುಡುಗ ಗುಣ (ಧನ್ವೀರ್). ಇವನ ಪ್ರೀತಿಗೆ ಸದಾ ಕಾಯುವ ಶ್ರೀಮಂತ ವ್ಯಕ್ತಿಯ ಮಗಳು ನಂದಿನಿ (ರೀಷ್ಮಾ ನಾಣಯ್ಯ).

ಇವರಿಬ್ಬರ ಪ್ರೀತಿ , ಕಿತ್ತಾಟ ಇದ್ದದ್ದೆ. ಇದರ ನಡುವೆ ಕರಂ ಲಾಲ್ ಹೇಳಿದಂತೆ ಪಾಪಣ್ಣನ ಗ್ಯಾಂಗ್ ನನ್ನ ಮಠ ಹಾಕುತ್ತಾ ಬರುವ ಗುಣ. ಇದೆಲ್ಲದಕ್ಕೂ ಒಂದು ಫ್ಲಾಶ್ ಬ್ಯಾಕ್ ಕತೆ ತೆರೆದುಕೊಳ್ಳುತ್ತಾ ಹೋಗುತ್ತದೆ. ತಾಯಿ ಮಗನ ಬದುಕಿನ ಹಿನ್ನೆಲೆ ದುಷ್ಟ ವ್ಯಕ್ತಿಯ ನಂಟು ಕಾಣುತ್ತದೆ. ಮುಗ್ಧರ ಬದುಕಿನಲ್ಲಿ ನೋವಿನ ಸರಮಾಲೆ ಎದುರಾಗಿ ಒಂದಕ್ಕೊಂದು ಕೊಂಡಿಯಂತೆ ಸಾಗಿ ಅಮ್ಮ ಮಗನ ಗುರಿ , ದುಷ್ಟ ವ್ಯಕ್ತಿಗಳ ಆರ್ಭಟ , ಪ್ರೀತಿಯ ತಳಮಳ , ಕ್ಲೈಮ್ಯಾಕ್ಸ್ ಉತ್ತರ ಏನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಒಮ್ಮೆ ಈ ಚಿತ್ರವನ್ನ ನೋಡಲೇಬೇಕು.

ಭರ್ಜರಿ ಆಕ್ಷನ್ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಂತ ಚಿತ್ರವನ್ನ ನೀಡಿರುವ ನಿರ್ದೇಶಕರ ಆಲೋಚನೆ ಚೆನ್ನಾಗಿದೆ. ಚಿತ್ರಕಥೆ ಇದ್ದಲ್ಲೇ ಹೆಚ್ಚು ಗಿರಿಕಿ ಹೊಡೆದಿದ್ದು , ಹಾಸ್ಯ ಸನ್ನಿವೇಶಗಳ ಕೊರತೆ ಕಾಣುತ್ತದೆ. ದ್ವಿತೀಯ ಭಾಗದ ಫ್ರೀ ಕ್ಲೈಮ್ಯಾಕ್ಸ್ ಚಿತ್ರದ ಜೀವಾಳವಾಗಿದ್ದು, ಒಮ್ಮೆ ನೋಡುವಂತಿದೆ. ಅದ್ದೂರಿಯಾಗಿ ನಿರ್ಮಿಸಿರುವ ನಿರ್ಮಾಪಕರ ಖರ್ಚು ತೆರೆಯ ಮೇಲೆ ಕಾಣುತ್ತದೆ. ಸಂಗೀತದ ಮೋಡಿ ಗುಣುಗುವಂತಿದ್ದು , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಇನ್ನು ಸಾಹಸ , ಸಂಕಲನ ಕೆಲಸವೂ ಅಚ್ಚುಕಟ್ಟಾಗಿದೆ. ಇನ್ನು ನಾಯಕನಾಗಿ ನಟಿಸಿರುವ ಧನ್ವೀರ್ ಮಿಡಲ್ ಕ್ಲಾಸ್ ಹುಡುಗನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಕ್ಷನ್ ಗೆ ಸೈ ಎಂದಿರುವ ಹೀರೋ ನಟನೆಗೆ ಶ್ರಮ ಪಟ್ಟಿದ್ದಾರೆ. ಇನ್ನು ಮುದ್ದು ಮುದ್ದಾಗಿ ಕಾಣುವ ರೀಷ್ಮಾ ನಾಣಯ್ಯ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ತಾಯಿಯ ಪಾತ್ರದಲ್ಲಿ ನಟಿ ತಾರಾ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಪ್ರಮುಖ ಖಳನಾಯಕರಾಗಿ ಸಂಪತ್ ರಾಜ್ , ಆದಿತ್ಯ ಮೆನನ್ ತಮ್ಮ ತಮ್ಮ ಖಡಕ್ ಡೈಲಾಗ್ , ಹವಾ ಭಾವದ ಮೂಲಕ ಮಿಂಚಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಮಾಸ್ , ಆಕ್ಷನ್ , ಲವ್ , ಸೆಂಟಿಮೆಂಟ್ ಎಲ್ಲವು ಒಳಗೊಂಡಿರುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.

error: Content is protected !!