ವರಾಹಚಕ್ರಂ ಚಿತ್ರಕ್ಕೆ ಮಾಜಿಸಚಿವ ಆರ್.ಅಶೋಕ್ ಚಾಲನೆ
ಮನಸುಗಳ ಮಾತು ಮಧುರ ಖ್ಯಾತಿಯ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಅವರದೇ ನಿರ್ಮಾಣ ಹಾಗೂ ನಿರ್ದೇಶನದ, ‘ವರಾಹಚಕ್ರಂ’ ಚಿತ್ರದ ಶುಭಮುಹೂರ್ತ ಸಮಾರಂಭಚಂದ್ರಾ ಲೇಔಟ್ ನ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನೆರವೇರಿತು. ಮಾಜಿಸಚಿವ ಆರ್.ಅಶೋಕ್ ಅವರು ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.
ಈಗಿನ ಡಿಜಿಟಲ್ ಜಗತ್ತಿನಲ್ಲಿ ಏನೇನೆಲ್ಲ ಅನ್ಯಾಯ, ಮೊಸ, ಅಕ್ರಮಗಳು ನಡೆಯುತ್ತಿವೆ ಎಂಬುದನ್ನು ಹೇಳಹೊರಟಿರುವ ನಿರ್ದೇಶಕರು ಆಧುನಿಕ ಪಂಚ ಪಾಂಡವರಂತೆ ಐವರು ನಾಯಕರನ್ನಿಟ್ಟುಕೊಂಡು ಇದಕ್ಕೆಲ್ಲ ಹೇಗೆ ಅಂತ್ಯ ಹಾಡುತ್ತಾರೆಂಬುದನ್ನು ಕಾದುನೋಡಬೇಕಿದೆ. ತೆಲುಗುನಟ ಭಾನುಚಂದರ್, ಹಿರಿಯನಟಿ ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್, ಆರ್ಯನ್ ಹಾಗೂ ಪ್ರತೀಕ್ ಗೌಡ ಪಂಚಪಾಂಡವರಾಗಿ ಕಾಣಿಸಿಕೊಳ್ಳಲಿದ್ದಾರೆ.
ನಾಯಕಿಯರಾಗಿ ಶೋಭಾರಾಣಿ, ಪ್ರಿಯಾ ತರುಣ್, ಅನನ್ಯ, ಜಾಹ್ನವಿ, ದೀಕ್ಷಾ, ಚೈತ್ರಾ ನಟಿಸುತ್ತಿದ್ದಾರೆ. ಚಿ.ಗುರುದತ್, ಶೋಭರಾಜ್ ಅಲ್ಲದೆ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದು, ಅವರ ಜೋಡಿಯಾಗಿ ಮುಂಬೈನ ನೇಹಾ ಅನ್ಸಾರಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಪ್ರಮುಖ ಪಾತ್ರವೊಂದಕ್ಕೆ ಸೋನು ಸೂದ್ ರನ್ನು ಕರೆತರುವ ಪ್ರಯತ್ನವೂ ನಡೆದಿದೆ.
ಲಾವಣ್ಯ ಗ್ರೂಪ್ ಸಹಯೋಗದೊಂದಿಗೆ ಮನ್ವಂತರಿ ಮೂವಿಮೇಕರ್ಸ್ ಅಡಿ ಮಂಜು ಮಸ್ಕಲ್ ಮಟ್ಟಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಈ ಚಿತ್ರದಲ್ಲಿ ಕಥೆಯೇ ನಾಯಕ, ವರಾಹ ವಿಷ್ಣುವಿನ ಒಂದು ಅವತಾರ, ಬೆಂಗಳೂರಿನಲ್ಲಿ ಡಿಜಿಟಲೈಜೇಶನ್ ನಿಂದ ಕೆಲವು ದುರುಪಯೋಗಗಳಾಗುತ್ತಿವೆ.
ಅವ್ಯವಸ್ಥಿತ ನಿಯಮಗಳು, ದೌರ್ಜನ್ಯಗಳಿಗೆ ಅಂತ್ಯ ಹಾಡುವ ಕಾನ್ಸೆಪ್ಟ್ ವರಾಹಚಕ್ರಂ ಚಿತ್ರದಲ್ಲಿದೆ. ಕಣ್ಣು, ಗನ್ನು, ಪೆನ್ನು ಈ ಮೂರನ್ನೂ ಇಟ್ಟುಕೊಂಡು ಏನೋ ಮಾಡಲು ಹೊರಟಿದ್ದೇನೆ ಬಳ್ಳಾರಿ, ಹಿರಿಯೂರು, ಬೆಂಗಳೂರು, ಚಿತ್ರದುರ್ಗ, ತಮಿಳುನಾಡಿನ ಪೊಲ್ಲಾಚ್ಚಿ ಅಲ್ಲದೆ ಉತ್ತರ ಪ್ರದೇಶದ ವಾರಣಾಸಿ, ಕಾಶಿಯಲ್ಲೇ 20 ದಿನ ಶೂಟಿಂಗ್ ನಡೆಸುವ ಪ್ಲಾನಿದೆ. ಪ್ರೇಮಾ ಅವರದು ಗಟ್ಟಿ ಪಾತ್ರ, ಸಾಯಿಕುಮಾರ್ ಪಾತ್ರ ಕೂಡ ಅದ್ಭುತವಾಗಿದೆ ಎಂದು ಚಿತ ಬಗ್ಗೆ ಹೇಳಿದರು. ನಟಿ ಪ್ರೇಮಾ ಮಾತನಾಡಿ ಈ ಹಿಂದೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾದ, ಸ್ವಲ್ಪ ನೆಗೆಟಿವ್, ಪಾಸಿಟಿವ್ ಎರಡೂ ಶೇಡ್ ಇರೋ ಪಾತ್ರ. ಭಾನುಚಂದರ್ ಜೊತೆ ಹಿಂದೆ ದೇವಿ ಚಿತ್ರದಲ್ಲಿ ಅಭಿನಯಿಸಿದ್ದೆ ಎಂದು ಹೇಳಿದರು.
ಚಿತ್ರದ 5 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುವ ಜೊತೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿರುವ ಡಾ.ವಿ. ನಾಗೇಂದ್ರಪ್ರಸಾದ್ ಮಾತನಾಡಿ ಇದೊಂದು ಆಕ್ಷನ್, ಫ್ಯಾಮಿಲಿ ಜೊತೆಗೆ ಎಂಟರ್ ಟೈನಿಂಗ್ ಆಗಿರುವ ಅಪ್ಪಟ ಕಮರ್ಷಿಯಲ್ ಚಿತ್ರ, ಈಗಿನ ಯುಗದಲ್ಲಿ ಡಿಜಿಟಲ್ ಮಾಲಿನ್ಯ ಹೇಗೆ ನಡೆಯುತ್ತಿದೆ ?, ಸಮಾಜದ ಅನೇಕ ಓರೆ ಕೋರೆಗಳನ್ನು ಪ್ರೇಕ್ಷಕರ ಮುಂದೆ ಇಡುವ, ಅಲ್ಲಿ ನಡೆಯುತ್ತಿರುವ ಅನೇಕ ದುಷ್ಕೃತ್ಯಗಳನ್ನು ಹೇಳುವ ಚಿತ್ರವಿದು.
ನನ್ನ ಕೆಲಸ ಆಫ್ ಸ್ಕ್ರೀನ್ ನಲ್ಲೇ ಜಾಸ್ತಿಯಿದ್ದು, ಚಿತ್ರದ ಡೈಲಾಗ್ ಕೂಡ ಬರೆಯುತ್ತಿದ್ದೇನೆ. ಪ್ರೀತಿಯಿಂದ ತೂಕವಿರುವ ಒಂದು ಪಾತ್ರವನ್ನೂ ಸಹ ಮಾಡುತ್ತಿದ್ದೇನೆ. ಈಗ 30 ಸೆಕೆಂಡುಗಳಲ್ಲಿ ಕೇಳುಗರನ್ನು ಆಕರ್ಷಿಸುವ ಹಾಡುಗಳನ್ನು ಮಾಡಬೇಕಿದೆ ಎಂದರು. ನಟ ಭಾನುಚಂದರ್ ಮಾತನಾಡಿ ಬಹಳ ದಿನಗಳ ನಂತರ ಕನ್ನಡದಲ್ಲಿ ಅಭಿನಯಿಸುತ್ತಿದ್ದು, ಜಡ್ಜ್ ಪಾತ್ರ ನನ್ನದು ಎಂದರು. ಚಿತ್ರಕ್ಕೆ ಶರತ್ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದೆ