ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಂದು ಉತ್ತಮ ಸಂದೇಶ (ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವಿಮರ್ಶೆ -ರೇಟಿಂಗ್ : 4 /5)
ರೇಟಿಂಗ್ : 4 /5
ಚಿತ್ರ : ವಿದ್ಯಾರ್ಥಿ ವಿದ್ಯಾರ್ಥಿನಿಯರೇ
ನಿರ್ದೇಶಕ : ಅರುಣ್ ಅಮುಕ್ತ
ನಿರ್ಮಾಪಕರು : ಸುಬ್ರಮಣ್ಯ ಕುಕ್ಕೆ , ಎ. ಸಿ. ಶಿವಲಿಂಗೇಗೌಡ
ಸಂಗೀತ : ವಿಜೇತ್ ಕೃಷ್ಣ
ಛಾಯಾಗ್ರಹಣ : ಕುಮಾರ್ ಗೌಡ
ತಾರಾಗಣ: ಚಂದನ್ ಶೆಟ್ಟಿ, ಅಮರ್, ಮನೋಜ್, ಭಾವನಾ, ಮನಸ್ವಿ, ಭವ್ಯ, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಸಿಂಚನಾ, ಕಾಕ್ರೋಚ್ ಸುಧಿ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಹಾಗೂ ಮುಂತಾದವರು…
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ವಿದ್ಯೆಯೇ ಭವಿಷ್ಯದ ಬೆಳಕು ಹಾಗೂ ಆಸರೆ. ಅದರಂತೆ ವಿದ್ಯಾರ್ಥಿಗಳು ಕೂಡ ತಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಟ್ಟು ಜೀವನದಲ್ಲಿ ಒಂದು ಉತ್ತುಂಗಕ್ಕೆ ಏರಲು ದಾರಿ ಮಾಡಿಕೊಳ್ಳುವುದು ಅತ್ಯಗತ್ಯ. ಆದರೆ ದಿಕ್ಕು ತಪ್ಪಿದಾಗ ಎದುರಾಗುವ ಕಷ್ಟಕಾರ್ಪಣ್ಯಗಳನ್ನು ಸುತ್ತ ಶಾಲೆಯ ತುಂಟಾಟ , ತರ್ಲೆ, ರ್ಯಾಗಿಂಗ್, ನೋವು ನಲಿವಿನ ಸುತ್ತ ಸಂದೇಶವನ್ನ ಬೆಸೆದುಕೊಂಡು ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ”.
ಶ್ರೀಮಂತರ ಮಕ್ಕಳೇ ತುಂಬಿಕೊಂಡಿರುವ ಶಾಲೆಯಲ್ಲಿ ಪ್ರತಿಭಾವಂತ ಬಡ ಹೆಣ್ಣು ಮಗಳು ಶಾರದ ಶಾಲೆಯ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಡೀ ಶಾಲೆಯ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳಲ್ಲಿ ಈ ಸಾವಿನ ಬಗ್ಗೆ ಆತಂಕವಿರುತ್ತದೆ.
ಇನ್ನು ವಿದ್ಯಾರ್ಥಿಗಳ ಭವಿಷ್ಯದ ನಿಟ್ಟಿನಲ್ಲಿ ಶಾಲೆ ತನ್ನ ಕೆಲಸವನ್ನು ಮುಂದುವರೆಸುತ್ತದೆ. ಶ್ರೀಮಂತರ ಮಕ್ಕಳಾದ ಯಶ್(ಮನೋಜ್ ವಿವಾನ್), ಧ್ರುವ(ಅಮರೇಂದ್ರನ್) ಹಾಗೂ ರಮ್ಯಾ(ಭಾವನ) ಇಡೀ ಶಾಲೆಯ ಕ್ಯಾಂಪಸ್ ಹಾಗೂ ವಿದ್ಯಾರ್ಥಿಗಳ ಕಂಟ್ರೋಲ್ ತಮ್ಮ ವಶದಲ್ಲಿಟ್ಟುಕೊಂಡು ಅಬ್ಬರಿಸುತ್ತಾರೆ.
ಅಚಾನಕ್ಕಾಗಿ ಮುದ್ದಾದ ಬೆಡಗಿ ನಿವೇದಿತಾ (ಮನಸ್ವಿ) ಕೂಡ ಈ ಗ್ಯಾಂಗ್‍ಗೆ ಸೇರಿಕೊಳ್ಳುತ್ತಾಳೆ. ಶಾಲೆಯಲ್ಲಿ ನಡೆಯುವ ಸ್ಪೋರ್ಟ್ಸ್ ಒಂದಷ್ಟು ತರ್ಲೆ ವಿಚಾರವಾಗಿ ಈ ಗ್ಯಾಂಗಿನ ವಿರುದ್ಧವಾಗಿ ಮತ್ತೊಂದು ಗ್ಯಾಂಗ್ ಆಗಾಗ ಕೈ ಕೈ ಮಿಲಾಯಿಸುತಿರುತ್ತದೆ. ಶ್ರೀಮಂತರ ಡೊನೇಷನ್ , ಪ್ರಭಾವದ ಮೇರೆಗೆ ನಡೆಯುವ ಸ್ಕೂಲ್ ಪ್ರಿನ್ಸಿಪಲ್ , ಸಿಬ್ಬಂದಿ ಕೂಡ ಏನು ಮಾಡದಂತ ಪರಿಸ್ಥಿತಿ ಇರುತ್ತದೆ. ಆ ಶಾಲೆಗೆ ಪ್ಯೂನ್ ಆಗಿ ಸೇರಿಕೊಳ್ಳುವ ರಾಮು (ಚಂದನ್ ಶೆಟ್ಟಿ) ಈ ದುರಹಂಕಾರಿಗಳಿಗೆ ಬುದ್ಧಿ ಹೇಳಲು ಹೋಗಿ ಇಕ್ಕಟ್ಟಿಗೆ ಸಿಲುಕಿ ಅವರ ಮಾತಿನಂತೆ ನಡೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ರಾಜಕಾರಣಿ , ಪೊಲೀಸ್, ನಟಿ , ಜರ್ನಲಿಸ್ಟ್ ಮಕ್ಕಳಾದ ಇವರ ಆಟಕ್ಕೆ ಒಂದು ಸರಿ ಪಾಠ ಹೇಳುವಂತಹ ಗೇಮ್ ಎದುರಾಗುತ್ತದೆ , ಈ ಎಲ್ಲಾ ಘಟನೆಗಳಿಗೆ ರೋಚಕ ತಿರುವು ನಾಂದಿ ಹಾಡುತ್ತದೆ.
ಹುಡುಗಿ ಸಾವಿಗೆ ಕಾರಣ ಏನು…
ದುರಹಂಕಾರಿಗಳಿಗೆ ಪಾಠ ಕಲಿಸುವವರು ಯಾರು , ಹೇಗೆ ,
ಕ್ಲೈಮಾಕ್ಸ್ ಹೇಳುವ ಉತ್ತರ ಏನು ಎಂಬುದಕ್ಕೆ ನೀವು ಈ ಚಿತ್ರ ನೋಡಲೇಬೇಕು.
ಇನ್ನು ಈ ಚಿತ್ರದ ನಿರ್ದೇಶಕ ಅರುಣ್ ಅಮುಕ್ತ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತವಾದ ಕಥಾನಕ ಮೂಲಕ ವಿದ್ಯಾರ್ಥಿಗಳು , ಪೋಷಕರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸಕ್ಕೆ ಮುಂದಾಗಿರುವುದು ಮೆಚ್ಚುವಂಥದ್ದು. ಶಾಲೆಯ ತುಂಟಾಟ, ತರ್ಲೆ , ಗ್ಯಾಂಗಳ ರ್ಯಾಗಿಂಗ್, ಮೊಬೈಲ್ ದುರ್ಬಳಕೆ , ಪೋಷಕರ ಜವಾಬ್ದಾರಿ ಬಗ್ಗೆ ಸೇರಿದಂತೆ ಒಂದಷ್ಟು ವಿಚಾರಗಳು ಗಮನ ಸೆಳೆಯುತ್ತದೆ.
ಮೊಬೈಲ್ ಗೇಮಿಂಗ್ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಚಿತ್ರದ ಓಟ ಸ್ವಲ್ಪ ಕಡಿತಗೊಳಿಸಿದರೆ ಚೆನ್ನಾಗಿರುತ್ತಿತ್ತು. ಅದರಲ್ಲೂ ಒಂದೊಳ್ಳೆಯ ಸಂದೇಶವೂ ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ನಿರ್ಮಾಪಕರು ಹಾಕಿರುವ ಹಣ ಪರದೆಯ ಮೇಲೆ ಅದ್ದೂರಿಯಾಗಿ ಕಾಣುತ್ತದೆ. ಇನ್ನು ಸಂಗೀತ , ಹಿನ್ನೆಲೆ ಸಂಗೀತ ಸೊಗಸಾಗಿ ಬಂದಿದ್ದು , ಛಾಯಾಗ್ರಾಹಕರ ಕೈಚಳಕ ಗಮನ ಸೆಳೆಯುತ್ತದೆ.
ಇನ್ನು ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಅಭಿನಯಿಸಿದ್ದಾರೆ ನಟ ಚಂದನ್ ಶೆಟ್ಟಿ. ರಾಪ್ ಸಾಂಗ್ ಮೂಲಕ ಮಿಂಚುತ್ತಿದ್ದ ಚಂದನ್ ನಟನೆಯಲ್ಲಿ ಸೈ ಎನ್ನುವಂತೆ ಕಾಣಿಸಿಕೊಂಡಿದ್ದಾರೆ. ಎರಡು ಶೇಡ್ ಗಳಲ್ಲಿ ಮನೋಗ್ನವಾಗಿ ಮಿಂಚಿದ್ದಾರೆ. ಇನ್ನು ಯುವ ಪ್ರತಿಭೆಗಳಾದ ಮನೋಜ್ ವಿವಾನ್ , ಅಮರ್, ಮನಸ್ವಿ , ಭಾವನ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಬಹಳಷ್ಟು ಶ್ರಮಪಟ್ಟಿದ್ದಾರೆ.
ವಿದ್ಯಾರ್ಥಿಗಳ ಪುಂಡಾಟಿಕೆಯಲ್ಲಿ ಮೆರೆದಿದ್ದಾರೆ. ಇವರಟ್ಟಿಗೆ ಅಭಿನಯಿಸಿದ ಮತ್ತಷ್ಟು ಯುವ ಪ್ರತಿಭೆಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇನ್ನು ಪ್ರಮುಖ ಶ್ರೀಮಂತ ನಟಿಯ ಪಾತ್ರದಲ್ಲಿ ಭವ್ಯ , ಜರ್ನಲಿಸ್ಟ್ ಆಗಿ ಅರವಿಂದರ್ ರಾವ್, ರಾಜಕಾರಣಿಯಾಗಿ ಸುನೀಲ್ ಪುರಾಣಿಕ್, ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಪ್ರಶಾಂತ್ ಸಂಬರ್ಗಿ , ಶಾರ್ಟ್ ಕಟ್ ದಾರಿ ತೋರುವ ಶಿವು ಪತ್ರದಲ್ಲಿ ಕಾಕ್ರೋಚ್ ಸುಧಿ , ಸಿಂಚನಾ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪೋಷಕರ ಜವಾಬ್ದಾರಿ ಸೇರಿದಂತೆ ಒಂದು ಉತ್ತಮ ಸಂದೇಶ ನೀಡಿರುವ ಚಿತ್ರ ಇದಾಗಿದ್ದು , ಎಲ್ಲರೂ ಒಮ್ಮೆ ನೋಡಬಹುದು.