“ವಿದ್ಯಾರ್ಥಿ ವಿದ್ಯಾರ್ಥಿನಿಯರೇ” ಟ್ರೈಲರ್ ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್…
ಇವತ್ತಿನ ಟ್ರೆಂಡಿಗೆ ತಕ್ಕಂತೆ ಚಿತ್ರ ಸಿದ್ಧವಾಗಿದ್ದು , ಯುವ ಪ್ರತಿಭೆಗಳ ಸಂಗಮದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಟ್ರೈಲರ್ ಅನ್ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವೀಕ್ಷಿಸಿ ಚಿತ್ರತಂಡದ ಶ್ರಮವನ್ನ ಕೊಂಡಾಡಿ ಈ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಹಳ ವಿಶೇಷ ಹಾಗೂ ಜೊಶ್ ನಿಂದ ಕೂಡಿದೆ ಅನ್ಸುತ್ತೆ ಚಿತ್ರ ಬಿಡುಗಡೆಗೊಂಡು ಯಶಸ್ವಿ ಆಗಲಿ ಎಂದು ಶುಭ ಕೋರಿದ್ದಾರೆ. ಇನ್ನು ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಯೂತ್ಸ್ ಸಬ್ಜೆಕ್ಟ್ ಸಿನಿಮಾ.
ಕಾಲೇಜ್ ಹುಡುಗ, ಹುಡುಗಿಯರ, ಹದಿ ಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಇಲ್ಲಿ ತೆರೆದಿಡಲಾಗಿದೆ. ಹಾಗಂತ ಇದು ಮಾಮೂಲಿಯಾಗೂ ಇದು ಸಿದ್ಧಸೂತ್ರದ ಚೌಕಟ್ಟಿಗೊಳಪಟ್ಟಿಲ್ಲ ಅನ್ನೋದು ಟ್ರೇಲರ್ ಎಳೆಯಲ್ಲಿ ಸ್ಪಷ್ಟವಾಗುತ್ತದೆ. ಹೊಡೆದಾಟ, ಬಡಿದಾಟ, ರ್ಯಾಗಿಂಗ್, ಬಿಸಿ ರಕ್ತದ ಹುಡುಗರ ಪುಂಡಾಟಿಕೆ ಸೇರಿದಂತೆ ಇಲ್ಲಿ ಎಲ್ಲವೂ ಇದೆ. ಅದರ ಜೊತೆ ಜೊತೆಗೇ ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನವೂ ಗಮನ ಸೆಳೆಯುವಂತಿದೆ.
ಮೋಜು ಮಸ್ತಿಯಲ್ಲಿ ಮೈಮರೆತ ಮನಸ್ಥಿತಿಗಳ ಕಥೆಯ ಸೂಚನೆಯಿದೆ. ಹಿಡಿತ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಯತ್ನವೂ ಇದೆ. ಪ್ರಸ್ತುತ ಕಾಲದ ಟೀನೇಜ್ ಹುಡುಗರ ಕಹಾನಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರ ಜೊತೆಗೆ ತಂದೆ-ತಾಯಿಯಿಂದ ಜವಾಬ್ದಾರಿ ಏನೆಂಬುದನ್ನ ಹೇಳುವ ಪ್ರಯತ್ನವನ್ನು ಮಾಡಿದಂತಿದೆ.
ಈ ಚಿತ್ರದ ಕುರಿತು ನಿರ್ದೇಶಕ ಅರುಣ್ ಅಮುಕ್ತ ಮಾತನಾಡುತ್ತಾ ಈಗ ನಾವು ಎ ಸೈಡ್ ನ ಟ್ರೈಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಬಿ ಸೈಡ್ ಟ್ರೇಲರ್ ಕೂಡ ಬಿಡುಗಡೆ ಮಾಡುತ್ತವೆ. ಇದು ನಮ್ಮ ತಂಡದ ವಿಶೇಷ ಪ್ರಯತ್ನವೂ ಆಗಿದ್ದು , ಈಗ ನೀವು ನೋಡಿದಂತ ಟ್ರೈಲರ್ ಗಿಂತ ವಿಭಿನ್ನವಾಗಿ ಬಿ ಸೈಡ್ ಟ್ರೈಲರ್ ಇರುತ್ತದೆ.
ಒಂದಷ್ಟು ಐ ಪ್ರೊಫೈಲ್ ಕುಟುಂಬಗಳ ಕಥಾನಕ ಸೃಷ್ಟಿ ಮಾಡಿಕೊಂಡು, ಪ್ರಸ್ತುತ ನಡೆಯುತ್ತಿರುವ ಹಲವು ಘಟನೆಗಳಿಗೂ ಇದು ಪೂರಕ ಎನ್ನುವಂತೆ ನಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಈ ಒಂದು ಚಿತ್ರವನ್ನ ಕನ್ನಡ , ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಮೂರು ಭಾಷೆಯಲ್ಲೂ ಈಗ ಟ್ರೈಲರ್ ಬಿಡುಗಡೆ ಮಾಡಿದ್ದೇವೆ.
ಮುಂದಿನ ತಿಂಗಳು ಚಿತ್ರವನ್ನು ತೆರೆಯ ಮೇಲೆ ತರುವ ಪ್ಲಾನ್ ಇದೆ. ನಿರ್ಮಾಪಕರು ನಮ್ಮನ ನಂಬಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಲಾವಿದರು ಕೂಡ ನಮಗೆ ಅಷ್ಟೇ ಉತ್ತಮವಾಗಿ ಸಾತ್ ನೀಡಿದ್ದು , ತಾಂತ್ರಿಕ ವರ್ಗವು ನನಗೆ ಬೆನ್ನೆಲುಬಾಗೆ ನಿಂತಿದ್ದಾರೆ. ಖಂಡಿತ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದು , ಸದ್ಯದಲ್ಲೇ ಇನ್ನಷ್ಟು ಮಾಹಿತಿಯನ್ನ ನೀಡುವ ಜೊತೆಗೆ ವೀಕ್ಷಕರ ಮುಂದೆ ಬರುತ್ತೇವೆ. ನಿಮ್ಮೆಲ್ಲರ ಪ್ರೀತಿಯ ಸಹಕಾರ ಇರಲಿ ಎಂದು ಕೇಳಿಕೊಂಡರು.
ಯುವ ಪ್ರತಿಭೆಗಳ ಆಸಕ್ತಿಯನ್ನು ಕಂಡು ಚಿತ್ರ ನಿರ್ಮಿಸಲು ಮುಂದಾದ ನಿರ್ಮಾಪಕರಾದ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ರವರು ಒಂದು ಉತ್ತಮ ಚಿತ್ರವನ್ನು ಮಾಡಿ ಎನ್ನುತ್ತಾ ಯಾವುದಕ್ಕೂ ಕೊರತೆ ಇಲ್ಲದಂತೆ ನಿರ್ದೇಶಕರು ಕೇಳಿದಷ್ಟು ಹಣವನ್ನು ನೀಡಿ ಈ ಒಂದು ಚಿತ್ರವನ್ನು ನಿರ್ಮಿಸಿದ್ದು , ಶ್ರೀಕಾಂತ್ .ಜಿ .ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಇಡೀ ತಂಡವನ್ನು ಮುನ್ನಡೆಸಿದ್ದರಂತೆ.
ಈ ಚಿತ್ರಕ್ಕೆ
ಕುಮಾರ್ ಗೌಡ ಛಾಯಾಗ್ರಹಣ , ವಿಜೇತ್ ಕೃಷ್ಣ , ವಾಸು ದೀಕ್ಷಿತ್ ಸಂಗೀತ ನಿರ್ದೇಶನದಲ್ಲಿ ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ , ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಈ ತಂಡದ ಕೆಲವು ತಾಂತ್ರಿಕ ವರ್ಗದವರು ಕೂಡ ಚಿತ್ರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಚಿತ್ರದಲ್ಲಿ ಬಹುತೇಕ ಯುವ ಪ್ರತಿಭೆಗಳು ಅಭಿನಯಿಸಿದ್ದು , ಚಿತ್ರದ ನಾಯಕರಾದ ನಾಯಕಿಯರಾದ ಅಮರ್, ಭಾವನಾ, ಮಾನಸಿ, ವಿವಾನ್ ಚಿತ್ರದಲ್ಲಿ ಅಭಿನಯಿಸಿರುವ ತಮ್ಮ ತಮ್ಮ ಪಾತ್ರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಹಾಗೆ ಇಡೀ ತಂಡ ನೀಡಿದ ಸಹಕಾರವನ್ನು ಕೂಡ ನೆನಪಿಸಿ ಕೊಂಡರು.
ಇನ್ನು ಈ ಚಿತ್ರದ ಪ್ರಮುಖ ಪಾತ್ರವನ್ನು ಮಾಡಿರುವ ಅರವಿಂದ್ ರಾವ್ ಈ ಕಾರ್ಯಕ್ರಮದ ನಿರೂಪಣೆ ಮಾಡುವುದರ ಜೊತೆಗೆ ತಮ್ಮ ಪಾತ್ರದ ಮಾಹಿತಿಯನ್ನು ಹಂಚಿಕೊಂಡರು. ಅದೇ ರೀತಿ ಮತ್ತೊಬ್ಬ ಕಲಾವಿದ ಪ್ರಶಾಂತ್ ಸಂಬರ್ಗಿ ಕೂಡ ಮಾತನಾಡುತ್ತಾ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಭಿನ್ನವಾಗಿದೆ ಎನ್ನುವುದರ ಜೊತೆಗೆ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ ಚಿತ್ರ ಖಂಡಿತ ಯಶಸ್ಸು ಕಾಣುತ್ತದೆ ಎಂದು ಹೇಳಿದರು. ಇನ್ನು ಉಳಿದಂತೆ ಈ ಚಿತ್ರದಲ್ಲಿ ಭವ್ಯ, ಸುನೀಲ್ ಪುರಾಣಿಕ್, ಸಿಂಚನಾ, ರಘು ರಾಮನಕೊಪ್ಪ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ.
ಇನ್ನು ಬಹಳ ಪ್ರಮುಖ ಪಾತ್ರ ಒಂದರಲ್ಲಿ ರಾಪರ್ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ. ಅವರ ಪಾತ್ರವನ್ನು ಅಷ್ಟೇ ಗೌಪ್ಯವಾಗಿ ಕಾಪಾಡಿಕೊಂಡು ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ ಚಿತ್ರತಂಡ. ಒಟ್ಟಾರೆಯಾಗಿ ಟ್ರೈಲರ್ ನೋಡಿದರೆ ನಿರ್ದೇಶಕರು ಹೊಸದೇನನ್ನೋ ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಈವರೆಗೂ ಹಂತ ಹಂತವಾಗಿ ಕಾಯ್ದುಕೊಂಡಿದ್ದ ಕುತೂಹಲವನ್ನು ಈಗ ಸೈಡ್ ಎ ಟ್ರೈಲರ್ ಸಾರ್ಥಕಗೊಳಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು , ಅದ್ದೂರಿ ಪ್ರಚಾರದ ಮೂಲಕ ಈ ಚಿತ್ರ ಹೊರಬರಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆಯಂತೆ.