“ವಿಷ್ಣುಪ್ರಿಯ”ರ ಮೊದಲ ಪ್ರೇಮಗೀತೆ ಬಿಡುಗಡೆ.
ವಿಷ್ಣುಪ್ರಿಯ 1990ರ ಕಾಲದಲ್ಲಿ ನಡೆದಂಥ ಮಾಸ್ ಲವ್ ಸ್ಟೋರಿ. ಕನ್ನಡದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ಯುವನಟ ಶ್ರೇಯಸ್ ಮಂಜು ಈ ಚಿತ್ರದಲ್ಲಿ ಲವರ್ ಬಾಯ್ ವಿಷ್ಣು ಆಗಿ ಪ್ರೇಕ್ಷಕರೆದುರು ಬರಲು ಅಣಿಯಾಗಿದ್ದಾರೆ. ಅಲ್ಲದೆ ಪ್ರಿಯಾ ಪಾತ್ರದಲ್ಲಿ ಮಲಯಾಳಂನ ಪ್ರಿಯಾ ವಾರಿಯರ್ ನಟಿಸಿದ್ದಾರೆ.
ತೊಂಭತ್ತರ ದಶಕದಲ್ಲಿ ನಡೆದಂಥ ಒಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ ನಿರ್ದೇಶಕ ವಿ.ಕೆ. ಪ್ರಕಾಶ್ ಅವರು ನಿರೂಪಿಸಿದ್ದಾರೆ. ವಿಷ್ಣುಪ್ರಿಯ ಸಿನಿಮಾದ ಮೊದಲ ಪ್ರೇಮ ಗೀತೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ ಶರಣ್ ಹಾಗೂ ನಟಿ ರುಕ್ಮಿಣಿ ವಸಂತ್ ಸೇರಿ ನಾಗೇಂದ್ರ ಪ್ರಸಾದ್ ರಚನೆಯ ಚಿಗುರು ಚಿಗುರು ಸಮಯ ಹಾಡನ್ನು ಲಾಂಚ್ ಮಾಡಿದರು.
ನಿರ್ಮಾಪಕರಾದ ರಮೇಶ್ ರೆಡ್ಡಿ, ಚೇತನ್ ಕುಮಾರ್ , ಸೂರಪ್ಪಬಾಬು, ಅಲ್ಲದೆ ನಿರ್ದೇಶಕರಾದ ಗುರು ದೇಶಪಾಂಡೆ, ದಯಾಳ್ ಪದ್ಮನಾಬನ್, ಭರ್ಜರಿ ಚೇತನ್, ಸತ್ಯಪ್ರಕಾಶ್, ಮಹೇಶ್ ಕುಮಾರ್, ನಟ ವಿಕ್ರಂ ರವಿಚಂದ್ರನ್ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನಟ ಶರಣ್ ಮಾತನಾಡುತ್ತ ಕೆಲವು ಹಾಡುಗಳು ಥಟ್ ಅಂತ ಮೆದುಳಿಗೇ ನಾಟುತ್ತವೆ. ಅಂಥಾ ಹಾಡನ್ನು ನಾನಿಲ್ಲಿ ನೋಡಿದೆ. ಇದೊಂದು ಫೀಲ್ ಗುಡ್ ಸಿನಿಮಾ. ನಿರ್ದೇಶಕರು ಪ್ರತಿ ಫ್ರೇಮ್ ನಲ್ಲೂ ಕಾಣಿಸ್ತಾರೆ. ಟೈಟಲ್ ನಲ್ಲೇ ವಿಷ್ಣು ಸರ್ ಇದ್ದಾರೆ. 2024ನ್ನು ಸ್ಟಾರ್ಟ್ ಮಾಡಲು ಅದ್ಭುತವಾದ ಸಾಂಗ್ ಸಿಕ್ಕಿದೆ ಎಂದರು.
ನಂತರ ದಯಾಳ್ ಪದ್ಮನಾಭನ್ ಮಾತನಾಡಿ ಮಂಜು ಒಂದು ಸಿನಿಮಾ ಮಾಡುವಾಗ ತುಂಬಾ ಕ್ಲಿಯರ್ ಆಗಿರ್ತಾರೆ. ಅವರಿಲ್ಲಿ ಬರೀ ಪ್ರೊಡ್ಯೂಸರ್ ಆಗಿ ಸಿನಿಮಾ ಮಾಡಿಲ್ಲ. ಒಬ್ಬ ತಂದೆಯಾಗಿ ಜವಾಬ್ದಾರಿ ಇದೆ ಎಂದರು. ಗುರು ದೇಶಪಾಂಡೆ ಮಾತನಾಡಿ ಶ್ರೇಯಸ್ ತುಂಬಾ ಹಾರ್ಡ್ ವರ್ಕ್ ಮಾಡೋಹುಡುಗ ಎಂದರು. ನಿರ್ಮಾಪಕ ಕೆ.ಮಂಜು ಮಾತನಾಡುತ್ತ ಚಿತ್ರರಂಗ ನನಗೆ ಹಣ, ಗೌರವ ಎಲ್ಲವನ್ನೂ ಕೊಟ್ಟಿದೆ. ಒಬ್ಬ ರೈತ ಒಳ್ಳೆ ಬೆಳೆ ಬೆಳೆಯಬೇಕಾದರೆ ಮಳೆಯನ್ನ ನಂಬ್ತಾನೆ, ಆದೇರೀತಿ ನನ್ನ ಮಗನನ್ನು ಚಿತ್ರರಂಗದಲ್ಲಿ ಬೆಳೆಸಲು ನಿರ್ದೇಶಕರನ್ನು ನಂಬಿದ್ದೇನೆ.
ಈಗಿನ ಕೆಲ ನಿರ್ದೇಶಕರಿಗೆ ಜವಾಬ್ದಾರಿ ಇಲ್ಲ. ನಿರ್ಮಾಪಕ ದುಡ್ಡನ್ನು ಎಲ್ಲಿಂದ ತಂದು ಹಾಕ್ತಾನೆ ಅಂತ ಅವರು ಅರ್ಥಮಾಡಿಕೊಳ್ಳಬೇಕು. ಚೆನ್ನಾಗಿ ಬರಬೇಕೆಂಬ ಕಾರಣದಿಂದ ಸಿನಿಮಾ ಲೇಟಾಗಿದೆ. ಮುಂಚಿತವಾಗೇ ಯೂಥ್, ಪ್ರೇಮಿಗಳಿಗೆ ನಮ್ಮ ಸಿನಿಮಾನ ತೋರಿಸುತ್ತೇನೆ. ಶಿವರಾತ್ರಿಗೆ ಅಥವಾ ಏಪ್ರಿಲ್ 5ಕ್ಕೆ ರಿಲೀಸ್ ಮಾಡಬೇಕೆನ್ನುವ ಪ್ಲಾನಿದೆ ಎಂದು ಹೇಳಿದರು.
ಗಂಡುಗಲಿ ಕೆ. ಮಂಜು ಅವರ ಬಿಂದಿಯಾ ಪ್ರೊಡಕ್ಷನ್ಸ್ ನಿರ್ಮಾಣದ, ರಾಷ್ಟ್ರಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯ ವಿಶಿಷ್ಠ ಪ್ರೇಮ ಕಥಾನಕವಿದೆ. ಮಲೆಯಾಳಂನ ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ.ವಿನೋದ್ ಭಾರತಿ ಅವರ ಛಾಯಾಗ್ರಹಣ, ವಿಕ್ರಂ ಮೋರ್, ಜಾಲಿ ಬಾಸ್ಟಿನ್, ವಿನೋದ್ ಅವರ ಸಾಹಸ ಸಂಯೊಜನೆ ಈ ಚಿತ್ರಕ್ಕಿದೆ. ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕ ಶ್ರೇಯಸ್ ಮಂಜು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ , ನಿಹಾಲ್ ರಾಜ್ ಉಳಿದ ಪಾತ್ರವರ್ಗದಲ್ಲಿದ್ದಾರೆ.