“ವಿಷ್ಣು ಪ್ರಿಯ” ಚಿತ್ರದ ‘ಏಳು ಗಿರಿಗಳ ಏಳು ಕಡಲಿನ’.. ಪ್ರೇಮಗೀತೆ ರೀಲಿಸ್
ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು, ಮತ್ತು ಮಲೆಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ ತೊಂಭತ್ತರ ದಶಕದಲ್ಲಿ ನಡೆಯುವ ಉತ್ಕಟ ಪ್ರೇಮ ಕಥೆ ಹೇಳುವ ಚಿತ್ರ ವಿಷ್ಣುಪ್ರಿಯ. ಬಿಂದ್ಯಾ ಮೂವೀಸ್ ಮೂಲಕ ಈ ಚಿತ್ರವನ್ನು ಡಾ. ಕೆ.ಮಂಜು ನಿರ್ಮಿಸಿದ್ದಾರೆ.
ಈ ಚಿತ್ರದ ಏಳು ಗಿರಿಗಳ ಏಳು ಕಡಲಿನ ಎಂಬ ಪ್ರೇಮಗೀತೆಯನ್ನು ಬಘೀರ ಖ್ಯಾತಿಯ ಶ್ರೀಮುರಳಿ ಬಿಡುಗಡೆ ಮಾಡಿದರು. ಚಿತ್ರದ ಹಾಡು ಮತ್ತು ಬಿಡುಗಡೆಯ ದಿನಾಂಕ ಘೋಷಣೆ ಕಾರ್ಯಕ್ರಮದಲ್ಲಿ ಶ್ರೀಮುರುಳಿ, ನಟಿ ಸಪ್ತಮಿ ಗೌಡ, ನಿರ್ಮಾಪಕ ರಮೇಶ್ ರೆಡ್ಡಿ, ಗೀತ ಸಾಹಿತಿ ಕವಿರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರಿಗೆ ವಿಷ್ಣುಪ್ರಿಯಾ ಎರಡನೇ ಚಿತ್ರ. ಮಲಯಾಳಂ, ತೆಲುಗು, ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಇವರು ರಾಷ್ಟ್ರಪ್ರಶಸ್ತಿಗೂ ಭಾಜನರಾಗಿದ್ದಾರೆ. ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಅವರಿಬ್ಬರ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ.
ವೇದಿಕೆಯಲ್ಲಿ ಮಾತನಾಡಿದ ಶ್ರೀಮುರಳಿ ಕೆಲ ಸಿನಿಮಾಗಳು ಇಷ್ಟವಾಗುತ್ತವೆ. ಕೆಲವು ಹತ್ತಿರವಾಗುತ್ತವೆ. ಈ ಸಿನಿಮಾ ಹತ್ತಿರವಾಗುತ್ತದೆ ಅಂತ ಹೇಳುತ್ತೇನೆ. ಶ್ರೇಯಸ್, ಪ್ರಿಯಾ ಅದ್ಭುತವಾಗಿ ಪರ್ಫಾರ್ಮ್ ಮಾಡಿದ್ದಾರೆ. ಶ್ರೇಯಸ್ ಅವರಲ್ಲಿ ಬದ್ದತೆ ಸಾಧಿಸುವ ಉತ್ಸಾಹವಿದೆ. ಎಲ್ಲರ ಜೀವನದಲ್ಲೂ ಒಂದು ಲವ್ ಎಪಿಸೋಡ್ ಇರುತ್ತದೆ. ಈ ಚಿತ್ರ ನೋಡಿದಾಗ ಅವರವರ ಲವ್ ಸ್ಟೋರಿ ನೆನಪಾಗುತ್ತದೆ, ಒಳ್ಳೇದಾಗಲಿ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ರಮೇಶ್ ರೆಡ್ಡಿ ಮಾತನಾಡಿ ಶ್ರೇಯಸ್ ನಮ್ಮ ಪಡ್ಡೆಹುಲಿ ಚಿತ್ರದಲ್ಲಿ ನಟಿಸಿದ್ದ. ಆತನ ಹೆಸರಲ್ಲೇ ಶ್ರೇಯಸ್ ಇದೆ ಎಂದರು.
ನಿರ್ದೇಶಕ ವಿಕೆ ಪ್ರಕಾಶ್ ಮಾತನಾಡಿ ಕನ್ನಡದಲ್ಲಿ ಮೊದಲು ಶ್ರೇಷ್ಠ ಸಿನಿಮಾಗಳು ಬಂದಿವೆ. ಅದರಲ್ಲಿ ಗಿರೀಶ್ ಕಾಸರವಳ್ಳಿ, ಬಿವಿ ಕಾರಂತ್ ಅವರ ಸಿನಿಮಾ ನೋಡಿ ಬೆಳೆದವರು ನಾವು. ಆ ಮೇಲೆ ಶ್ಯಾಮ್ ಬೆನಗಲ್, ಸತ್ಯ ಜಿತ್ ರೇ ಮುಂತಾದವರು ಉತ್ತಮ ಚಿತ್ರ ನೀಡಿದ್ದಾರೆ. ನಟ ಶ್ರೇಯಸ್ ಒಳ್ಳೆಯ ನಟನಾಗ ಬಲ್ಲ ಸಾಮರ್ಥ್ಯ ಇರುವ ನಟ. ಚಿತ್ರೀಕರಣಕ್ಕೂ ಮುನ್ನ ನಟಿ ಪ್ರಿಯಾ ವಾರಿಯರ್ ಜೊತೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇದು ಇವರಿಬ್ಬರ ಕೆಮಿಸ್ಟ್ರಿ ಇನ್ನಷ್ಟು ಚೆನ್ನಾಗಿ ಮೂಡಿ ಬರಲು ಸಹಕಾರಿಯಾಗಿದೆ. ಇನ್ನು ನಿರ್ಮಾಪಕ ಕೆ. ಮಂಜು ಯಾವುದರಲ್ಲಿಯೂ ಕಡಿಮೆ ಮಾಡಿಲ್ಲ,. ಚಿತ್ರ ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದರು.
ನಟ ಶ್ರೇಯಸ್ ಮಂಜು ಮಾತನಾಡಿ, ನನಗೆ ಹಣ ಮುಖ್ಯವಲ್ಲ, ಸರಸ್ವತಿ ಮುಖ್ಯ. ಹಣ ಮುಖ್ಯವಾಗಿದ್ದರೆ ಪಬ್ ಮಾಡಿಕೊಂಡು ಹಣ ಗಳಿಸುತ್ತಿದ್ದೆ, ಕಷ್ಟಪಟ್ಟು ಬೆಳೆದು ಮುಂದೆ ಬರಬೇಕು ಎನ್ನುವ ಛಲ ನನ್ನದು. ಮನೆಯಲ್ಲಿ ನಾನು ನಿರ್ಮಾಪಕ ಕೆ. ಮಂಜು ಅಪ್ಪ ಮಗ,. ಆದರೆ ಮನೆಯಾಚೆ ಅವರೊಬ್ಬ ಪಕ್ಕಾ ವ್ಯವಹಾರಸ್ಥ, ಈ ಕಾರಣಕ್ಕಾಗಿಯೇ ಚಿತ್ರ ವಿಳಂಬವಾಯಿತು ಎಂದು ಹೇಳಿದರು.
ನಟಿ ಪ್ರಿಯಾ ವಾರಿಯರ್ ಮಾತನಾಡಿ ಇದು ಕನ್ನಡದಲ್ಲಿ ಮೊದಲ ಚಿತ್ರ, ಆರಂಭದಲ್ಲಿ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದೆ. ಒಂದಷ್ಟು ವರ್ಷ ಗ್ಯಾಪ್ ಆದ ನಂತರ ಕನ್ನಡದ ಟಚ್ ಹೋಗಿದೆ. ಮುಂದಿನ ದಿನಗಳಲ್ಲಿ ಖಂಡಿತಾ ಕನ್ನಡದಲ್ಲಿ ಮಾತನಾಡುತ್ತೇನೆ. ವಿಷ್ಣು ಪ್ರಿಯಾದಲ್ಲಿ ಒಳ್ಳೆಯ ಕತೆ ಸಿಕ್ಕಿದೆ. ನಟ ಶ್ರೇಯಸ್ ಜೊತೆ ಸಾಕಷ್ಟು ಕಲಿತಿದ್ದೇನೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ನಿರ್ಮಾಪಕ ಕೆ, ಮಂಜು ಮಾತನಾಡಿ, ಪೆಬ್ರವರಿ 21 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು.ತೆಲುಗಿನ ಸಂಗೀತ ನಿರ್ದೇಶಕ ಗೋಪಿಸುಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ.
ಧಾರವಾಡ ಮೂಲದ ಸಿಂಧುಶ್ರೀ ಈ ಚಿತ್ರದ ಮೂಲ ಕಥೆಗಾರರು. ಆ ಕಥೆಯ ಒಂದು ಲೈನ್ ತಗೊಂಡು ಈ ಚಿತ್ರದ ಸ್ಕ್ರಿಪ್ಟ್ ಮಾಡಿಕೊಂಡಿರುವುದಾಗಿ ಕೆ
ಮಂಜು ಅವರೇ ಹೇಳಿದ್ದಾರೆ. ವಿ.ಕೆ. ಪ್ರಕಾಶ್, ಗೋಪಿಸುಂದರ್, ನಾಗೇಂದ್ರ ಪ್ರಸಾದ್ ಅವರಂಥ ತಂತ್ರಜ್ಞರನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಿಸಿದ್ದಾರೆ. ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆ.
ಫ್ಯಾಮಿಲಿ ವ್ಯಾಲ್ಯೂಸ್‌ಗೆ ಹೆಚ್ಚಿನ ಮಹತ್ವವಿದ್ದು, ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೇನೆಲ್ಲ ಆಗಿಹೋಯಿತು ಎಂದು ಈ ಚಿತ್ರ ಹೇಳುತ್ತದೆ. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ವಿನೋದ್ ಭಾರತಿ ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ.