“ಮಾರ್ಟಿನ್” ನಿರ್ಮಾಪಕರಿಗೆ ಏಕೆ ಈ ಮೋಸ…?
ಚಿತ್ರೋದ್ಯಮವೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ವರ್ಷ ಆರಂಭದಿಂದ ಇಲ್ಲಿವರೆಗೂ ಸರಿಸುಮಾರು 80ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದೆ. ಆದರೆ ಸಕ್ಸಸ್ ಎಲ್ಲಿ ಎಂದು ಹುಡುಕುವಂತಾಗಿದೆ. ಮರಳು ಮರಳುಗಾಡಿನಲ್ಲಿ ನೀರು ಸಿಕ್ಕಂತೆ ಆಗಾಗ ಬರುವ ಸ್ಟಾರ್ ನಟರುಗಳ ಚಿತ್ರಗಳು ಜೀವ ನೀಡುತ್ತಿರುವಾಗಲೇ ನಿರ್ಮಾಪಕರನ್ನು ಸಂಕಷ್ಟಕ್ಕೆ ಸಿಲುಕಿಸಿದರೆ ಚಿತ್ರ ಮಾಡುವುದಾದರೂ ಯಾರು..? ಬೆರಳೆಣಿಕೆಯಷ್ಟು ನಿರ್ಮಾಪಕರು ಮಾತ್ರ ದೊಡ್ಡ ಬಜೆಟ್ ಚಿತ್ರಗಳನ್ನ ಮಾಡ್ತಿದ್ದು , ಅವರಿಗೂ ಮೋಸ ಮಾಡಿದರೆ ಚಿತ್ರೋದ್ಯಮದ ಗತಿ ಏನು…
ಇದಕ್ಕೆಲ್ಲಾ ಪರಿಹಾರ ಇದೆಯಾ… ಅರ್ಥಮಾಡಿಕೊಳ್ಳಬೇಕಾದವರು ಯಾರು…
ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವೇ ನಿಗೂಢವಾಗಿದೆ.
ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದಂತಹ ನಿರ್ಮಾಪಕ ಉದಯ್ .ಕೆ. ಮೆಹ್ತಾ. ಲಾಭ ನಷ್ಟ ಎರಡನ್ನು ನೋಡಿದರೂ ಚಿತ್ರೋದ್ಯಮದಲ್ಲೇ ಭದ್ರವಾಗಿ ನೆಲೆ ಉರಬೇಕೆಂಬ ಮಹಾದಾಸೆಯೊಂದಿಗೆ ಬಹುಕೋಟಿ ವೆಚ್ಚದಲ್ಲಿ ಬಹುಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿರುವಂತಹ ಚಿತ್ರ “ಮಾರ್ಟಿನ್ “. ಚಿತ್ರದ ಶೀರ್ಷಿಕೆ ಹಾಗೂ ಬಜೆಟ್ ಗೆ ತಕ್ಕನಾದಂತ ತಂಡ ಇದ್ದಾಗ ಅಷ್ಟೇ , ಪ್ಯಾನ್ ಇಂಡಿಯಾ ಸದ್ದು ಮಾಡೋದಕ್ಕೆ ಸಾಧ್ಯ ಎನ್ನುವಂತಾಗಿದೆ. ಅದಕ್ಕೆ ಸೂಕ್ತ ನಾಯಕನಾಗಿ ಧ್ರುವ ಸರ್ಜಾ ಅಬ್ಬರಿಸಲು ಮುಂದಾದರೆ, ಬೆಳ್ಳಿ ಪರದೆ ಮೇಲೆ ಬಿಗ್ ಹಿಟ್ ನೀಡುತ್ತೇನೆ ಎಂಬ ಭರವಸೆಯೊಂದಿಗೆ ಸಾರಥ್ಯವನ್ನು ವಹಿಸಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್. ಈ ತ್ರಿಮೂರ್ತಿಗಳ ಕಾಂಬಿನೇಷನ್ ಬಗ್ಗೆ ಭರ್ಜರಿ ಚರ್ಚೆಯು ನಡೆದಿತ್ತು. ಇನ್ನು ಚಿತ್ರದ ಪೋಸ್ಟರ್ಗಳು ಕುತೂಹಲವನ್ನು ಮೂಡಿಸಿ , ಸಿನಿಮಾ ಯಾವಾಗ ತೆರೆಗೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು.
ಕಳೆದ ಒಂದು ವರ್ಷಗಳಿಂದ ಮಾರ್ಟಿನ್ ಸಿನಿಮಾ ಬಿಡುಗಡೆಗಾಗಿ ಧ್ರುವ ಸರ್ಜಾ ಅವರ ಅಭಿಮಾನಿಗಳು ಮತ್ತು ಸಿನಿಮಾರಂಗದವರು ಕಾಯುತ್ತಲೇ ಇದ್ದಾರೆ. ಆದರೆ, ಸಿನಿಮಾ ಬಿಡುಗಡೆಯ ದಿನಾಂಕ ಅನೇಕ ಬಾರಿ ಮುಂದೆ ಹೋಗಿದೆ. ಕಡೆಗೆ ಅಕ್ಟೋಬರ್ 2024ರಲ್ಲಿ ಚಿತ್ರ ತೆರೆಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಮಾರ್ಟಿನ್ ಸಿನಿಮಾ ಹೀಗೆ ತಡವಾಗಲು ಪ್ರಮುಖ ಕಾರಣ ಗ್ರಾಫಿಕ್ಸ್ ಮತ್ತು ವಿಎಫ್ ಎಕ್ಸ್ ಎನ್ನುವುದು ಸದ್ಯಕ್ಕೆ ತಿಳಿದು ಬಂದಿರುವ ವಿಚಾರ.
Why this cheating for the producers of “Martin”.
ನಿರ್ಮಾಪಕರಿಂದ ಮಾರ್ಟಿನ್ ಚಲನ ಚಿತ್ರದ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಮಾರತಹಳ್ಳಿಯಲ್ಲಿರುವ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆ ಸರಿಯಾದ ಸಮಯಕ್ಕೆ ಕೆಲಸ ಮುಗಿಸಿಕೊಟ್ಟಿಲ್ಲ. ಜೊತೆಗೆ 2.5 ಕೋಟಿ ರೂಪಾಯಿಗಳನ್ನು ಪಡೆದು ನಂಬಿಕೆ ದ್ರೋಹ ಮಾಡಿ ವಂಚಿಸಿದೆ. ಈ ಕುರಿತು ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರು ನೀಡಿದ್ದ ದೂರಿನ ಆಧಾರದಲ್ಲಿ ಜೂನ್ 5.6.2024ರಂದು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಕೂಡಾ ದಾಖಲಾಗಿದೆ.
ಸದ್ಯಕ್ಕೆ ಡಿಜಿಟಲ್ ಟೆರೇನ್ ಸಂಸ್ಥೆಯ ಮುಖ್ಯಸ್ಥ ಸತ್ಯಾ ರೆಡ್ಡಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದು, ಪರಪ್ಪನ ಅಗ್ರಹಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪಿ.ಎಸ್.ಐ. ಆದರ್ಶಗೌಡ ಜೆ. ಅವರು ಮಾರ್ಟಿನ್ ಚಿತ್ರದ ನಿರ್ಮಾಪಕರಿಗೆ ಆಗಿರುವ ಹಣ ವಂಚನೆಯ ಕುರಿತಾಗಿ ವಿಚಾರಣೆ ನಡೆಸುತ್ತಿದ್ದು, ಚಿತ್ರತಂಡದ ಅನೇಕ ಸದಸ್ಯರನ್ನು ಸಹಾ ವಿಚಾರಣೆ ಮಾಡಿ, ಹೇಳಿಕೆ ಪಡೆಯಲಾಗಿದೆ. ಮಾರ್ಟಿನ್ ಚಿತ್ರತಂಡದ ಒಳಗೆ ಅನೇಕ ರೀತಿಯ ಅವ್ಯವಹಾರಗಳು ನಡೆದಿವೆ ಎನ್ನಲಾಗುತ್ತಿದೆ. ಪೊಲೀಸರ ತನಿಖೆ ಮುಗಿದ ಮೇಲೆ ಪೂರ್ತಿ ವಿಚಾರ ಗೊತ್ತಾಗಲಿದೆ.
ಇದರ ನಡುವೆ ನಿರ್ಮಾಪಕರು ಕೂಡ ತಮಗಾದ ನೋವನ್ನ ಎಲ್ಲೂ ಹೇಳಿಕೊಳ್ಳದೆ ಸಿನಿಮಾವನ್ನ ಹೊರತರುವ ತವಕದಲ್ಲಿ ಮುಂದಾಗಿದ್ದಾರೆ. ಹಾಗಾಗಿ ಮುಂಬೈನಲ್ಲಿ ದೊಡ್ಡ ಮಟ್ಟದ ಪತ್ರಿಕಾಗೋಷ್ಠಿಯನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಂಡು ಆಯ್ದ ಪತ್ರಕರ್ತರನ್ನು ಕರೆಸಿಕೊಳ್ಳುವ ಉದ್ದೇಶ ಮಾಡಿದ್ರಂತೆ , ಆದರೆ ಕಾರಣಾಂತರಗಳಿಂದ ಅದು ಕೂಡ ಕೈಕೊಟ್ಟಿದೆ. ಎಲ್ಲದಕ್ಕೂ ಸಮಯ , ಸಂದರ್ಭ, ಅದೃಷ್ಟ ಒದಗಿ ಬರಬೇಕು. ಏನೇ ಆಗಲಿ ಮಾರ್ಟಿನ್ ಎಂಬ ಒಂದು ದೊಡ್ಡ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸನ್ನ ಕಂಡು ನಿರ್ಮಾಪಕರು ಸೇಫ್ ಆಗುವುದು ಬಹಳ ಮುಖ್ಯ. ಆಗ ಮಾತ್ರ ಚಿತ್ರೋದ್ಯಮ ಬೆಳವಣಿಗೆಯ ಜೊತೆಗೆ ಚಿತ್ರ ನಿರ್ಮಾಪಕರು ಉಳಿಯಲು ಸಾಧ್ಯ.