Cini NewsSandalwood

“ಯಾಕೆ” ಚಿತ್ರದ ಸಂಸ್ಥೆಯ ಲೋಗೋ ಹಾಗೂ ಟೈಟಲ್ ಬಿಡುಗಡೆ

ಬಣ್ಣದ ಬದುಕಿನ ಆಕರ್ಷಣೆಯೇ ವಿಶೇಷ. ಯಾವಾಗ , ಯಾರನ್ನ ತನ್ನತ್ತ ಸೆಳೆಯುತ್ತದೆ ಎಂಬುದನ್ನು ಅರಿವುದು ಬಹಳ ಕಷ್ಟ. ಚಿತ್ರ ಚಟುವಟಿಕೆಯಲ್ಲಿ ಇದ್ದುಕೊಂಡೆ ಒಂದಷ್ಟು ಗೆಳೆಯ ಗೆಳತಿಯರ ತಂಡ ಸೇರಿಕೊಂಡು ಪೂರ್ವ ಸಿದ್ಧತೆಯೊಂದಿಗೆ ಪಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಮುಂದಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಶೀರ್ಷಿಕೆ ಬೇರೆ ಬೇರೆ ಹೆಸರಿನಲ್ಲಿ ಮೂಡಿಬರಲಿದೆ.

ಈ ಸಂಸ್ಥೆಯ ಲೋಗೋ ಬಿಡುಗಡೆ ಹಾಗೂ ಚಿತ್ರದ ಟೈಟಲ್ ರಿವಿಲ್ ಕಾರ್ಯಕ್ರಮವನ್ನು ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಒರಟ ಪ್ರಶಾಂತ್ ಸಿರಿ ಸಿನಿಮಾಸ್ ಸಂಸ್ಥೆಯ ಲೋಗೋ ಲಾಂಚ್ ಮಾಡಿದರು.

ವೃಕ್ಷಕ್ಕೆ ನೀರೆರೆಯುವ ಗ್ರಾಫಿಕ್ ರೂಪದಲ್ಲಿ ಲೋಗೋ ಹೊರಬಂದಿದ್ದು, ಅದೇ ರೀತಿ ಹೆಚ್ಚು ಹೆಚ್ಚು ಈ ಸಂಸ್ಥೆಯಿಂದ ಚಿತ್ರ ನಿರ್ಮಾಣವಾಗಲಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಇನ್ನು ಮತ್ತೊಬ್ಬ ನಟ ಶ್ರೀನಗರ ಕಿಟ್ಟಿ ಚಿತ್ರದ ಕನ್ನಡ ಹಾಗೂ ತೆಲುಗು ಟೈಟಲ್ ಅನ್ನ ಬಿಡುಗಡೆ ಮಾಡಿದರು. ಕನ್ನಡದಲ್ಲಿ “ಯಾಕೆ ” ಎನ್ನುವ ಶೀರ್ಷಿಕೆ ಇಟ್ಟಿದ್ದು ತೆಲುಗಿನಲ್ಲಿ “ಸಂಸ್ಥಾನಂ” ಎಂದು ಹೆಸರು ಇಡಲಾಗಿದೆ. ಎರಡು ಭಾಷೆಯಲ್ಲಿ ಸೀತಾ ಹರ್ಷವರ್ಧನ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಯುವ ನಿರ್ದೇಶಕ ಪ್ರೇಮ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು , ಚಿತ್ರ ಉತ್ತಮವಾಗಿ ಮೂಡಿಬರಲಿ ಎಂದು ಶುಭ ಕೋರಿದರು.

ಇನ್ನೂ ನಿರ್ಮಾಪಕ ಟಿ.ಪಿ. ಸಿದ್ದರಾಜ್ , ಕಲಾವಿದೆ ಅಂಬುಜಾ ಸಿದ್ದರಾಜ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ತಂಡಕ್ಕೆ ಶುಭವನ್ನ ಹಾರೈಸಿದರು.

ಇನ್ನು ಈ ಚಿತ್ರದ ನಿರ್ಮಾಪಕಿ ಸೀತಾ ಹರ್ಷವರ್ಧನ್ ಮಾತನಾಡಿ ನಾನು ರಂಗಭೂಮಿ ಕಲಾವಿದೆ , ಹಿಂದುಸ್ತಾನಿ ಸಂಗೀತದ ಬಗ್ಗೆ ಒಲವಿತ್ತು, ಲೆಕ್ಚರರ್ ಆಗಿದ್ದೆ, ಕನ್ನಡ ಚಿತ್ರದ ಮೇಲೆ ಅಪಾರವಾದ ಪ್ರೀತಿ , ನನ್ನ ಕುಟುಂಬದವರ ಪ್ರೋತ್ಸಾಹ , ಸಹಕಾರದೊಂದಿಗೆ ನಾನು ಸಿನಿಮಾ ಕ್ಷೇತ್ರಕ್ಕೆ ಬಂದು ಕನ್ನಡದ ಹಲವು ಚಿತ್ರಗಳು ಮತ್ತು ಧಾರಾವಾಹಿಯಲ್ಲಿ ನಟಿಸಿದ್ದೇನೆ ಜೊತೆಗೆ ತೆಲುಗು ದಾರವಾಹಿಗಳಲ್ಲೂ ನಟಿಸಿದ್ದೇನೆ ಈ ನಡುವೆ ನಿರ್ದೇಶಕ ಪ್ರೇಮ್ ಅವರು ಹೇಳಿದ ಕಥೆ ಇಷ್ಟವಾಯಿತು ಹೀಗಾಗಿ ನಿರ್ಮಾಣಕ್ಕೆ ಮುಂದಾಗಿದ್ದೇವೆ.

ಈ ಚಿತ್ರವನ್ನು ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷ ಏಪ್ರಿಲ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಹಾಕಿಕೊಳ್ಳಲಾಗಿದೆ. ಇನ್ನು ಹಲವಾರು ಕಥೆಗಳು ಡಿಸ್ಕಶನ್ ಮಾಡುತಿದ್ದೇವೆ. ಒಂದರ ಹಿಂದೆ ಒಂದರಂತೆ ಚಿತ್ರ ಮಾಡುವ ಆಸೆ ನನ್ನದು, ನಮ್ಮ ಪ್ರಯತ್ನಕ್ಕೆ ಅಮೆಜಾನ್ ಮತ್ತು ಹೈದರಾಬಾದಿನ ಖುಷಿ ಸಿನಿಮಾ ಸಂಸ್ಥೆ ಜೊತೆಗೂಡಿದೆ ಇದರಿಂದಾಗಿ ಚಿತ್ರ ನಿರ್ಮಾಣಕ್ಕೆ ಮತ್ತಷ್ಟು ಬಲ ಬಂದಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವ ಉದ್ದೇಶವಿದೆ. ನಿಮ್ಮೆಲ್ಲರ ಸಹಕಾರ , ಪ್ರೀತಿ ಇರಲಿ ಎಂದು ಕೇಳಿಕೊಂಡರು.

ಈ ಚಿತ್ರದ ನಿರ್ದೇಶಕ ಪ್ರೇಮ್ ಮಾತನಾಡಿ ನನಗೆ ಜನ್ಮ ಕೊಟ್ಟ ತಾಯಿ ಒಂದು ಕಡೆಯಾದರೆ. ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳಲು ದಾರಿ ತೋರಿದ ತಾಯಿ ನಮ್ಮ ನಿರ್ಮಾಪಕಿ ಎನ್ನುತ್ತಾ, 2007ರಲ್ಲಿ ನಿರ್ದೇಶಕ ಪಿ.ಎನ್. ಸತ್ಯ ಬಳಿ ಸಹಾಯಕನಾಗಿ ಕೆಲಸಕ್ಕೆ ಸೇರಿದೆ , ತದನಂತರ ತೆಲುಗು ನಲ್ಲಿ ಸೂರ್ಯ ಕಿರಣ ಜೊತೆ ಕೆಲಸ ಮಾಡಿದ್ದೆ.

ಉಪೇಂದ್ರ ಜೊತೆ ಹೋಂ ಮಿನಿಸ್ಟರ್ ಚಿತ್ರದಲ್ಲೂ ಕೆಲಸ ಮಾಡಿದ ಅನುಭವವಿದೆ. ಸರಿಸುಮಾರು 14 ವರ್ಷಗಳ ಕನಸು ಈಗ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬರುತ್ತಿದ್ದೇನೆ. ಕನ್ನಡದಲ್ಲಿ ಮೊದಲ ಚಿತ್ರ ಒಳ್ಳೆಯ ಕಂಟೆಂಟ್ ಇಟ್ಕೊಂಡು ಚಿತ್ರವನ್ನ ಆರಂಭಿಸಿದ್ದೇನೆ. ಮೈತಲಾಜಿಕಲ್ ಜೊತೆ ಸಸ್ಪೆನ್ಸ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ನವಂಬರ್ ನಲ್ಲಿ ಚಿತ್ರೀಕರಣ ಆರಂಭ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಖುಷಿ ಸಿನಿಮಾ ಸಂಸ್ಥೆಯ ಪಾಲುದಾರರು ಡಾ. ರೋಜಾ ಹಾಗೂ ಸಿಇಓ ರಾಜೀವ್ ಚಿತ್ರದ ಬಗ್ಗೆ ಮಾಹಿತಿ ನೀಡಿ ಹೊಸ ಹೊಸ ಕಂಟೆಂಟ್ ಗಳು ಬಂದರೆ ಅವುಗಳನ್ನು ಚಿತ್ರ ನಿರ್ಮಾಣ ಮಾಡಲು ಸಂಸ್ಥೆ ಸಹಕಾರ ನೀಡಲಿದೆ. ಓ.ಟಿ.ಟಿ ಅಮೆಜಾನ್ ನಲ್ಲೂ ಕೂಡ ನಮ್ಮ ಚಿತ್ರ ಮಾತುಕತೆ ಆಗಿದೆ. ತೆಲುಗಿನಲ್ಲಿ ನಾವು ಬಿಡುಗಡೆ ಮಾಡುತ್ತಿದ್ದೇವೆ.

ನಾನು ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ಅಮೆಜಾನ್ , ನೆಟ್ ಫಿಕ್ಸ್ ಫ್ಲಾಟ್ ಫಾರ್ಮ್ ನಲ್ಲಿ ಯಾವ ರೀತಿಯ ಕಂಟೆಂಟ್ ಬೇಕು ಎಂಬುದರ ಬಗ್ಗೆ ಮಾತನಾಡಿದ್ವಿ, ಅದರ ಕಾರ್ಯರೂಪವೂ ನಡೆಯುತ್ತಿತ್ತು , ಆದರೆ ಮುಂದುವರಿಯುವ ಅದೃಷ್ಟ ಇರಲಿಲ್ಲ , ಈಗ ಮತ್ತೆ ನಾವು ಬಂದಿದ್ದೇವೆ ವಿಭಿನ್ನ ಕಂಟೆಂಟ್ ಇರುವ ಚಿತ್ರಗಳು ಬಂದರೆ ಖಂಡಿತ ಅದಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತೆ ಎಂದು ಹೇಳಿದರು.

ಇನ್ನು ಈ ಚಿತ್ರದ ನಾಯಕ ಉತ್ತಮ್ ಮಾತನಾಡುತ್ತ ನಾನು ರಂಗಭೂಮಿ ಕಲಾವಿದ, ನಿರ್ದೇಶನ ವಿಭಾಗದಲ್ಲಿ ಸಹಾಯಕನಾಗಿ ಹಲವಾರು ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಇದು ನನ್ನ ಮೊದಲ ಚಿತ್ರ. ಇದೊಂದು ಹಾರರ್ ಚಿತ್ರವಾಗಿದ್ದು, ಅರುಂಧತಿ ಚಿತ್ರ ನೆನಪಿಗೆ ಬರುವಂತಿದೆ. ಅವಕಾಶ ನೀಡಿದ ನಿರ್ದೇಶಕ , ನಿರ್ಮಾಪಕರಿಗೆ ಧನ್ಯವಾದ ಎಂದು ಹೇಳಿದರು.

ಇನ್ನು ನಾಯಕಿಯಾಗಿ ಅಮಿತಾ ರಂಗನಾಥ್ ಅಭಿನಯಿಸಿದ್ದು, ಈಗಾಗಲೇ ತೆಲುಗು, ತಮಿಳು ಸೇರಿದಂತೆ ಹಿಂದಿಯ ವೆಬ್ ಸೀರೀಸ್ ನಲ್ಲಿ ಅಭಿನಯಿಸಿದ್ದು, ಇದು ಕನ್ನಡದಲ್ಲಿ ನಾಲ್ಕನೇ ಚಿತ್ರವಾಗಿದೆ. ಇದೊಂದು ನೈಜ ಘಟನೆಗಳ ಆಧಾರವಾದ ಚಿತ್ರವಾಗಿದ್ದು, ನನ್ನ ಪ್ರತಿಭೆ ತೋರಿಸಲು ಒಂದು ಉತ್ತಮ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಈ ಚಿತ್ರಕ್ಕೆ ರುದ್ರಮುನಿ ಛಾಯಾಗ್ರಹಣ ಮಾಡುತ್ತಿದ್ದು, ಇನ್ನಷ್ಟು ತಾಂತ್ರಿಕ ವರ್ಗ ಹಾಗೂ ಕಲಾವಿರ ಬಳಗದ ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಿದ್ದಾರಂತೆ.

error: Content is protected !!