“ಯುವ” ಎಂಟ್ರಿ ಬಗ್ಗೆ ನಟ ಯುವರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತು.
ವರನಟ ಡಾ. ರಾಜ್ ಕುಮಾರ್ ವಂಶದ ಕುಡಿ , ರಾಘವೇಂದ್ರ ರಾಜ್ ಕುಮಾರ್ ರವರ ಎರಡನೇ ಪುತ್ರ ಯುವರಾಜ್ ಕುಮಾರ್ ಅಭಿನಯಿಸಿರುವ “ಯುವ” ಚಿತ್ರ ಇದೇ ಮಾರ್ಚ್ 29ರಂದು ರಾಜ್ಯಾದ್ಯಂತ ರಾರಾಜಿಸಲಿದೆ. ಅದ್ದೂರಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣದ ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ.
ಸದ್ಯ ಬಿಡುಗಡೆ ಆಗಿರುವ ಹಾಡು ಬಾರಿ ವೈರಲ್ ಆಗಿದ್ದು , ಇದೇ 23ರಂದು ಹೊಸಪೇಟೆಯಲ್ಲಿ ಅದ್ದೂರಿ ಇವೆಂಟ್ ಮೂಲಕ ಯುವ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಗಾಗಲೇ ಚಿತ್ರತಂಡ ಪ್ರಚಾರದ ಕಾರ್ಯವನ್ನು ಆರಂಭಿಸಿದ್ದು , ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಮಾಧ್ಯಮದವರನ್ನು ಆಹ್ವಾನಿಸಿದ್ದರು.
ಈ ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತನಾಡುತ್ತಾ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರೀಕರಣದ ಸಂದರ್ಭದಲ್ಲಿ ಯುವರಾಜ್ ಕುಮಾರ್ ಗೆ ಒಂದು ಚಿತ್ರ ಮಾಡಬೇಕೆಂಬ ಮಾತುಕತೆ ನಡೆದಿತ್ತು. 2022 ರಲ್ಲಿ ಚರ್ಚೆ ನಡೆದು , 2023 ಮಾರ್ಚ್ ನಲ್ಲಿ ಚಿತ್ರ ಆರಂಭಗೊಂಡು ಅಕ್ಟೋಬರ್ ನಲ್ಲಿ ಚಿತ್ರ ಕಂಪ್ಲೀಟ್ ಆಗಿತ್ತು ಎಂದು ಚಿತ್ರ ಸಾಗಿ ಬಂದ ಹಾದಿಯನ್ನು ಹೇಳಿದರು. ಈ ಚಿತ್ರದಲ್ಲಿ ಅಪ್ಪ-ಮಗನ ಸಂಘರ್ಷದ ಕಥೆ ಮುಖ್ಯ ವಸ್ತು ಆಗಿದ್ದರು ಇವರಿಬ್ಬರ ಪ್ರೀತಿ ಸೆಳೆಯುವಂತಿದೆ.
ಈ ಒಂದು ಚಿತ್ರದಲ್ಲಿ ಕಾಲೇಜ್ ಲೈಫ್ ಹಾಗೂ ಬದುಕಿನ ಪರಿಚಯ ಎರಡು ಆಗಲಿದೆ. ಹಾಸ್ಟೆಲ್ ನಲ್ಲಿ ಫೈನಲ್ ಇಯರ್ ಇಂಜಿನಿಯರಿಂಗ್ ಓದುವ ಹುಡುಗ ಜೀವನದ ಕಡೆ ಮುಖ ಮಾಡಿದಾಗ ಎದುರಾಗುವ ಒಂದಷ್ಟು ಸಂದರ್ಭಗಳು ಚಿತ್ರದ ಸಾರವನ್ನು ಹೇಳುತ್ತದೆ. ಯುವ ಈ ಚಿತ್ರದಲ್ಲಿ ಡೆಲಿವರಿ ಬಾಯ್ ಯಾಗಿ ಕೂಡ ಕಾಣಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ಯಾವುದೇ ಆಡಂಬರ , ಅಬ್ಬರ ಇಲ್ಲದಿದ್ದರೂ ಚಿತ್ರದ ಕಥೆಗೆ ಪೂರಕವಾಗಿ ಪಾತ್ರಗಳು ಜೀವ ತುಂಬುತ್ತಾ ಹೋಗಿದ್ದಾರೆ. ಯುವ ಬಹಳ ಮೆಚ್ಯೂರ್ಡ್ ಪಾತ್ರವನ್ನು ನಿರ್ವಹಿಸಿದ್ದು, ಇವತ್ತಿನ ಯುವ ಜನತೆ ಹಾಗೂ ಬದುಕಿನ ಸಂಬಂಧಗಳ ಮೌಲ್ಯಗಳ ಕುರಿತಾಗಿಯೂ ಚಿತ್ರ ಬೆಳಕು ಚೆಲ್ಲುತ್ತದೆ. ಯುವ ದೊಡ್ಡ ಮನೆಯ ಕುಡಿ ಆಗಿದ್ದರೂ ತಾತ , ದೊಡ್ಡಪ್ಪ , ಚಿಕ್ಕಪ್ಪರ ಯಾವುದೇ ಮ್ಯಾನರಿಸಂ ಇಲ್ಲದೆ ಅವರದೇ ಒಂದು ಸ್ಟೈಲ್ ಈ ಚಿತ್ರದ ಮೂಲಕ ಹೊರ ಬಂದಿದೆ.
ಈ ಚಿತ್ರದ ಆಕ್ಷನ್ ಹಾಗೂ ಸಾಂಗ್ಸ್ ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ. ಇನ್ನು ಈ ಚಿತ್ರದ ನಿರ್ಮಾಣದ ಸಂಸ್ಥೆ ಹೊಂಬಾಳೆ ಫಿಲಂಸ್ ಫುಲ್ ಫ್ರೀಡಂ ಕೊಟ್ಟಿದ್ದು , ಒಂದು ಉತ್ತಮ ಚಿತ್ರ ಹೊರಬರಲು ಸಂಪೂರ್ಣ ಬೆಂಬಲವನ್ನ ನೀಡಿದ್ದಾರೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಹಳಷ್ಟು ಯುವ ಪ್ರತಿಭೆಗಳ ಜೊತೆಗೆ ಅನುಭವಿ ಕಲಾವಿದರಾದ ಅಚ್ಚುತ್ ಕುಮಾರ್ , ಪ್ರಕಾಶ್ ರಾಜ್ , ಕಿಶೋರ್ ಕುಮಾರ್ , ಸುಧಾರಾಣಿ , ನಟನ ಪ್ರಶಾಂತ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಇನ್ನು ತಾಂತ್ರಿಕವಾಗಿ ಅಜಿನೀಶ್ ಲೋಕನಾಥ್ ಸಂಗೀತ , ಶ್ರೀಶ ಕುದುವಳ್ಳಿ ಛಾಯಾಗ್ರಹಣ , ಆಶಿಕ್ ಸಂಕಲನವಿದೆ. ಇದೇ 29ರಂದು ಶುಕ್ರವಾರ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬುದು ನಿರ್ಮಾಪಕರ ಆಶಯ ಎಂದು ಚಿತ್ರದ ಕುರಿತು ಒಂದಷ್ಟು ವಿವರಗಳನ್ನು ನೀಡಿದರು.
ಯುವ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಬರಲು ಸಿದ್ದರಾಗಿರುವ ನಟ ಯುವರಾಜ್ ಕುಮಾರ್ ಮಾತನಾಡುತ್ತಾ ನಾನು ಚಿಕ್ಕ ವಯಸ್ಸಿನಿಂದ ಆಕ್ಟರ್ ಆಗಬೇಕೆಂಬ ಆಸೆ ಇತ್ತು. ನಾನು ಇಲ್ಲಿವರೆಗೂ ಯಾರತ್ರನು ಹೇಳಿರಲಿಲ್ಲ , ನಾನು ಒಂದು ಡಿಗ್ರಿ ಮಾಡಿರಬೇಕು, ಯಾಕೆಂದರೆ ಸಿನಿಮಾದಲ್ಲಿ ಫ್ಯೂಚರ್ ಇಲ್ಲ ಅಂದ್ರೆ ಬ್ಯಾಕಪ್ಗಾಗಿ ಆರ್ಕಿಟೆಕ್ಚರ್ ಕಂಪ್ಲೀಟ್ ಮಾಡಿದೆ. ನಮ್ಮ ತಂದೆ ತಾಯಿಗೂ ಒಂದು ಕಾನ್ಫಿಡೆನ್ಸ್ ಇರುತ್ತೆ ಮಗ ಓದಿದ್ದಾನೆ ಅಂತ , ಎಜುಕೇಶನ್ ಕಂಪ್ಲೀಟ್ ಆದಮೇಲೆ.
ಫಿಲಂ ಟ್ರೈನಿಂಗ್ ಮಾಡಿ ಕಾನ್ಫಿಡೆನ್ಸ್ ಬಂದಮೇಲೆ ನಾನು ಎಂಟ್ರಿ ಕೊಟ್ಟಿದ್ದು, ಇದು ನನ್ನ ಮೊದಲ ಚಿತ್ರವಾಗಿದ್ದು , ನನಗೂ ಬಹಳಷ್ಟು ರೆಸ್ಪಾನ್ಸಿಬಿಲಿಟಿ ಇದೆ. ಎಲ್ಲಾ ರೀತಿಯ ಆಡಿಯನ್ಸ್ ಗೂ ನನ್ನ ಚಿತ್ರ ಕನೆಕ್ಟ್ ಆಗುತ್ತೆ ಎಂಬ ಭರವಸೆ ನನಗಿದೆ. ನಾನು ಕೂಡ ನನ್ನ ಸಂಪೂರ್ಣ ಎಫರ್ಟ್ಸ್ ಅನ್ನ ಈ ಚಿತ್ರದಲ್ಲಿ ಹಾಕಿದ್ದೇನೆ. ನಾನು ಶೂಟಿಂಗ್ ಸ್ಪಾಟ್ ನಲ್ಲಿ ಬಹಳಷ್ಟು ಹಿರಿಯ ಕಲಾವಿದರ ಜೊತೆ ಅಭಿನಯಿಸಿ ಕಲ್ತಿದ್ದು ನನಗೆ ತುಂಬಾ ಪ್ರಯೋಜನ ಆಗಿದೆ.
ಇನ್ನು ಫೈಟಿಂಗ್ , ಸಾಂಗ್ಸ್ ಕೂಡ ಅಷ್ಟೇ ಜವಾಬ್ದಾರಿಯುತವಾಗಿ ಮಾಡಿದ್ದೇನೆ. ಇಡೀ ಟೀಮ್ ನನಗೆ ಬಹಳಷ್ಟು ಹೇಳಿಕೊಟ್ಟಿದೆ. ನಾನು ನನ್ನ ತಾತ , ದೊಡ್ಡಪ್ಪ , ಚಿಕ್ಕಪ್ಪ ಅಭಿನಯಿಸಿರುವ ಚಿತ್ರಗಳನ್ನು ನೋಡಿ ಒಂದಷ್ಟು ಹವಾ ಭಾವ ಗಳನ್ನ ಕೂಡ ಕಲ್ತಿದ್ದೇನೆ. ಎಲ್ಲವೂ ನನ್ನ ಸಿನಿಮಾ ಕೆರಿಯರ್ ಗೆ ಸಹಾಯ ವಾಗುತ್ತದೆ. ನನಗೂ ಮೊದಲೇ ನಿರ್ದೇಶಕ ಆನಂದ್ ರಾಮ್ ಜೊತೆ ಕೆಲಸ ಮಾಡಬೇಕೆಂಬ ಆಸೆ ಇತ್ತು, ಅದು ನನ್ನ ಮೊದಲ ಚಿತ್ರದ ಮೂಲಕ ಈಡೇರಿದೆ.
ಮುಂದೆ ಅವರು ಯಾವಾಗ ಕರೆದರೂ ನಾನು ಸಿನಿಮಾ ಮಾಡಲು ಸಿದ್ಧ ಎಂದರು. ಹಾಗೆಯೇ ಹೊಂಬಾಳೆ ಫಿಲಂಸ್ ವಿಜಯ್ ಕಿರಗುಂದೂರ್ ಟೀಮ್ ಜೊತೆ ನನ್ನ ಟೈ ಅಪ್ ಇನ್ನು ಮುಂದೆಯೂ ಮುಂದುವರೆಯುತ್ತದೆ. ಬಹಳಷ್ಟು ಸಮಯ ಕೊಟ್ಟಿದ್ದಾರೆ. ಈ ಒಂದು ಚಿತ್ರ ಅಚ್ಚುಕಟ್ಟಾಗಿ ಹೊರಬರಲು ಎಲ್ಲರ ಸಹಕಾರ ಸಿಕ್ಕಿದೆ. ನೀವೆಲ್ಲರೂ ಸಿನಿಮಾ ನೋಡಿ ನಮ್ಮನ್ನ ಹರಿಸಿ ಬೆಳೆಸಿ ಎಂದು ಕೇಳಿಕೊಂಡರು. ಒಟ್ಟಾರೆ ಬಹಳಷ್ಟು ನಿರೀಕ್ಷೆ ಇರುವ ಈ ಚಿತ್ರದ ಕುರಿತು ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಯುವ ರಾಜ್ ಕುಮಾರ್ ಸುಧೀರ್ಘವಾಗಿ ಮಾತನಾಡಿದರು.